×
Ad

ಬಣಕಲ್ ನಾಡಾ ಕಚೇರಿಗೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ

Update: 2017-09-15 19:20 IST

ಬಣಕಲ್, ಸೆ.15: ಬಣಕಲ್ ಗ್ರಾಪಂ ವ್ಯಾಪ್ತಿಯಲ್ಲಿ ಮಂಜೂರಾಗಿರುವ ಆಶ್ರಯ ಮನೆಗಳು ಫಲಾನುಭವಿಗಳಿಗೆ ಸಮರ್ಪಕವಾಗಿ ವಿತರಣೆಯಾಗಿರುವ ಬಗ್ಗೆ ಖಚಿತಪಡಿಸಲು ಚಿಕ್ಕಮಗಳೂರು ಜಿಲ್ಲಾಧಿಕಾರಿ ಜಿ.ಸತ್ಯವತಿ ಬಣಕಲ್ ನಾಡಾ ಕಚೇರಿಗೆ ಭೇಟಿ ನೀಡಿ ಕಡತಗಳನ್ನು ಪರಿಶೀಲಿಸಿದರು.

ತದನಂತರ ಅಧಿಕಾರಿಗಳೊಂದಿಗೆ ಇಂದಿರಾನಗರಕ್ಕೆ ತೆರಳಿ ಆಶ್ರಯ ಮನೆಗಳಿಗೆ ಮಂಜೂರಾಗಿರುವ ನಿವೇಶನದ ಸ್ಥಳ ಪರಿಶೀಲಿಸಿದರು. ನಂತರ ಆಶ್ರಯ ಮನೆಗಳು ಸಮರ್ಪಕವಾಗಿ ಇವೆಯೇ ಇಲ್ಲವೇ ಫಲಾನುಭವಿಗಳಿಗೆ ದೊರೆತಿವೆಯೇ  ಎಂಬುದರ ಬಗ್ಗೆ ಅಲ್ಲಿದ್ದ ಕೆಲವು ಮನೆಗಳ ಒಳಗೆ ಹೋಗಿ ಪರಿಶೀಲಿಸಿ ಜನರ ಯೋಗಕ್ಷೇಮ ವಿಚಾರಿಸಿದರು.

ಬಣಕಲ್ ಗ್ರಾಪಂ ಅಧ್ಯಕ್ಷ ಬಿ.ವಿ.ಸುರೇಶ್ ಜಿಲ್ಲಾಧಿಕಾರಿಯವರೊಂದಿಗೆ ಮಾತನಾಡಿ, ಬಣಕಲ್‍ನ ಗುಡ್ಡಹಟ್ಟಿ ರಸ್ತೆ ಸಂಪೂರ್ಣ ಹಾಳಾಗಿದ್ದು ರಿಪೇರಿ ಬಗ್ಗೆ ಪ್ರಸ್ತಾಪಿಸಿದರು. ಅದನ್ನು ಪರಿಶೀಲಿಸುವುದಾಗಿ ಹೇಳಿದ ಜಿಲ್ಲಾಧಿಕಾರಿ ನಂತರ ಇಂದಿರಾನಗರದಲ್ಲಿ ಆಶ್ರಯ ಮನೆಗಳ ಅಪೂರ್ಣ ಕಾಮಾಗಾರಿ ಶೀಘ್ರವೇ ಮಾಡಿ ಎಂದು ಅದಿಕಾರಿಗಳಿಗೆ ತಾಕೀತು ನೀಡಿದರು.

ಮರಳಿನ ಕೊರತೆ ಬಗ್ಗೆ ಅಧಿಕಾರಿಗಳು ಗಮನ ಸೆಳೆದಾಗ  ಜಿಲ್ಲಾಧಿಕಾರಿ ಜಿ.ಸತ್ಯವತಿಯವರು ಗುತ್ತಿಗೆದಾರರು ಎಂಸ್ಯಾಂಡ್ ಬಳಸಿ ಕಾಮಗಾರಿ ಪೂರ್ಣಗೊಳಿಸಲು ಸ್ಥಳೀಯ ಅದಿಕಾರಿಗಳಿಗೆ ಸೂಚಿಸಿದರು.

ಆಶ್ರಯ ಮನೆಗಳಿಗೆ ನೀಡಿರುವ ನಿವೇಶನದ ಸ್ಥಳದಲ್ಲಿ  ಅರಣ್ಯ ಇಲಾಖೆಯ  ನೆಡುತೋಪು ಇರುವುದರಿಂದ ಅದನ್ನು ತೆಗೆಯಲು ಅರಣ್ಯ ಅದಿಕಾರಿಗಳ ಗಮನಕ್ಕೆ ತಂದು ನಿವೇಶನವನ್ನು ಬೇಗ ಹಸ್ತಾಂತರಿಸುವಂತೆ ಜಿಲ್ಲಾಧಿಕಾರಿಯವರಲ್ಲಿ ಗ್ರಾಪಂ ಅಧ್ಯಕ್ಷರು ಮನವಿ ಮಾಡಿದರು. ನಂತರ ಮತ್ತಿಕಟ್ಟೆಯಲ್ಲಿ ಪ.ಜಾತಿ ಮತ್ತು ಪಂಗಡದ ಸಮುದಾಯದವರು ಹೆಚ್ಚಾಗಿರುವುದರಿಂದ ಅವರು ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಬಣಕಲ್ ಗ್ರಾಪಂ ವತಿಯಿಂದ ಈ ಭಾಗಕ್ಕೆ ನೀರನ್ನು ಟ್ಯಾಂಕರ್ ಮುಖಾಂತರ ಈಗ ನೀರು ಸರಬರಾಜು ಮಾಡಲಾಗುತ್ತಿದೆ. ಅವರಿಗೆ ನೀರಿನ ಟ್ಯಾಂಕ್ ವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿ ಜಿ.ಸತ್ಯವತಿಯವರಿಗೆ ಸ್ಥಳೀಯ ಗ್ರಾಪಂ ಅಧಿಕಾರಿಗಳು ಸಮಸ್ಯೆಯ ಬಗ್ಗೆ ಮಾಹಿತಿ ನೀಡಿದರು.

ಸಮಸ್ಯೆಗಳನ್ನು ಆಲಿಸಿದ ಜಿಲ್ಲಾಧಿಕಾರಿಯವರು ತುಸು ಸಮಯ ನಾಡಾ ಕಛೇರಿಯಲ್ಲಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

ಈ ಸಂದರ್ಭದಲ್ಲಿ ಪ್ರಭಾರಿ ಜಿಲ್ಲಾಧಿಕಾರಿ ವೈಶಾಲಿ, ಬಣಕಲ್ ಗ್ರಾಮ ಲೆಕ್ಕಾಧಿಕಾರಿ ಬಸವೇಗೌಡ, ಕಂದಾಯ ಅಧಿಕಾರಿ ಸುರೆಂದ್ರಬಾಬು, ಬಣಕಲ್ ಗ್ರಾಪಂ ಅಧ್ಯಕ್ಷ ಬಿ.ವಿ.ಸುರೇಶ್, ಸದಸ್ಯ ಸತೀಶ್‍ಮತ್ತಿಕಟ್ಟೆ, ಬಣಕಲ್ ಗ್ರಾಪಂ ಲೆಕ್ಕ ಸಹಾಯಕ ನಾಣಿಯಪ್ಪ, ಕಾರ್ಯಧರ್ಶಿ ಸುದೀರ್, ಅಣ್ಣಪ್ಪ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News