ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್: ವ್ಯಕ್ತಿಯನ್ನು ಬಂಧಿಸುವಂತೆ ಆಗ್ರಹಿಸಿ ಧರಣಿ

Update: 2017-09-15 17:57 GMT

ಶಿಕಾರಿಪುರ, ಸೆ.15: ತಾಲೂಕಿನ ಮಟ್ಟಿಕೋಟೆ ಗ್ರಾಮದ ಯುವಕನೋರ್ವ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿ ಹಿಂದುಗಳ ಭಾವನೆಗೆ ಧಕ್ಕೆ ತಂದಿದ್ದು, ಈ ಯುವಕನನ್ನು ಬಂಧಿಸುವಂತೆ ಒತ್ತಾಯಿಸಿ ವಿವಿಧ ಹಿಂದೂಪರ ಸಂಘಟನೆಗಳ ವತಿಯಿಂದ ಡಿವೈಎಸ್ಪಿಗೆ ಶುಕ್ರವಾರ ದೂರು ಸಲ್ಲಿಸಲಾಯಿತು.

ಈ ವೇಳೆ ಕಾರ್ಯಕರ್ತರು, ಕೇಂದ್ರ ಸರ್ಕಾರ ಗೋಹತ್ಯೆಯನ್ನು ನಿಷೇಧಿಸಿದ್ದು, ಅಕ್ರಮ ಗೋಸಾಗಾಟ, ಹತ್ಯೆಯು ಕಾನೂನು ರೀತಿ ಅಪರಾಧವಾಗಿದೆ. ಈ ದಿಸೆಯಲ್ಲಿ ಪೊಲೀಸರು ಗೋ ಹಂತಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಇತ್ತೀಚೆಗೆ ಶಿರಾಳಕೊಪ್ಪದಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ವ್ಯಕ್ತಿಗಳನ್ನು ಪ್ರಶ್ನಿಸಿದ ಹಿಂದೂ ಯುವಕರ ಮೇಲೆ ನಡೆದ ಹಲ್ಲೆಯನ್ನು ಸಮರ್ಥಿಸಿಕೊಳ್ಳುವ ರೀತಿಯಲ್ಲಿ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ರಹೀಮ್  ಎಂಬ ವ್ಯಕ್ತಿ ತನ್ನ ಖಾತೆಯಿಂದ ಕರ್ನಾಟಕದ ಶಿರಾಳಕೊಪ್ಪದಲ್ಲಿ ಗೋರಕ್ಷಕರನ್ನು ರುಬ್ಬಿದ ಜನ, ಯಾವತ್ತೋ ಆಗ್ಬೇಕಿತ್ತು ಈ ಕೆಲಸ ಎಂಬುದಾಗಿ ಬರಹ ದಾಖಲಿಸಿ ಹಿಂದೂಗಳ ಭಾವನೆಗೆ ಧಕ್ಕೆ ತರುವ ರೀತಿಯಲ್ಲಿ ಪೋಸ್ಟ್ ಮಾಡಿದ್ದು, ಇದರಿಂದಾಗಿ ಸಮಾಜದ ಶಾಂತಿ ಕೋಮು ಸೌಹಾರ್ಧತೆಗೆ ಭಂಗ ಉಂಟಾಗಲಿದೆ. ಈ ಕೂಡಲೇ ಸೈಬರ್ ಕ್ರಿಮಿನಲ್ ದೂರು ದಾಖಲಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿ ಯುವಕನ ಬಂಧನಕ್ಕೆ ಆಗ್ರಹಿಸಿ ಡಿವೈಎಸ್ಪಿ ರವರಿಗೆ ಮನವಿ ಸಲ್ಲಿಸಲಾಯಿತು.

ಮನವಿ ಸ್ವೀಕರಿಸಿದ ಡಿವೈಎಸ್ಪಿ ಸುಧಾಕರ್ ನಾಯಕ್ ಮಾತನಾಡಿ, ಈಗಾಗಲೇ ಶಂಕಿತ ಯುವಕನ ಬಂಧನಕ್ಕೆ ಸಿದ್ಧತೆಯನ್ನು ಕೈಗೊಳ್ಳಲಾಗಿದೆ. ಶಾಂತಿ ನೆಮ್ಮದಿ ವಾತಾವರಣಕ್ಕೆ ಭಂಗ ತರುವ ವ್ಯಕ್ತಿಗಳ ಬಗ್ಗೆ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ವಿಹಿಂಪ ಮಾಜಿ ಅಧ್ಯಕ್ಷ ಮಂಜುನಾಥ, ಭವರ್‌ಸಿಂಗ್, ಉಪಾಧ್ಯಕ್ಷ ಎಸ್.ಎಂ ಪ್ರಕಾಶ್, ಗಿರೀಶ್ ಘೋರ್ಪಡೆ, ಗುರುರಾಜ ಜಕ್ಕಿನಕೊಪ್ಪ, ಪ್ರವೀಣ ಹದಡಿ, ಪವನಕುಮಾರ್, ರಘುನಿರ್ಮಿತ್, ಪ್ರವೀಣಬೆಣ್ಣೆ, ಕಲ್ಪವೃಕ್ಷ ಟ್ರಸ್ಟ್ ಅಧ್ಯಕ್ಷ ರಘು, ಪರಶುರಾಮ ಮತ್ತಿತರರು ಹಾಜರಿದ್ದರು.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News