ಗುಂಡ್ಲುಪೇಟೆ: ಪಟ್ಟಣದ ಬಸ್ ನಿಲ್ದಾಣಕ್ಕೆ ಸಚಿವೆ ಡಾ.ಗೀತಾಮಹದೇವಪ್ರಸಾದ್ ಭೇಟಿ, ಪರಿಶೀಲನೆ
ಗುಂಡ್ಲುಪೇಟೆ, ಸೆ.15: ಮಳೆನೀರು ತುಂಬಿಕೊಂಡು ಸಂಚಾರಕ್ಕೆ ಅಸ್ತವ್ಯಸ್ತವಾಗುತ್ತಿದ್ದ ಪಟ್ಟಣದ ಬಸ್ ನಿಲ್ದಾಣಕ್ಕೆ ಸಕ್ಕರೆ ಹಾಗೂ ಸಣ್ಣಕೈಗಾರಿಕಾ ಖಾತೆಯ ರಾಜ್ಯ ಸಚಿವೆ ಡಾ.ಗೀತಾಮಹದೇವಪ್ರಸಾದ್ ಭೇಟಿ ನೀಡಿ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮುಗಿದ ನಂತರ ಪಟ್ಟಣದ ಮಳೆನೀರು ಭಾರೀ ಪ್ರಮಾಣದಲ್ಲಿ ಬಸ್ ನಿಲ್ದಾಣದೊಳಗೆ ಬರುತ್ತಿತ್ತು. ತಾಲೂಕು ಕಚೇರಿ ಬಳಿಯಿಂದಲೂ ಚರಂಡಿಯಲ್ಲಿ ಬರುತ್ತಿದ್ದ ನೀರು ಮೋರಿಗೆ ಸೇರದೆ ನಿಲ್ದಾಣದೊಳಗೆ ಪ್ರವೇಶಿಸಿ ಅಕ್ಷರಃ ಕೆರೆಯಂತಾಗುತ್ತಿತ್ತು. ಬಸ್ಸಿನಿಂದಿಳಿದ ಪ್ರಯಾಣಿಕರ ಮಂಡಿಯುದ್ದಕ್ಕೂ ನಿಂತು ವಾಹನಗಳು ಹಾಗೂ ಪಾದಚಾರಿಗಳ ಸಂಚಾರಕ್ಕೆ ತೀವ್ರ ಅಡಚಣೆಯುಂಟಾಗುತ್ತಿತ್ತು. ಸಮೀಪದ ದ್ವಿಚಕ್ರ ವಾಹನ ನಿಲ್ದಾಣ, ಪ್ಲಾಟ್ ಫಾರಂಗೆ ನುಗ್ಗಿ ಹೆಚ್ಚಿನ ಅನಾನುಕೂಲವಾಗುತ್ತಿತ್ತು.
ಈ ಬಗ್ಗೆ ಹೆದ್ದಾರಿ ಪ್ರಾಧಿಕಾರಿದ ಅಧಿಕಾರಿಗಳು, ಸಾರಿಗೆ ಸಂಸ್ಥೆಯ ಹಿರಿಯ ಅಧಿಕಾರಿಗಳು ಹಾಗೂ ಪುರಸಭೆಯ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಚರ್ಚಿಸಿದರು.
ಇನ್ನು ಹತ್ತು ದಿನಗಳ ಒಳಗೆ ಹಳೆಯ ಒಳಚರಂಡಿಯನ್ನು ದುರಸ್ತಿಗೊಳಿಸುವ ಹಾಗೂ ರಸ್ತೆಯಿಂದ ನೀರು ಒಳಗೆ ಬರದಂತೆ ಮಾಡಲು ಕ್ರಮಕೈಗೊಳ್ಳುವಂತೆ ಇದೇ ವೇಳೆ ಅದಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಪಿ.ಗಿರೀಶ್, ತಾಪಂ ಅಧ್ಯಕ್ಷ ಎಚ್.ಎನ್.ನಟೇಶ್, ಜಿಪಂ ಸದಸ್ಯ ಬಿ.ಕೆ.ಬೊಮ್ಮಯ್ಯ, ಸಾರಿಗೆ ಸಂಸ್ಥೆಯ ಘಟಕ ವ್ಯವಸ್ಥಾಪಕ ಜಯಕುಮಾರ್, ಪುರಸಭೆ ಮುಖ್ಯಾಧಿಕಾರಿ ರಮೇಶ್ ಹಾಗೂ ಇತರರು ಇದ್ದರು.