×
Ad

ಮುಂದಿನ ಪೀಳಿಗೆ ಉಳಿಯಬೇಕಾದರೆ ಪರಿಸರ ಸಂರಕ್ಷಣೆ ಅಗತ್ಯ: ಎಚ್.ಸಿ.ಕೃಷ್ಣ

Update: 2017-09-14 23:06 IST

ಮಂಡ್ಯ, ಸೆ.14: ಮುಂದಿನ ಪೀಳಿಗೆ ಉಳಿಯಬೇಕಾದರೆ ಪರಿಸರ ಸಂರಕ್ಷಣೆ ಅನಿವಾರ್ಯ. ಪ್ರತಿಯೊಬ್ಬರೂ ತಮ್ಮ ಮನೆ ಮುಂದೆ ಗಿಡಗಳನ್ನು ನೆಟ್ಟು ಪೋಷಿಸಬೇಕು ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಚ್.ಸಿ.ಕೃಷ್ಣ ಹೇಳಿದ್ದಾರೆ.

ತಾಲೂಕಿನ ತಗ್ಗಹಳ್ಳಿ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಇಕೋ ಕ್ಲಬ್(ಹಸಿರು ಪಡೆ) ಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಬದುಕಿನ ಧಾವಂತದಲ್ಲಿ ಸ್ವಾರ್ಥಕ್ಕಾಗಿ ಕಾಡನ್ನು ಕಡಿದು ಪರಿಸರವನ್ನು ಹಾಳುಮಾಡುತ್ತಿದ್ದೇವೆ. ಇದರಿಂದ ಮುಂದಿನ ದಿನಗಳಲ್ಲಿ ದೊಡ್ಡ ಅಪಾಯವಿದೆ ಎಂದು ಎಚ್ಚರಿಸಿದರು.

ಮಾನವರೂ ಸೇರಿದಂತೆ ಜೀವಸಂಕುಲಗಳ ಉಳಿವಿಗೆ ಪರಿಸರ ಸಂರಕ್ಷಣೆ ಅಗತ್ಯ. ನಾವು ಪ್ರತಿನಿತ್ಯ ಉಸಿರಾಟಕ್ಕೆ ಪ್ರಾಣವಾಯುವಾದ ಆಮ್ಲಜನಕವನ್ನು ಅವಲಂಬಿಸಿದ್ದೇವೆ. ಆದರೆ, ಪ್ರಾಣವಾಯು ನೀಡುವ ಗಿಡಮರಗಳನ್ನು ಬೆಳೆಸುವ ರಕ್ಷಿಸುವ ಕೆಲಸ ಮಾಡುತ್ತಿಲ್ಲ ಎಂದು ಅವರು ವಿಷಾದಿಸಿದರು.

ಮೈಸೂರಿನ ಕ್ರೆಡಿಲ್ ಐ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾಎಂ.ಪಿ.ಹರ್ಷ ಮಾತನಾಡಿ, ವಿದ್ಯಾರ್ಥಿಗಳು ಪರಿಸರದ ಬಗ್ಗೆ ಕಾಳಜಿ ಬೆಳೆಸಿಕೊಳ್ಳಬೇಕು. ನಮ್ಮ ನೆಲ, ಜಲ, ವಾಯು ಮಲಿನವಾಗದಂತೆ ಸಂರಕ್ಷಿಸಬೇಕು. ಈ ಬಗ್ಗೆ ಪೋಷಕರಿಗೂ ತಿಳುವಳಿಕೆ ನೀಡಬೇಕು ಎಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಕೆ.ಜಿ.ಗುರುಸ್ವಾಮಿ  ಮಾತನಾಡಿ, ಅರಣ್ಯಗಳ ನಾಶದಿಂದ ಪರಿಸರ ಸಮತೋಲನ ತಪ್ಪುತ್ತಿದ್ದು, ನಮ್ಮ ಸುತ್ತಮುತ್ತಲಿನ ಮರಗಿಡಗಳನ್ನು ಸಂರಕ್ಷಿಸುವುದರ ಜೊತೆಗೆ ಗಿಡಗಳನ್ನು ಬೆಳೆಸುವ ಪ್ರವೃತ್ತಿ ರೂಢಿಸಿಕೊಳ್ಳಬೇಕೆಂದರು.

ಇಕೋ ಕ್ಲಬ್ ಸಂಚಾಲಕ, ಉಪನ್ಯಾಸಕ ಹೇಮಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರೌಢಶಾಲಾ ವಿಭಾಗದ ಉಪಪ್ರಾಂಶುಪಾಲ ಪ್ರಶಾಂತಕುಮಾರ್, ಹಿರಿಯ ಉಪನ್ಯಾಸಕರಾದ ಟಿ.ಕೆ.ಚಂದ್ರಮ್ಮ, ಬಸವರಾಜು, ಕವಿತಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News