ಕರ್ನಾಟಕ ಬ್ಯಾಂಕ್ ಸಾಮಾಜಿಕ ಸೇವೆಯಲ್ಲೂ ತನ್ನನ್ನು ತೊಡಗಿಸಿಕೊಂಡಿದೆ: ಎಂ.ರಾಘವೇಂದ್ರ ಭಟ್
ಚಿಕ್ಕಮಗಳೂರು, ಸೆ.14: ಎಲ್ಲರಿಗೂ ಒಳಿತಾಗಲಿ ಎಂಬ ಸದುದ್ದೇಶದಿಂದ ಕರ್ನಾಟಕ ಬ್ಯಾಂಕ್ ಗ್ರಾಹಕರೊಂದಿಗೆ ವ್ಯವಹರಿಸುವುದರ ಜೊತೆಗೆ ಸಾಮಾಜಿಕ ಸೇವೆಯಲ್ಲೂ ತನ್ನನ್ನು ತೊಡಗಿಸಿಕೊಂಡಿದೆ ಎಂದು ಬ್ಯಾಂಕ್‍ನ ಮುಖ್ಯ ಮಹಾಪ್ರಬಂಧಕ ಎಂ.ರಾಘವೇಂದ್ರ ಭಟ್ ಹೇಳಿದರು.
ಅವರು ನಗರದ ಕರ್ನಾಟಕ ಬ್ಯಾಂಕ್‍ನಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಭಾರತೀಯ ವಿಕಾಸ್ ಟ್ರಸ್ಟ್ ಮತ್ತು ಬ್ಯಾಂಕ್‍ನ ಸಹಯೋಗದೊಂದಿಗೆ ನೂತನವಾಗಿ ಆರಂಭಿಸಿರುವ ಮನೆ ಬೆಳಕು ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.
ಕೆರೆಯ ನೀರನು ಕೆರೆಗೆ ಚೆಲ್ಲಿ ಎಂಬ ದಾಸವಾಣಿಯಂತೆ ಕರ್ನಾಟಕ ಬ್ಯಾಂಕ್ ತಾನು ಗಳಿಸುವ ಲಾಭದಲ್ಲಿ ಬಹಳಷ್ಟು ಹಣವನ್ನು ಸಮಾಜ ಸೇವೆಗೆ ವಿನಿಯೋಗಿಸುತ್ತಿದೆ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸಾಮಾಜಿಕ ಜವಾಬ್ದಾರಿ ಕಾಯ್ದೆಗಿಂತಲೂ ಮುಂಚಿನಿಂದಲೇ ದೇಶ ಮತ್ತು ಸಮಾಜದ ಅಭಿವೃದ್ಧಿಗೆ ದುಡಿಯುತ್ತಿದೆ ಎಂದರು.
ಕುಡಿಯುವ ನೀರಿನ ಯೋಜನೆ, ಗ್ರಂಥಾಲಯಗಳ ಸ್ಥಾಪನೆ, ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ಸೇರಿದಂತೆ ಬಹಳಷ್ಟು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದೆ, ವಿದ್ಯಾರ್ಥಿಗಳಿಗೆ ಓದಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಮನೆ ಬೆಳಕು ಯೋಜನೆಯನ್ನು ಬ್ಯಾಂಕ್ ಆರಂಭಿಸಿದೆ ಎಂದು ವಿವರಿಸಿದರು.
ಅಧ್ಯಕ್ಷತೆ ವಹಿಸಿ ಭಾರತೀಯ ವಿಕಾಸ ಟ್ರಸ್ಟ್ ನ ಆಡಳಿತ ಟ್ರಸ್ಟಿ ಕೆ.ಎಂ.ಉಡುಪ ಮಾತನಾಡಿ, ಮನೆ ಬೆಳಕು ಯೋಜನೆಯಡಿ ವಿದ್ಯುತ್ ಸಂಪರ್ಕವಿಲ್ಲದ ಪ್ರೌಢಶಾಲಾ ವಿದ್ಯಾರ್ಥಿಗಳ ಮನೆಗಳಿಗೆ ಸೋಲಾರ್ ದೀಪಗಳನ್ನು ಅಳವಡಿಸಲಾಗುವುದು. ಈ ಯೋಜನೆಯಡಿ ಈಗಾಗಲೇ ಉಡುಪಿ ಜಿಲ್ಲೆಯಲ್ಲಿ 75 ಮನೆಗಳಿಗೆ ಸೋಲಾರ್ ದೀಪಗಳನ್ನು ಅಳವಡಿಸಲಾಗಿದ್ದು, ಚಿಕ್ಕಮಗಳೂರು ಜಿಲ್ಲೆಯಲ್ಲಿ 25 ಮನೆಗಳಿಗೆ ಅಳವಡಿಸಲಾಗುವುದು ಎಂದು ತಿಳಿಸಿದರು.
ಉಚಿತವಾಗಿ ನೀಡಿದರೆ ಅದರ ಬೆಲೆ ಗೊತ್ತಾಗುವುದಿಲ್ಲ ಎಂಬ ಕಾರಣಕ್ಕಾಗಿ ವಿದ್ಯಾರ್ಥಿಗಳಿಂದ ಕನಿಷ್ಠ ಹಣವನ್ನು ಪಡೆಯಲಾಗುವುದು, ಉಳಿದ ಮೊತ್ತವನ್ನು ಕರ್ನಾಟಕ ಬ್ಯಾಂಕ್ ಭರಿಸುತ್ತದೆ. ಬೆಳಕು ನೀಡುವ ಪುಣ್ಯದ ಕೆಲಸಕ್ಕೆ ಸಹಕಾರ ನೀಡುತ್ತಿರುವ ಕರ್ನಾಟಕ ಬ್ಯಾಂಕ್‍ನ ಕಾರ್ಯ ಅತ್ಯಂತ ಸ್ತುತ್ಯಾರ್ಹ ಎಂದರು.
ಈ ವೇಳೆ ಸೆಲ್ಕೋ ಸೋಲಾರ್ ಲೈಟ್ ಸಂಸ್ಥೆಯ ಸಹಾಯಕ ಮಹಾ ಪ್ರಬಂಧಕ ಗುರು ಪ್ರಕಾಶ್ ಶೆಟ್ಟಿ, ಭಾರತೀಯ ವಿಕಾಸ ಟ್ರಸ್ಟ್ ನ ನಿರ್ದೇಶಕ ಪಿ.ಕೃಷ್ಣಾನಂದ ನಾಯಕ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಬ್ಯಾಂಕ್‍ನ ಕ್ಷೇತ್ರೀಯ ಕಾರ್ಯಾಲಯದ ಸಹಾಯಕ ಮಹಾಪ್ರಬಂಧಕ ನಾಗರಾಜ ಐತಾಳ್ ಸ್ವಾಗತಿಸಿದರು, ಅಧಿಕಾರಿ ಉಜ್ವಲ್ ಡಿ.ಪಡುಬಿದ್ರಿ ಕಾರ್ಯಕ್ರಮವನ್ನು ನಿರೂಪಿಸಿದರು, ನಗರ ಶಾಖೆಯ ಮುಖ್ಯ ಪ್ರಬಂಧಕ ಸುಧಾಕರ್ ವಂದಿಸಿದರು.