ಬುಲೆಟ್ ಟ್ರೈನ್ ಎಂಬ ಶೋಕಿ

Update: 2017-09-14 18:48 GMT

ಆಧುನಿಕತೆಗೆ ಮುಖಾಮುಖಿಯಾಗುವುದು ಮತ್ತು ಅವುಗಳ ಜೊತೆ ಕೈ ಜೋಡಿಸುತ್ತಾ ವಿಶ್ವದ ಎಲ್ಲ ದೇಶಗಳ ಜೊತೆಗೆ ಸರಿಸಮವಾಗಿ ಸಾಗುವುದು ಭಾರತದ ಅಗತ್ಯವಾಗಿದೆ. ಅತ್ಯಾಧುನಿಕತೆಯನ್ನು ಟೀಕಿಸುವುದು ಸುಲಭ. ಆದರೆ ಆಧುನಿಕತೆಯ ನೆರವಿಲ್ಲದೆ ಒಂದು ಕ್ಷಣ ಬದುಕಲು ಸಾಧ್ಯವಿಲ್ಲದಂತಹ ಸನ್ನಿವೇಶದಲ್ಲಿ ನಾವು ನಿಂತಿದ್ದೇವೆ. ಒಂದರ್ಧ ತಾಸು ಮೊಬೈಲ್‌ನ್ನು ಸ್ವಿಚ್ಡ್‌ಆಫ್ ಮಾಡಿಡುವ ಸ್ಥಿತಿಯಲ್ಲಿ ನಾವಿಲ್ಲದೇ ಇರುವಾಗ, ಅತ್ಯಾಧುನಿಕತೆಯನ್ನು ತೆಗಳುವ ತಿರಸ್ಕರಿಸುವ ಮಾತುಗಳು ಸೋಗಲಾಡಿತನವಾಗುತ್ತದೆ. ಒಂದು ದೇಶದ ಅಭಿವೃದ್ಧಿಗೆ ಪೂರಕವಾಗಿರುವ ಎಲ್ಲ ಆಧುನಿಕತೆಗಳಿಗೂ ತೆರೆದುಕೊಳ್ಳುವುದು ಇಂದಿನ ಅಗತ್ಯ. ಭಾರತ ಸ್ವತಂತ್ರಗೊಂಡಾಗ ಇದ್ದ ದೇಶಕ್ಕೂ, ಈಗ ಇರುವ ದೇಶಕ್ಕೂ ಅಜಗಜಾಂತರವಿದೆ.

ನೆಹರೂ ಬೃಹತ್ ಕೈಗಾರಿಕೆ ಮತ್ತು ಬೃಹತ್ ಅಣೆಕಟ್ಟುಗಳಂತಹ ಅಭಿವೃದ್ಧಿ ಯೋಜನೆಗಳಿಗೆ ನೀಲ ನಕ್ಷೆ ರೂಪಿಸಿದಾಗ, ಅದನ್ನು ವಿರೋಧಿಸಿದವರು ದೊಡ್ಡ ಸಂಖ್ಯೆಯಲ್ಲಿದ್ದರು. ಸ್ವತಃ ಗಾಂಧೀಜಿಯೇ ನೆಹರೂ ಅವರ ಕೈಗಾರಿಕಾ ಕ್ರಾಂತಿಯ ಕುರಿತಂತೆ ಋಣಾತ್ಮಕ ನಿಲುವನ್ನು ತಳೆದಿದ್ದರು. ಭಾರತ ಹಳ್ಳಿಯಲ್ಲಿರುವುದರಿಂದ ಕೃಷಿಯನ್ನೇ ಮುನ್ನೆಲೆಯಲ್ಲಿಟ್ಟುಕೊಂಡು ದೇಶವನ್ನು ಮುನ್ನಡೆಸಬೇಕು ಎನ್ನುವುದು ಗಾಂಧೀಜಿಯ ಕನಸಾಗಿತ್ತು. ನೆಹರೂ ಇದನ್ನು ನಿರಾಕರಿಸಲಿಲ್ಲವಾದರೂ, ಕೈಗಾರಿಕೆಗಳು ಮತ್ತು ತಂತ್ರಜ್ಞಾನದ ಅಗತ್ಯವನ್ನು ಮನಗಂಡರು. ಬ್ರಿಟಿಷರು ಬಿಟ್ಟು ಹೋದ ದೇಶ ಅಂಧಕಾರದಲ್ಲಿತ್ತು. ಬರೇ 50 ಗ್ರಾಮಗಳಷ್ಟೇ ವಿದ್ಯುತ್ತಿನ ಸಂಪರ್ಕವನ್ನು ಹೊಂದಿತ್ತು. ದೇಶದ ಅಂಧಕಾರಕ್ಕೆ ಸರ್ವ ಪರಿಹಾರ ವಿದ್ಯುತ್ ಶಕ್ತಿ ಉತ್ಪಾದನೆಯಲ್ಲಿತ್ತು. ಕೈಗಾರಿಕೆ ಮತ್ತು ವಿದ್ಯುತ್ ಒಂದನ್ನೊಂದು ಬೆಸೆದಿದ್ದವು. ಈ ಕಾರಣಕ್ಕಾಗಿಯೇ ಬೃಹತ್ ಅಣೆಕಟ್ಟುಗಳ ನಿರ್ಮಾಣ ಅನಿವಾರ್ಯಗಿತ್ತು.

ಇಸ್ರೋದಂತಹ ಸಂಸ್ಥೆಗಳನ್ನು ಬೆಳೆಸುವ, ವಿಮಾನಯಾನ ಕ್ಷೇತ್ರಗಳಿಗೆ ಬಂಡವಾಳ ಹೂಡುವ ಬೃಹತ್ ಸವಾಲುಗಳನ್ನು ನೆಹರೂ ಅವರು ಅಷ್ಟೇ ಪರಿಣಾಮಕಾರಿಯಾಗಿ ಎದುರಿಸಿದರು. ಬಳಿಕ ಇಂದಿರಾಗಾಂಧಿಯ ಕಾಲದಲ್ಲಿ ಹಸಿರುಕ್ರಾಂತಿ ಈ ದೇಶದ ಆಹಾರ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸಿದ್ದನ್ನು ಇಲ್ಲಿ ಉಲ್ಲೇಖಿಸಬೇಕಾಗಿದೆ. ಹಸಿರು ಕ್ರಾಂತಿ ಈ ನೆಲಕ್ಕೆ ಸಾಕಷ್ಟು ದುಷ್ಪರಿಣಾಮಗಳನ್ನು ಬೀರಿರಬಹುದಾದರೂ, ದೇಶದ ಹಸಿವನ್ನು ಇಂಗಿಸಲು ಆಹಾರಧಾನ್ಯಗಳನ್ನು ದುಪ್ಪಟ್ಟುಗೊಳಿಸುವುದು ಅಂದಿನ ತತ್‌ಕ್ಷಣದ ಅಗತ್ಯವಾಗಿತ್ತು. ರಾಜೀವ್‌ಗಾಂಧಿಯ ಕಾಲಕ್ಕೆ ‘ಕಂಪ್ಯೂಟರ್‌ಯುಗ’ ತೆರೆದುಕೊಂಡಿತು.

ಇಂದು ಪ್ರತೀ ವ್ಯಕ್ತಿಯ ಕೈಯಲ್ಲಿ ಮೊಬೈಲ್ ಫೋನ್‌ಗಳನ್ನು ನೋಡುತ್ತಿದ್ದರೆ ಅದಕ್ಕೆ ಕಾರಣ, ರಾಜೀವ್‌ಗಾಂಧಿಯ ದೂರಗಾಮಿ ಯೋಜನೆಗಳಾಗಿವೆ. ಆದುದರಿಂದ, ಅಭಿವೃದ್ಧಿಗೆ ಹೊಸತನಕ್ಕೆ ತೆರೆಯುವ ಸರಕಾರದ ಯಾವುದೇ ಯೋಜನೆಗಳನ್ನು ನಾವು ಏಕಮುಖವಾಗಿ ಟೀಕಿಸುವಾಗ ಯೋಚಿಸಬೇಕಾಗುತ್ತದೆ. ಜಗತ್ತು ದಾಪುಗಾಲಿಟ್ಟು ಸಾಗುವಾಗ ನಾವು ಕುಂಟುತ್ತಾ ಸಾಗುವಂತಿಲ್ಲ. ಈ ನಿಟ್ಟಿನಲ್ಲಿ ಅಹ್ಮದಾಬಾದ್-ಮುಂಬೈ ಮಧ್ಯೆ ಸಂಚರಿಸುವ ಭಾರತದ ಪ್ರಪ್ರಥಮ ಬುಲೆಟ್ ರೈಲನ್ನು ಸ್ವೀಕರಿಸುವ ವಿಷಯದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಇದು ನಿಜಕ್ಕೂ ದೇಶವನ್ನು ಮುಂದಕ್ಕೆ ಕೊಂಡೊಯ್ಯುವ ಯೋಜನೆಯೋ ಅಥವಾ ಇದೊಂದು ಭಾರತದ ಒಣ ಪ್ರತಿಷ್ಠೆಯ ಪ್ರದರ್ಶನವೋ ಎಂಬ ಬಗ್ಗೆ ಆರೋಪ, ಪ್ರತ್ಯಾರೋಪಗಳು ಕೇಳಿ ಬರುತ್ತಿವೆ.

ನರೇಂದ್ರ ಮೋದಿಯವರ ಬುಲೆಟ್ ಟ್ರೈನ್ ಕನಸು ದೇಶದ ವರ್ಚಸ್ಸನ್ನು ಹೆಚ್ಚಿಸುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಈ ಪ್ರತಿಷ್ಠೆಯನ್ನು ಭರಿಸುವಂತಹ ಸ್ಥಿತಿಯಲ್ಲಿ ದೇಶ ಸದ್ಯಕ್ಕೆ ಇದೆಯೆ ಎನ್ನುವಂತಹ ಪ್ರಶ್ನೆ ಅಷ್ಟೇ ಮಹತ್ವದ್ದು. ಇದರ ಫಲಾನುಭವಿಗಳ ಸಂಖ್ಯೆಯಿಂದ ಇದರ ಯಶಸ್ಸನ್ನು ನಾವು ಗುರುತಿಸಬೇಕಿದೆ. ಬುಲೆಟ್ ಟ್ರೈನ್ ದೇಶದ ಸದ್ಯದ ಬೇಡಿಕೆಯಂತೂ ಖಂಡಿತಾ ಅಲ್ಲ. ಅಂತಹದೊಂದು ಬೇಡಿಕೆ ದೇಶದ ಯಾವ ಮೂಲೆಯಿಂದಲೂ ಬಂದಿಲ್ಲ. ಇದರ ಲಾಭವನ್ನು ಪಡೆಯುವವರು ಸೀಮಿತವಾದ ಜನರು. ಮುಖ್ಯವಾಗಿ ದೇಶದ ಜನಸಾಮಾನ್ಯರಿಗೂ ಈ ಬುಲೆಟ್ ಟ್ರೈನ್‌ಗೂ ಯಾವುದೇ ಸಂಬಂಧವಿಲ್ಲ.

ಸರಕಾರ ಇದೇ ಹಣವನ್ನು ಈ ದೇಶದ ನರನಾಡಿಯಂತಿರುವ ರೈಲ್ವೇ ಹಳಿಗಳ ಸುಧಾರಣೆಗಾಗಿ ಹಣ ಹೂಡಿದ್ದರೆ ಅದು ಖಂಡಿತವಾಗಿಯೂ ದೇಶದ ಆರ್ಥಿಕತೆಯ ಮೇಲೆ ದೂರಗಾಮಿ ಪರಿಣಾಮವನ್ನು ಬೀರಬಹುದಿತ್ತು. ಈ ದೇಶದಲ್ಲಿ ಹರಡಿಕೊಂಡಿರುವ ಬಹುತೇಕ ಹಳಿಗಳು ಸ್ವಾತಂತ್ರಪೂರ್ವದವುಗಳು. ದೇಶದಲ್ಲಿ ರೈಲುಗಳು ಹಳಿ ತಪ್ಪುತ್ತಿರುವ ಪ್ರಕರಣ ಹೆಚ್ಚುತ್ತಿರುವುದಕ್ಕೆ ಈ ಪುರಾತನ ರೈಲು ಹಳಿಗಳೂ ಕಾರಣವಾಗಿವೆ. ರೈಲ್ವೆ ಇಲಾಖೆಯ ಮೂಲಭೂತ ಸುಧಾರಣೆಗಾಗಿ ಸರಕಾರ ಮನ ಮಾಡದೆ, ಅದನ್ನು ಸಂಪೂರ್ಣ ಖಾಸಗೀಕರಣ ಮಾಡುವ ಒಲವನ್ನು ಸರಕಾರ ವ್ಯಕ್ತಪಡಿಸುತ್ತಿದೆ. ಬುಲೆಟ್ ಟ್ರೈನ್ ಎನ್ನುವ ದುಂದುಗಾರಿಕೆ ಅದರ ಭಾಗವೇ ಆಗಿದೆ.

ಒಂದು ಲಕ್ಷ ಕೋಟಿ ರೂಪಾಯಿಗೂ ಅಧಿಕ ವೆಚ್ಚದಿಂದ ನಿರ್ಮಾಣವಾಗುವ, 88 ಸಾವಿರ ಕೋಟಿ ರೂಪಾಯಿ ಸಾಲದಿಂದ ನಡೆಯುವ ಯೋಜನೆಯಿದಾಗಿರುವುದರಿಂದ, ಇದು ದೇಶದ ಒಟ್ಟು ಅಭಿವೃದ್ಧಿಯಲ್ಲಿ ಅಷ್ಟೇ ಮಹತ್ವದ ಪಾತ್ರವನ್ನು ವಹಿಸಬೇಕು ಎಂದು ಜನರು ನಿರೀಕ್ಷಿಸಿದರೆ, ಅದು ಅಭಿವೃದ್ಧಿ ವಿರೋಧಿ ಮಾತಾಗುವುದಿಲ್ಲ. ನಿಜಕ್ಕೂ ಇದು ಜಪಾನ್ ಭಾರತಕ್ಕೆ ನೀಡುತ್ತಿರುವ ಕೊಡುಗೆಯೋ ಅಥವಾ ಭಾರತ ಜಪಾನ್‌ಗೆ ನೀಡುತ್ತಿರುವ ಕೊಡುಗೆಯೋ ಎಂಬ ಪ್ರಶ್ನೆ ಈ ಕಾರಣಕ್ಕಾಗಿ ಎದ್ದಿದೆ. ನರೇಂದ್ರ ಮೋದಿಯ ಮೇಕಿಂಗ್ ಇಂಡಿಯಾಕ್ಕೂ ಬುಲೆಟ್ ಟ್ರೈನ್‌ಗೂ ಯಾವ ಸಂಬಂಧವೂ ಇಲ್ಲ. ಈ ಟ್ರೈನ್‌ನಿಂದ ಭಾರತ ಪಡೆಯುವುದಕ್ಕಿಂತಲೂ ಜಪಾನ್ ತನ್ನದಾಗಿಸಿಕೊಳ್ಳುವುದೇ ಹೆಚ್ಚು. ಇದೀಗ ಭಾರತದ ಆರ್ಥಿಕ ಸನ್ನಿವೇಶ ನಿರೀಕ್ಷಿಸಿದಷ್ಟು ಚೆನ್ನಾಗಿಲ್ಲ. ನೋಟು ನಿಷೇಧ ಭಾರತದ ಅರ್ಥವ್ಯವಸ್ಥೆಯನ್ನು ಚೆಲ್ಲಾಪಿಲ್ಲಿ ಮಾಡಿದೆ. ಅದು ತನ್ನ ಉದ್ದೇಶವನ್ನು ಸಾಧಿಸುವಲ್ಲಿ ವಿಫಲವಾಗಿದೆ ಎನ್ನುವುದನ್ನು ಸ್ವತಃ ಸರಕಾರವೇ ಒಪ್ಪಿಕೊಂಡಿವೆ. ದೇಶದ ಜಿಡಿಪಿ ಮೂರು ವರ್ಷ ಹಿಂದಕ್ಕೆ ಚಲಿಸಿದೆ.

ಗ್ರಾಮೀಣ ಪ್ರದೇಶದ ಸಣ್ಣ ಪುಟ್ಟ ಉದ್ದಿಮೆಗಳಂತೂ ತತ್ತರಿಸಿಕೂತಿದೆ. ಇಂತಹ ಸಂದರ್ಭದಲ್ಲಿ, ಸರಕಾರ ಈ ಬಗ್ಗೆ ಗಮನ ಹರಿಸುವುದು ಇಂದಿನ ಅಗತ್ಯ. ಹಾಗೆಯೇ ನೆಲಕಚ್ಚಿರುವ ಕೃಷಿ ವಲಯವನ್ನು ಮೇಲೆತ್ತುವ ಬಗ್ಗೆ ಅದು ಯೋಚಿಸಬೇಕಾಗಿದೆ. ಆದರೆ ಸರಕಾರ ಬುಲೆಟ್ ಟ್ರೈನ್ ಹೆಸರಲ್ಲಿ ರೈತರ ಭೂಮಿಯನ್ನು ಕಿತ್ತುಕೊಳ್ಳಲು ಮುಂದಾಗಿದೆ. ತಮಗೆ ಸಂಬಂಧವೇ ಇಲ್ಲದ ಅಭಿವೃದ್ಧಿಗಾಗಿ ರೈತರು ತಮ್ಮ ಭೂಮಿಯನ್ನು ಕಳೆದುಕೊಳ್ಳುವ ಸನ್ನಿವೇಶ ನಿರ್ಮಾಣವಾಗಿದೆ. ಬಿಜೆಪಿಯ ಮಿತ್ರಪಕ್ಷವಾಗಿರುವ ಶಿವಸೇನೆಯೇ ಬುಲೆಟ್ ಟ್ರೈನ್‌ನ್ನು ಟೀಕಿಸಿದೆ. ಅದು ತನ್ನ ಮುಖವಾಣಿಯಾಗಿರುವ ಸಾಮ್ನಾದಲ್ಲಿ ಈ ಯೋಜನೆಯನ್ನು ಟೀಕಿಸುತ್ತಾ ‘‘ ಈ ಯೋಜನೆಗಾಗಿ ಮಹಾರಾಷ್ಟ್ರ ಸರಕಾರ ಕನಿಷ್ಠ 30 ಸಾವಿರಕೋಟಿ ರೂಪಾಯಿ ಪಾವತಿಸಬೇಕಾಗಿದೆ. ರೈತರ ಸಾಲ ಮನ್ನಾ ಮಾಡಲು ಬಹುದಿನದಿಂದ ಬೇಡಿಕೆ ಕೇಳಿ ಬರುತ್ತಿದ್ದರೂ ಸರಕಾರ ಸ್ಪಂದಿಸುತ್ತಿಲ್ಲ. ಮಹಾರಾಷ್ಟ್ರದ ಜನರು ಬುಲೆಟ್ ಟ್ರೈನ್ ಬೇಕು ಎಂದು ಕೇಳಿಯೇ ಇಲ್ಲ. ಈ ಯೋಜನೆಯಿಂದ ಮಹಾರಾಷ್ಟ್ರೀಯನ್ನರಿಗೆ ಯಾವುದೇ ಲಾಭವಿಲ್ಲ. ಲಾಭವೆಲ್ಲವೂ ಜಪಾನ್ ದೇಶಕ್ಕಾಗಿದೆ’’ ಈ ಮಾತಿನಲ್ಲಿ ಸತ್ಯ ಇಲ್ಲದೇ ಇಲ್ಲ. ಯಾವ ಕೋನದಲ್ಲಿ ನೋಡಿದರೂ, ಬುಲೆಟ್ ಟ್ರೈನ್ ಮೋದಿ ಸರಕಾರದ ಶೋಕಿ ಎನ್ನೋದು ಸ್ಪಷ್ಟವಾಗುತ್ತದೆ.

ಮೋದಿ ಸರಕಾರ, ಈ ದೇಶದ ಅಭಿವೃದ್ಧಿಯನ್ನು ನಿರ್ಲಕ್ಷಿಸಿ ಇಂತಹದೇ ಹಲವು ಶೋಕಿಗಾಗಿ ಸಾವಿರಾರು ಕೋಟಿಗಳನ್ನು ಸುರಿಯಲು ಮುಂದಾಗಿದೆ. ಒಂದೆಡೆ ಬರಪೀಡಿತ ಮಹಾರಾಷ್ಟ್ರದಲ್ಲಿ 3,600 ಕೋ. ರೂಪಾಯಿ ವೆಚ್ಚದಲ್ಲಿ ಶಿವಾಜಿ ಪಾರ್ಕ್ ನಿರ್ಮಾಣ ಮಾಡಲು ಮುಂದಾಗಿದೆ. ಇದೇ ಸಂದರ್ಭದಲ್ಲಿ ಚೀನಾದಲ್ಲಿ ತಯಾರಾಗುತ್ತಿರುವ ವಲ್ಲಭಭಾಯಿ ಪಟೇಲ್ ಪ್ರತಿಮೆಗಾಗಿ ಸರಕಾರ ಮೂರು ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡುತ್ತಿದೆ. ಮಗದೊಂದೆಡೆ ಅಯೋಧ್ಯೆಯಲ್ಲಿ ರಾಮಾಯಣ ಮ್ಯೂಸಿಯಮ್‌ಗಾಗಿ 225 ಕೋಟಿ ರೂಪಾಯಿ ವೆಚ್ಚ ಮಾಡುತ್ತಿದೆ. ಹೀಗೆ, ಹಣವನ್ನು ಬೇಕಾಬಿಟ್ಟಿಯಾಗಿ ಪೋಲು ಮಾಡುತ್ತಿರುವ ಸರಕಾರ, ಆಸ್ಪತ್ರೆಗಳ ಸುಧಾರಣೆಯ ಪ್ರಶ್ನೆ ಬಂದಾಗ ಸಾವಿರ ನೆಪಗಳನ್ನು ಹೇಳುತ್ತದೆ. ಈ ಎಲ್ಲ ಹಣವನ್ನು ಸಮಗ್ರವಾಗಿ ಬಳಸಿಕೊಂಡಿದ್ದರೆ ಇಂದು ದೇಶದ ಎಲ್ಲ ಆಸ್ಪತ್ರೆಗಳು ಅತ್ಯಾಧುನಿಕವಾಗಿ ನಳನಳಿಸಬಹುದಿತ್ತು. ಗೋರಖ್‌ಪುರದಂತಹ ದುರಂತಗಳನ್ನು ಪುನರಾವರ್ತನೆಗೊಳ್ಳುವುದನ್ನು ತಡೆಯಲು ಸರಕಾರಕ್ಕೆ ಸಾಧ್ಯವಿತ್ತು. ನಮ್ಮ ಸರಕಾರಿ ಶಾಲೆಗಳು ಅಭಿವೃದ್ಧಿಗೊಂಡು ವಿದ್ಯೆ ಎಲ್ಲರನ್ನೂ ತಲುಪಬಹುದಿತ್ತು. ಆದರೆ ಸರಕಾರಕ್ಕೆ ಅದಾವುದು ಬೇಕಾಗಿಲ್ಲ. ಮೋದಿಯ ಅಚ್ಛೇದಿನ್ ಬಡವರಿಗೆ ಸಂಬಂಧಿಸಿದ್ದಲ್ಲ, ಸೂಟುಬೂಟುಗಳನ್ನು ಧರಿಸಿದ ಅಂಬಾನಿ, ಅದಾನಿಗಳಿಗೆ ಸಂಬಂಧಿಸಿದ್ದು ಎನ್ನುವುದನ್ನು ಈ ಮೂಲಕ ಅವರು ದೇಶಕ್ಕೆ ಮನವರಿಕೆ ಮಾಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News