ಮನೆ ಬೀಗ ಒಡೆದು ಆಭರಣ ಕಳವು

Update: 2017-09-15 17:45 GMT

ಕೊರಟಗೆರೆ,ಸೆ.15: ಮನೆಯೊಂದರ ಬೀಗ ಒಡೆದು ಒಳನುಗ್ಗಿರುವ ಕಳ್ಳರು ಸಾವಿರಾರು ಬೆಲೆಯ ಬೆಳ್ಳಿ ಆಭರಣಗಳನ್ನು ದೋಚಿಕೊಂಡು ಪರಾರಿಯಾಗಿರುವ ಘಟನೆ ಪಟ್ಟಣದ ಕೋಟೆ ಬೀದಿಯಲ್ಲಿ ಮಧ್ಯರಾತ್ರಿ ನಡೆದಿದೆ.

ಇಲ್ಲಿನ ಕೋಟೆಬೀದಿಯ ವಾಸಿ ಗಾರೆ ರಾಮಣ್ಣ ಎಂಬುವರ ಮನೆಯಲ್ಲಿ ಈ ಕೃತ್ಯ ನಡೆದಿದೆ.

ಗಾರೆ ರಾಮಣ್ಣ ಕುಟುಂಬ ಸಮೇತರಾಗಿ ಮನೆಗೆ ಬೀಗ ಹಾಕಿಕೊಂಡು ಊರಿಗೆ ಹೋಗಿದ್ದರು. ಇದನ್ನು ಹೊಂಚು ಹಾಕಿರುವ ಕಳ್ಳರು ದ್ವಿಚಕ್ರ ವಾಹನದಲ್ಲಿ ಬಂದು ಮನೆಯ ಬೀಗ ಒಡೆದು ಮನೆಯೊಳಗಿದ್ದ ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿ ಬೆಳ್ಳಿ ಆಭರಣಗಳನ್ನು ದೋಚಿದ್ದಾರೆಂದು ತಿಳಿದು ಬಂದಿದೆ.


ಕಳ್ಳರು ದ್ವಿಚಕ್ರ ವಾಹನದಲ್ಲಿ ಬಂದಿರುವುದನ್ನು ನೋಡಿದ ಸ್ಥಳೀಯ ಪುಟ್ಟ ನರಸಯ್ಯ ಎಂಬುವರನ್ನು ಗಲಾಟೆ ಮಾಡಲು ಮುಂದಾದಾಗ ಕಳ್ಳರು ರಾಡ್‍ನಿಂದ ಇವರ ಮೇಲೆ ಹಲ್ಲೆ ನಡೆಸಿದ್ದು, ಅದೃಷ್ಟವಶಾತ್ ರಾಡ್ ತಲೆಯ ಬದಲು ಕೈಗೆ ಬಿದ್ದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದರಿ ಕಳ್ಳರು ಮನೆಗೆ ನುಗ್ಗುವುದಕ್ಕೂ ಮುನ್ನ ಪತ್ರಕರ್ತರ ಕಾರನ್ನು ಕದಿಯಲು ಸಹ ಯತ್ನಿಸಿದ್ದಾರೆ. ಕಳ್ಳರು ಕಾರನ್ನು ಮುಟ್ಟಿದ ತಕ್ಷಣ ಸೈರನ್ ಕೂಗಿಕೊಂಡಿದ್ದರಿಂದ ಕಳ್ಳರು ಅಲ್ಲಿಂದ ಕಾಲ್ಕಿತ್ತಿದ್ದಾರೆ ಎನ್ನಲಾಗಿದೆ. 

ಕಳೆದ ವಾರವಷ್ಟೆ ಪಟ್ಟಣದ ಹೊಸಬಡಾವಣೆಯಲ್ಲಿ ಬೀಗ ಹಾಕಿದ್ದ ಮನೆಗೆ ನುಗ್ಗಿ ಕಳ್ಳತನ ಮಾಡಲು ಯತ್ನಿಸಿದ್ದರು. ಇದನ್ನು ಅಕ್ಕಪಕ್ಕದ ಮನೆಯವರು ಕಿಟಕಿಯಲ್ಲಿ ನೋಡಿ ಗಲಾಟೆ ಮಾಡಿದ್ದರಿಂದ ಕಳ್ಳರು ಅಲ್ಲಿಂದ ಪರಾರಿಯಾಗಿದ್ದರು. ಪಟ್ಟಣದಲ್ಲಿ ಬೀಗ ಹಾಕಿರುವ ಮನೆಗಳನ್ನು ಗುರಿಯಾಗಿಸಿಕೊಂಡು ಕಳ್ಳತನಕ್ಕೆ ಯತ್ನಿಸುತ್ತಿರುವ ಪ್ರಕರಣಗಳು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದ್ದು, ನಾಗರಿಕರು ತೀವ್ರ ಭಯ ಭೀತರಾಗಿದ್ದಾರೆ.ಕೂಡಲೇ ಪೊಲೀಸರು ಇಲಾಖೆ ಅಧಿಕಾರಿಗಳು ಪಟ್ಟಣದಲ್ಲಿ ಹೆಚ್ಚುತ್ತಿರುವ ಕಳ್ಳತನ ಪ್ರಕರಣಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News