ಇಂಜಿನಿಯರ್ಸ್‍ಗಳು ಕಾಮಗಾರಿ ಕೈಗೊಳ್ಳುವಾಗ ತಾಂತ್ರಿಕತೆ, ಗುಣಮಟ್ಟಕ್ಕೆ ಆದ್ಯತೆ ನೀಡಬೇಕು: ತುಷಾರಮಣಿ
ಚಿಕ್ಕಮಗಳೂರು, ಸೆ.15: ತಮ್ಮ ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್ಸ್‍ಗಳು ಬದ್ಧತೆ ಮತ್ತು ಗುಣಮಟ್ಟ ಕಾಯ್ದುಕೊಳ್ಳದಿದ್ದಲ್ಲಿ ಸರ್.ಎಂ. ವಿಶ್ವೇಶ್ವರಯ್ಯ ಅವರ ಆಶಯಗಳಿಗೆ ವಂಚನೆ ಮಾಡಿದಂತಾಗುತ್ತದೆ ಎಂದು ನಗರಸಭೆ ಆಯುಕ್ತೆ ತುಷಾರಮಣಿ ಹೇಳಿದರು.
ಅವರು ಶುಕ್ರವಾರ ಸರ್.ಎಂ. ವಿಶ್ವೇಶ್ವರಯ್ಯನವರು 157ನೆ ಜನ್ಮದಿನಾಚರಣೆ ಅಂಗವಾಗಿ ಜಿಲ್ಲಾ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಶನ್ ವತಿಯಿಂದ ಹಮ್ಮಿಕೊಂಡಿದ್ದ ಇಂಜಿನಿಯರ್ಸ್ ಡೇ ಕಾರ್ಯಕ್ರಮದಲ್ಲಿ ವಿಶ್ವೇಶ್ವರಯ್ಯ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡುತ್ತಿದ್ದರು.
ಸಾರ್ವಜನಿಕವಾದ ಕಾಮಗಾರಿ ಕೈಗೊಳ್ಳದ ಸಂದರ್ಭಗಳಲ್ಲಿ ಇಂಜಿನಿಯರ್ಸ್‍ಗಳು ಗುಣಮಟ್ಟ ಕಾಯ್ದುಕೊಳ್ಳುವುದಿಲ್ಲ ಎಂಬ ಆರೋಪಗಳಿದ್ದು, ಇದನ್ನು ಹೋಗಲಾಡಿಸಲು ಇಂಜಿನಿಯರ್ಸ್‍ಗಳು ಕಾಮಗಾರಿ ಕೈಗೊಳ್ಳುವಾಗ ಆಧುನಿಕ ತಾಂತ್ರಿಕತೆ ಮತ್ತು ಗುಣಮಟ್ಟಕ್ಕೆ ಆದ್ಯತೆ ನೀಡಬೇಕು. ಸಿವಿಲ್ ಇಂಜಿನಿಯರ್ಸ್‍ಗಳಲ್ಲಿ ಮಹಿಳೆಯರ ಸಂಖ್ಯೆ ಅತ್ಯಂತ ಕಡಿಮೆ ಇದ್ದು, ಈ ವೃತ್ತಿಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳಬೇಕೆಂದರು.
ಸಿಡಿಎ ಆಯುಕ್ತ ಭೀಮನಿಧಿ ಮಾತನಾಡಿ, ಸರ್.ಎಂ. ವಿಶ್ವೇಶ್ವರಯ್ಯನವರ ಕನಸುಗಳನ್ನು ನನಸು ಮಾಡುವಲ್ಲಿ ಇಂಜಿನಿಯರ್ಸ್‍ಗಳು ಶ್ರಮಿಸಬೇಕು ಎಂಉ ನುಡಿದರು.
ಇದಕ್ಕೂ ಮುಂಚೆ ನಗರದ ಡಿ.ಎ.ಸಿ.ಜಿ. ಪಾಲಿಟೆಕ್ನಿಕ್ ಕಾಲೇಜಿನಿಂದ ಆರಂಭವಾದ ಮೆರವಣಿಗೆಯನ್ನು ಉದ್ಘಾಟಿಸಿ ಶಾಸಕ ಸಿ.ಟಿ.ರವಿ ಮಾತನಾಡಿ, ಸರ್.ಎಂ.ವಿಶ್ವೇಶ್ವರಯ್ಯ ಅವರಲ್ಲಿದ್ದ ಸೇವಾನಿಷ್ಠೆ ಮತ್ತು ಪ್ರಾಮಾಣಿಕತೆಯನ್ನು ಇಂಜಿನಿಯರ್ಸ್‍ಗಳು ಮೈಗೂಡಿಸಿಕೊಳ್ಳಬೇಕು. ಅವರ ಆದರ್ಶಗಳು ಇಂದಿನ ಯುವ ಇಂಜಿನಿಯರ್ಸ್‍ಗಳಿಗೆ ಪ್ರೇರಣೆಯಾಗಲಿ ಎಂದರು.
ಈ ವೇಳೆ ನಗರದ ಬೇಲೂರು ರಸ್ತೆಗೆ ಸರ್.ಎಂ. ವಿಶ್ವೇಶ್ವರಯ್ಯ ರಸ್ತೆ ಎಂದು ನಾಮಕರಣ ಮಾಡುವಂತೆ ಇಂಜಿನಿಯರ್ಸ್ ಸಂಘ ಮನವಿ ಮಾಡಿತು.
ಕಾರ್ಯಕ್ರಮದಲ್ಲಿ ಡಿಎಸಿಜಿ ಪಾಲಿಟೆಕ್ನಿಕ್‍ನ ಪ್ರಾಂಶುಪಾಲ ಉಮಾಪತಿ ಉಪಸ್ಥಿತರಿದ್ದರು. ಜಿಲ್ಲಾ ಸಿವಿಲ್ ಇಂಜಿನಿಯರ್ಸ್ ಸಂಘದ ಅಧ್ಯಕ್ಷ ರಾಘವೇಂದ್ರ ಸ್ವಾಗತಿಸಿ, ಉಪಾಧ್ಯಕ್ಷ ಜಿ. ರಮೇಶ್ ವಂದಿಸಿದರು.