ಪತಿಯಿಂದಲೇ ಗರ್ಭೀಣಿ ಪತ್ನಿಯ ಕೊಲೆ: ಆರೋಪ
ಚಾಮರಾಜನಗರ, ಸೆ.15: ನಾಲ್ಕು ವರ್ಷಗಳ ಹಿಂದೆ ವಿವಾಹವಾಗಿದ್ದ ಸುಮಿತ್ರಾ ಎಂಬಾಕೆಯನ್ನು ವರದಕ್ಷಿಣೆ ಹಾಗೂ ಅಕ್ರಮ ಸಂಬಂಧ ಉಳಿಸಿಕೊಳ್ಳುವ ಸಲುವಾಗಿ ಪತಿಯೇ ಕೊಲೆ ಮಾಡಿದ್ದಾನೆಂದು ಮೃತ ಮಹಿಳೆಯ ಪೋಷಕರು ಆರೋಪಿಸಿದ್ದಾರೆ.
ಚಾಮರಾಜನಗರ ತಾಲೂಕಿನ ಕೋಡಿಉಗನೆ ಗ್ರಾಮದ ಮೂರ್ತಿ ಎಂಬವರ ಮಗಳು ಸುಮಿತ್ರಾಳನ್ನು ಆಕೆಯ ಪತಿ ಹಾಗೂ ಪತಿಯ ಕುಟುಂಬದವರು ಕೊಲೆ ಮಾಡಿದ್ದಾರೆಂದು ಎಂದು ಆರೋಪಿಸಿ ಸುಮಿತ್ರಾ ಕುಟುಂಬದವರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸುಮಿತ್ರಾಳನ್ನು ಸೋಮವಾರಪೇಟೆಯ ನಾಗರಾಜು ಎಂಬಾತನೊಂದಿಗೆ ನಾಲ್ಕು ವರ್ಷಗಳ ಹಿಂದೆ 50 ಸಾವಿರ ರೂ. ನಗದು, 1ಬೈಕ್ ಹಾಗೂ ಚಿನ್ನದ ಸರ ವರದಕ್ಷಿಣೆ ನೀಡಿ ವಿವಾಹ ಮಾಡಲಾಗಿತ್ತು. ಆದರೆ ನಾಗರಾಜು ತನ್ನ ಅಕ್ರಮ ಸಂಬಂಧ ಇರಿಸಿಕೊಂಡಿದ್ದ ಮಹಿಳೆಯೊಂದಿಗೆ ಬಾಳ್ವೆ ಮಾಡಲು ಗರ್ಭಿಣಿಯಾಗಿದ್ದ ಸುಮಿತ್ರಾಳನ್ನು ಕೊಲೆ ಮಾಡಿ ನೇಣು ಬಿಗಿದ ಸ್ಥಿತಿಯಲ್ಲಿ ನೇತು ಹಾಕಿದ್ದಾರೆ ಎಂದು ಸುಮಿತ್ರಾಳ ತಂದೆ ಮೂರ್ತಿ ದೂರಿನಲ್ಲಿ ಆರೋಪಿಸಿದ್ದಾರೆ.
ರಾಮಸಮುದ್ರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಗ್ರಾಮಾಂತರ ಠಾಣೆಯ ಎಸ್ಸೈಗಳಾದ ರಾಜೇಂದ್ರ, ಆನಂದಗೌಡ ತನಿಖೆ ಮುಂದುವರೆಸಿದ್ದಾರೆ.