×
Ad

ಕಳಸ ತಾಲೂಕು ಕೇಂದ್ರವಾಗಿ ಶೀಘ್ರದಲ್ಲಿ ಘೋಷಣೆ: ಸಚಿವ ರೋಷನ್ ಬೇಗ್

Update: 2017-09-15 22:26 IST

ಮೂಡಿಗೆರೆ, ಸೆ.15: ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಹೋಬಳಿಯನ್ನು ತಾಲೂಕು ಕೇಂದ್ರವನ್ನಾಗಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ನಗರಾಭಿವೃದ್ಧಿ, ಹಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್. ರೋಷನ್ ಬೇಗ್ ತಿಳಿಸಿದ್ದಾರೆ.

ಅವರು ಶುಕ್ರವಾರ ಇಲ್ಲಿನ ತಾಪಂ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಹಾಗೂ ಮೂಡಿಗೆರೆ ತಾಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಳಸ ಹೋಬಳಿಯನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸುವ ನಿಟ್ಟಿನಲ್ಲಿ ಈಗಾಗಲೇ ಕಂದಾಯ ಸಚಿವರೊಂದಿಗೆ ಚರ್ಚಿಸಲಾಗಿದೆ, ಕ್ಯಾಬಿನೆಟ್ ಸಭೆಯಲ್ಲೂ ಕೂಡ ವಿಷಯ ಪ್ರಸ್ತಾಪಿಸಲಾಗಿದ್ದು ಅದಷ್ಟು ಬೇಗ ಕ್ರಮ ಕೈಗೊಂಡು ಕಳಸ ಜನರ ಬಹುದಿನಗಳ ಬೇಡಿಕೆಯನ್ನು ಈಡೇರಿಸಲಾಗುವುದು ಎಂದರು.

ಜಿಲ್ಲೆಯಲ್ಲಿ ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಸಿಬ್ಬಂದಿಗಳ ಕೊರತೆಯಿಂದಾಗಿ ಕೆಲಸ ಕಾರ್ಯಗಳಿಗೆ ಹಿನ್ನಡೆಯುಂಟಾಗಿದೆ ಈ ಕುರಿತು ಸಂಬಂಧಿಸಿದವರೊಡನೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಪಡಿತರ ಚೀಟಿಗಾಗಿ ಬಂದಿರುವ ಅರ್ಜಿಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಫಲಾನುಭವಿಗಳಿಗೆ ನೀಡುವಂತೆ ಆಹಾರ ಇಲಾಖೆ ಉಪನಿರ್ದೇಶಕರಿಗೆ  ಸೂಚಿಸಿದರು.

ಜಿಲ್ಲಾಧಿಕಾರಿ ಜಿ.ಸತ್ಯವತಿ ಮಾತನಾಡಿ, ಪಡಿತರ ಚೀಟಿ ವಿತರಣೆಗೆ ಸಂಬಂಧಿಸಿದಂತೆ ಪ್ರತಿದಿನ ಅನ್‍ಲೈನ್ ಗೆ ನಮೂದಿಸಬೇಕಾಗಿದ್ದು ರಾಜ್ಯದಲ್ಲಿ ಚಿಕ್ಕಮಗಳೂರು ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ವಸತಿ ರಹಿತರನ್ನು ಗುರುತಿಸಿ ಅರ್ಹರಿಗೆ ಮನೆಗಳನ್ನು ಮಂಜೂರು ಮಾಡುವಂತೆ ಸಚಿವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಈಗಾಗಲೇ ಮನೆಗಳನ್ನು ನಿವೇಶನ ಇರುವವರಿಗೆ ಮಂಜೂರು ಮಾಡಲಾಗಿದೆ. ಮನೆ ಇಲ್ಲದವರನ್ನು ಗುರುತಿಸಲಾಗಿದ್ದು ಅವರಿಗೆ ನಿವೇಶನ ಇರುವುದಿಲ್ಲ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. 

ಶಾಸಕ ಬಿ.ಬಿ ನಿಂಗಯ್ಯ ಮಾತನಾಡಿ, ಜಿಲ್ಲೆಯಲ್ಲಿ ನಿವೇಶನ ರಹಿತರಿಗೆ ವಸತಿಗಾಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ, ಸ್ಮಶಾನ ಸೇರಿದಂತೆ ಸಾರ್ವಜನಿಕ ಉದ್ದೇಶಕ್ಕೆ 2000 ಎಕರೆಯಷ್ಟು ಭೂಮಿ ಬೇಕಾಗುತ್ತದೆ. ಎಲ್ಲೆಲ್ಲಿ ಯಾವ ಉದ್ದೇಶಕ್ಕೆ ಜಾಗ ಬೇಕೆಂಬುದರ ಕುರಿತು ಶೀಘ್ರದಲ್ಲಿ ತಮಗೆ ಮಾಹಿತಿ ನೀಡಲಾಗುವುದು ಜಿಲ್ಲೆಯ ಎಲ್ಲಾ ಶಾಸಕರುಗಳ ಸಭೆ ಕರೆದು ಚರ್ಚಿಸಿ ಕ್ರಮ ಕೈಗೊಳ್ಳಬೇಕು ಎಂದರು.

ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚಿಸಿದ ಅವರು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಜನರಿಕ್ ಔಷಧಿ ಮಳಿಗೆಗಳಲ್ಲಿ ಯಾವುದೇ ಕಾರಣಕ್ಕೂ ಬ್ರಾಂಡೆಂಡ್ ಔಷಧಿಗಳನ್ನು ಮಾರಾಟ ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಬಗರ್ ಹುಕ್ಕುಂ ಸಾಗುವಳಿಗೆ ಸಂಬಂಧಿಸಿದಂತೆ ಫಾರಂ 15 ಹಾಗೂ 94 ಸಿ ಅಡಿ ಬಂದಿರುವ ಅರ್ಜಿಗಳನ್ನು ಶೀಘ್ರದಲ್ಲಿ ಇತ್ಯರ್ಥ ಮಾಡಲು ವಿಧಾನ ಸಭಾ ಅದಿವೇಶನದಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳುವಂತೆ ಶಾಸಕ ಬಿ,ಬಿ. ನಿಂಗಯ್ಯ ಮನವಿ ಮಾಡಿದರು. 

ಸಭೆಯಲ್ಲಿ ಜಿಲ್ಲಾಧಿಕಾರಿ ಜಿ. ಸತ್ಯವತಿ, ಎಸ್ಪಿ ಕೆ. ಅಣ್ಣಾಮಲೈ, ತಾಪಂ ಅಧ್ಯಕ್ಷ ಕೆ.ಸಿ.ರತನ್, ಉಪಾಧ್ಯಕ್ಷೆ ಸವಿತಾ ರಮೇಶ್, ಜಿ.ಪಂ. ಸದಸ್ಯರಾದ ಪ್ರಭಾಕರ್, ಶಾಮಣ್ಣ, ಅಮಿತಾ ಮುತ್ತಪ್ಪ, ಸುಧಾಯೋಗೇಶ್, ತಾಪಂ. ಸದಸ್ಯೆ ಭಾರತೀ ರವೀಂದ್ರ ಉಪಸ್ಥಿತರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News