ಚಾಮರಾಜನಗರ: ಭಾರೀ ಮಳೆ; ಹಳ್ಳದ ನೀರಿನಲ್ಲಿ ಕೊಚ್ಚಿ ಹೋದ ಎಮ್ಮೆಗಳು
ಚಾಮರಾಜನಗರ, ಸೆ.15: ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಶನಿವಾರ ಭಾರೀ ಮಳೆಯಾಗುತ್ತಿದ್ದು, ಮಳೆಯ ಅಬ್ಬರದಿಂದ ಗಡಿ ಅಂಚಿನಲ್ಲಿರುವ ಹೂಗ್ಯಂ ಡ್ಯಾಂ ಸಂಪೂರ್ಣವಾಗಿ ಭರ್ತಿಯಾಗಿದ್ದು, ಮಹದೇಶ್ವರ ಬೆಟ್ಟದ ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಿಂದಾಗಿ ನಾಲ್ಕು ಎಮ್ಮೆಗಳು ನೀರಿನಲ್ಲಿ ಕೊಚ್ಚಿ ಹೋದ ಘಟನೆ ಶನಿವಾರ ನಡೆದಿದೆ.
ಕರ್ನಾಟಕ ಮತ್ತು ತಮಿಳುನಾಡು ಗಡಿಯಲ್ಲಿರುವ ಕೊಳ್ಳೇಗಾಲ ತಾಲೂಕಿನ ಹನೂರು ಸಮೀಪದ ಹೂಗ್ಯಂ ಡ್ಯಾಂ ಮಳೆಯ ನೀರು ಅಧಿಕವಾಗಿ ಹರಿದು ಬರುತ್ತಿರುವುದರಿಂದ ಡ್ಯಾಂ ಸಂಪೂರ್ಣ ಭರ್ತಿಯಾಗಿದ್ದು, ಕೋಡಿ ಬೀಳುತ್ತಿದೆ. ಹೂಗ್ಯಂ ಡ್ಯಾಂ ಬಳಿ ಇರುವ ಹಲವಾರು ಗ್ರಾಮಗಳಲ್ಲಿ ಮಳೆಯ ನೀರು ಅಧಿಕವಾಗಿ ಹರಿದು ಬರುತ್ತಿರುವುದನ್ನು ಕಂಡ ಕೃಷಿಕರು ಹರ್ಷ ಚಿತ್ತರಾಗಿದ್ದಾರೆ.
ಬಿಸಿಲಿನ ತಾಪದಲ್ಲಿದ್ದ ರೈತರು ಇದೀಗ ತುಸು ನೆಮ್ಮದಿಯ ಜೀವನ ಸಾಗಿಸುವಂತಾಗಿದೆ. ಕೊಳ್ಳೇಗಾಲ ತಾಲೂಕಿನ ಹನೂರು ಸಮೀಪದ ಮಲೆ ಮಹದೇಶ್ವರ ಬೆಟ್ಟದ ವ್ಯಾಪ್ತಿಯಲ್ಲಿ ಅಧಿಕ ಮಳೆಯಾಗಿರುವುದರಿಂದ ಮಹದೇಶ್ವರ ಬೆಟ್ಟದ ಬಳಿ ಇರುವ ಹಳಿಯೂರು ಹಳ್ಳ ದಾಟುತ್ತಿದ್ದ ನಾಲ್ಕು ಎಮ್ಮೆ ಹಾಗೂ ಕರುಗಳು ಸಾರ್ವಜನಿಕರು ನೋಡುತ್ತಿರುವಾಗಲೇ ಕೊಚ್ಚಿ ಹೋದ ಘಟನೆ ವರದಿಯಾಗಿದೆ.