ಹಲಸುಬಾಳು ಗ್ರಾಮದ ಬಂಡಿ ದಾರಿ ತೆರವುಗೊಳಿಸಲು ಒತ್ತಾಯ
ಚಿಕ್ಕಮಗಳೂರು ಸೆ.14: ಹಲಸುಬಾಳು ಗ್ರಾಮದ ನಕ್ಷೆಯಲ್ಲಿರುವ ಬಂಡಿ ದಾರಿಯನ್ನು ತೆರವುಗೊಳಿಸಿ ಕೊಡುವಂತೆ ಒತ್ತಾಯಿತಿ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ರೋಷನ್ ಬೇಗ್‍ಗೆ ಮನವಿ ಸಲ್ಲಿಸಿದರು.
ತಾಲೂಕಿನ ಹಲಸುಬಾಳು ಗ್ರಾಮದ ಸ.ನಂ.207, 208, 209 ಮತ್ತು 211ರಲ್ಲಿ ರವಿಚಂದ್ರ, ಇಂದ್ರಮ್ಮ, ಚಂದ್ರಮ್ಮ, ಮಕ್ಷ್ಮೀಮಣಿ ಎಂಬ ದಲಿತ ಕುಟುಂಬಗಳಿಗೆ ಸರ್ಕಾರ 1971ರಲ್ಲಿ ದರಖಾಸ್ತು ಮೂಲಕ 4 ಎಕರೆ ಭೂಮಿಯನ್ನು ಮಂಜೂರು ಮಾಡಿದೆ. ಈ ಜಮೀನು ಇವರದೇ ಸ್ವಾಧೀನದಲ್ಲಿದ್ದು, ಈ ಭೂಮಿಯಲ್ಲಿ ಪ್ರತಿವರ್ಷ ಜೋಳ ಮತ್ತು ಶುಂಠಿ ಬೆಳೆಯನ್ನು ಬೆಳೆಯುತ್ತಿದ್ದಾರೆ. ಆದರೆ ಈ ಗ್ರಾಮದ ಸವರ್ಣೀಯರು ದಲಿತರನ್ನು ಜಾಗ ಖಾಲಿ ಮಾಡುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ದಲಿತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಯನ್ನು ಸವರ್ಣೀಯರು ನಾಸಪಡಿಸವುದು, ಬೆದರಿಕೆ ಹಾಕುವುದು, ಜಾತಿ ನಿಂಧನೆ ಮಾಡುವುದು, ದಾರಿಯಲ್ಲಿ ನಡೆಯದಂತೆ ಅಡ್ಡಗಟ್ಟುವುದು ಮಾಡುತ್ತಿದ್ದಾರೆ. ಈ ವಿಷಯವನ್ನು ಈ ಹಿಂದೆ ಜಿಲ್ಲಧಿಕಾರಿಗಳ ಗಮನಕ್ಕೆ ತರಲಾಗಿದ್ದರೂ ಯಾವುದೇ ಪ್ರಯೋಜನವೂ ಆಗಿಲ್ಲ. ಈ ಹಿಂದೆ ರಾಜಸ್ವ ನಿರೀಕ್ಷಕರು ಸರ್ವೇ ಅಧಿಕಾರಿಗಳು ಹಲಸುಬಾಳು ಗ್ರಾಮಕ್ಕೆ ಭೇಟಿ ನೀಡಿ ನೊಂದ ಕುಟುಂಬಗಳ ಜಾಗ ಸರ್ವೇ ಮಾಡಿ ಸಂಚರಿಸುವ ದಾರಿ ಇದೆ ಎಂಬುದನ್ನು ಗುರುತಿಸಲಾಗಿತ್ತು. ಆದರೆ ಇರುವ ದಾರಿಯನ್ನು ಸವರ್ಣೀಯರು ನಡೆದಾಡಲು ಬಿಡುತ್ತಿಲ್ಲ ಎಂದು ದೂರಿದರು.
ಈ ವಿಚಾರದಲ್ಲಿ ಹಿಂದೆ ಸವರ್ಣೀಯರು ಮಾರಂಂತಿಕ ಹಲ್ಲೆ ನಡೆಸಿದ್ದನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೂ ತರಲಾಗಿದೆ. ಆದ್ದರಿಂದ ಈ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿ ದಲಿತರು ನಡೆದಾಡಲು ದಾರಿಯನ್ನು ಬಿಡಿಸಿ ಕೊಡಬೇಕು. ತಪ್ಪಿಸದರೆ ತೀವ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಡಿಎಸ್‍ಎಸ್ ಜಿಲ್ಲಾ ಸಂಚಾಲಕ ಕೆ.ಸಿ.ವಸಂತಕುಮಾರ್, ಎಚ್.ಇ.ದೊಡ್ಡಯ್ಯ, ಚಂದ್ರಪ್ಪ ಮತ್ತಿತರರಿದ್ದರು.