ನವಿಲುಗುಡ್ಡ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ತಡೆಗೆ ಶೋಭಕರಂದ್ಲಾಜೆ ಒತ್ತಾಯ
ಕಡೂರು, ಸೆ.15: ತರೀಕೆರೆ ತಾಲೂಕಿನ ನವಿಲುಗುಡ್ಡ ಪ್ರದೇಶದಲ್ಲಿ ಅಕ್ರಮವಾಗಿ ನಡೆಸುತ್ತಿರುವ ಗಣಿಗಾರಿಕೆಯನ್ನು ಕೂಡಲೇ ನಿಲ್ಲಿಸುವಂತೆ ಸಂಸದೆ ಶೋಭಕರಂದ್ಲಾಜೆ ಒತ್ತಾಯಿಸಿದ್ದಾರೆ.
ಅವರು ಶುಕ್ರವಾರ ಪಟ್ಟಣದ ಬಿಜೆಪಿ ಮಂಡಲಾಧ್ಯಕ್ಷ ಬೆಳ್ಳಿಪ್ರಕಾಶ್ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಂರಕ್ಷಿತ ಹಾಗೂ ವನ್ಯಪ್ರಾಣಿಗಳ ಆವಾಸ ಸ್ಥಾನದಲ್ಲಿ ಅಕ್ರಮವಾಗಿ ಈ ಗಣಿಗಾರಿಕೆ ನಡೆಸಲಾಗುತ್ತಿದ್ದು. ಸ್ಥಳೀಯ ಜನರ ಸಾಕಷ್ಟು ವಿರೋಧವಿದ್ದರೂ ಈ ಬಗ್ಗೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ ಎಂದರು.
ಇದರಿಂದ ನವಿಲು ಮತ್ತು ವನ್ಯಜೀವಿಗಳು ನಾಶವಾಗುವ ಜೊತೆಗೆ ನೀರಿನ ಸೆಳೆಯೂ ಬತ್ತಿ ಹೋಗುತ್ತದೆ. ಈ ಬಗ್ಗೆ ಅನೇಕ ಹೋರಾಟಗಳು ನಡೆದಿವೆ. ರಾಜ್ಯದ ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವರಿಗೂ ಮನವಿ ಸಲ್ಲಿಸಿ ವಿಚಾರವನ್ನು ಮನವರಿಕೆ ಮಾಡಿಕೊಡಲಾಗಿದ್ದು. ಆದರೂ ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ತಕ್ಷಣ ಸಚಿವರು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ತರೀಕೆರೆ ತಹಶೀಲ್ದಾರ್ ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವರದಿ ನೀಡಿರುವುದಾಗಿ ತಿಳಿಸುತ್ತಾರೆ. ಆದರೆ ಜಿಲ್ಲಾಧಿಕಾರಿಗಳು ಯಾವ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿಯುತ್ತಿಲ್ಲ. ಕೂಡಲೇ ಆಕ್ರಮ ಗಣಿಗಾರಿಕೆಯನ್ನು ಸ್ಥಗಿತಗೊಳಿಸದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ತರೀಕೆರೆ ಮಾಜಿ ಶಾಸಕ ಡಿ.ಎಸ್. ಸುರೇಶ್, ಬೆಳ್ಳಿಪ್ರಕಾಶ್, ನಾರಾಯಣಸ್ವಾಮಿ, ಶಿವಕುಮಾರ ಉಪ್ಪರಿಗೆ, ಸಂಪತ್‍ಕುಮಾರ್, ಶಿವಕುಮಾರ್ ಮಾಳಿಗೆ, ಕೆ.ಬಿ. ಸೋಮೇಶ್, ಬಂಕ್‍ಮಂಜು ಉಪಸ್ಥಿತರಿದ್ದರು.