×
Ad

ಗೌರಿ ಲಂಕೇಶ್ ಹತ್ಯೆ ನಾಡಿನ ಬಹುಸಂಖ್ಯಾತರ ಆತ್ಮ ಸಾಕ್ಷಿಯನ್ನು ಬಡಿದೆಬ್ಬಿಸಿದೆ: ದಿನೇಶ್ ಅಮೀನ್‍ಮಟ್ಟು

Update: 2017-09-16 19:02 IST

ಮೈಸೂರು, ಸೆ.16: ಗೌರಿ ಲಂಕೇಶ್ ಅವರ ಹತ್ಯೆಯು ನಾಡಿನ ಬಹುಸಂಖ್ಯಾತರ ಆತ್ಮಸಾಕ್ಷಿಯನ್ನು ಬಡಿದೆಬ್ಬಿಸಿದೆ. ಅದಕ್ಕೆ ಗೌರಿ ಕೊಲೆಯ ನಂತರ ನಡೆದ ಬೆಂಗಳೂರಿನಲ್ಲಿ ಸಮಾವೇಶ, ಮೈಸೂರಿನ ಪ್ರತಿಭಟನಾ ಮೆರವಣಿಗೆ ಮತ್ತು ಇಂದಿನ ಈ ಕಾರ್ಯಕ್ರಮವಾಗಿದೆ. ಗೌರಿ ಜೀವಂತವಿದ್ದಾಗ ಸಾಧಿಸದನ್ನು ಸಾವಿನ ಮೂಲಕ ಸಾಧಿಸಿದ್ದಾರೆ ಎಂದು  ಎಂದು ಮುಖ್ಯಮಂತ್ರಿಗಳ ಪತ್ರಿಕಾ ಸಲೆಹೆಗಾರ ದಿನೇಶ್ ಅಮೀನ್‍ಮಟ್ಟು ಅಭಿಪ್ರಾಯಿಸಿದರು.

ಮೈಸೂರು ವಿಶ್ವವಿದ್ಯಾನಿಲಯದ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರ, ದಲಿತ ಸಂಘರ್ಷ ಸಮಿತಿ, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಯುವ ಪ್ರಗತಿಪರ ಚಿಂತಕರ ಸಂಘ ಸಂಯುಕ್ತಾಶ್ರಯದಲ್ಲಿ ಮಾನಸಗಂಗೋತ್ರಿ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಸಮಾಜಮುಖಿ ಪತ್ರಕರ್ತೆ ಗೌರಿ ಲಂಕೇಶ್ ನೆನಪಿನಲ್ಲಿ `ಬಹುಸಂಸ್ಕೃತಿ  ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಮೂಲಭೂತವಾದದ ಕ್ರೌರ್ಯ; ನಮ್ಮ ಮುಂದಿನ ಸವಾಲು ಮತ್ತು ಸಾಧ್ಯತೆಗಳು' ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ “ಅಭಿವ್ಯಕ್ತಿ ಸ್ವಾತಂತ್ರ್ಯದ ಹತ್ತಿಕ್ಕುವಿಕೆ ತಂದೊಡ್ಡುವ ಅಪಾಯಗಳು” ನಮ್ಮ ಮುಂದಿರುವ ಸಾಮೂಹಿಕ ಜವಾಬ್ದಾರಿಗಳು” ಕುರಿತು  ಅವರು ಮಾತನಾಡಿದರು.

ಪ್ರಸ್ತುತ ಹಸಿವು ಮುಕ್ತ, ಬಡತನ ಮುಕ್ತ ರಾಜ್ಯವಾಗಬೇಕು ಎಂಬ ಪರಿಕಲ್ಪನೆಗಿಂತ ಮುಖ್ಯವಾಗಿ ಭಯ ಮುಕ್ತ ಕರ್ನಾಟಕ ನಿರ್ಮಾಣ ಆಗಬೇಕಿದೆ. ನಮ್ಮ ಸಜ್ಜನ ಬಹುಸಂಖ್ಯಾತರು ಮಹಾಮೌನಿಗಳು ಮೌನ ಮುರಿದು ಮಾತನಾಡಬೇಕು. ಗೌರಿ ಅವರನ್ನು ಕೊಲೆ ಮಾಡಿದ್ದೇಕೆ ಎಂದು ಪ್ರಶ್ನಿಸಬೇಕಿದೆ ಎಂದರು.

ಗೌರಿ ಕ್ರಿಯಾಶೀಲ ಪತ್ರಕರ್ತೆಯಾಗಿದ್ದರು. ಆಕೆ ಖಚಿತ ನಿಲುವಿನಿಂದ ಬರೆಯುತ್ತಿದ್ದರು. ಪತ್ರಕರ್ತರು ಸತ್ಯದ ವಿಚಾರ ಬಂದಾಗ ಅದರ ಪಕ್ಷಪಾತಿಯಾಗಲೇಬೇಕು. ಗೌರಿ ಮಾಡಿದ್ದು ಅದೇ ಕೆಲಸ. ಹಾಗಾಗಿ ಗೌರಿ ಅವರ ಹತ್ಯೆ ಕೇವಲ ಒಬ್ಬ ಪತ್ರಕರ್ತೆಯ ಕೊಲೆಯಲ್ಲ; ಅದು ಒಂದು ವೈಚಾರಿಕ ವಿಚಾರದ ಹತ್ಯೆಯಾಗಿದೆ ಎಂದರು.

ಇಂದಿರಾ ಗಾಂಧಿ ಅವರು ತುರ್ತು ಪರಿಸ್ಥಿತಿಯ ಕಾಲದಲ್ಲಿ ಕೂಡ ಪತ್ರಕರ್ತರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೇರವಾಗಿ ಹತ್ತಿಕ್ಕುವ ಪ್ರಯತ್ನ ಮಾಡಿದ್ದರು. ಅದು ಬಹಿರಂಗ ಸತ್ಯ. ಇವತ್ತಿನ ರಾಜಕೀಯ ಪರಿಸ್ಥಿತಿ ಬೇರೆ ಇದೆ. ಸಂವಿಧಾನೇತರ ಶಕ್ತಿಗಳು ದೇಶವನ್ನಾಳುತ್ತಿವೆ. ಅದರ ಕೇಂದ್ರಸ್ಥಾನ ನಾಗಪುರದಲ್ಲಿದೆ. ನಾವು ಆ ಮುಖವಾಡಗಳ ಹಿಂದಿನ ನಿಜವಾದ ಮುಖವನ್ನು ಪತ್ತೆ ಮಾಡಲು ಹೋರಾಡಬೇಕಿದೆ ಎಂದು ನುಡಿದರು.

ಗೌರಿ ಲಂಕೇಶ್ ಹತ್ಯೆಯಾಗಿದೆ. ಆ ಕೊಲೆಯನ್ನು ಮಾಡಿದವರು ಯಾರು ಎಂದು ಗೊತ್ತಿಲ್ಲ, ಆದರೆ ಇದನ್ನು ಸಂಭ್ರಮಿಸಿದವರು ಯಾರು ಎಂದು ಗೊತ್ತಿದೆ. ಹತ್ಯೆ ಮಾಡಿದವರು ಎಂದು ಗೊತ್ತಾಗುತ್ತದೆ. ಕೊಲೆ ಮಾಡಿದವರಿಗೆ ಶಿಕ್ಷೆಯಾಗುತ್ತದೆ. ಆದರೆ ಈ ಕೊಲೆಗೆ ಕಾರಣಕರ್ತರಾದವರಿಗೆ ಏನು ಶಿಕ್ಷೆ? ಮೊದಲು ಅವರನ್ನು ಪತ್ತೆ ಹಚ್ಚಬೇಕಿದೆ ಎಂದು ಹೇಳಿದರು. 

ಬಲಪಂಥೀಯರಲ್ಲಿ ಬುದ್ಧಿಜೀವಿಗಳಿಲ್ಲ. ಎಡಪಂಥೀಯರಲ್ಲಿ ಬುದ್ಧಿಜೀವಿಗಳಿದ್ದಾರೆ. ಅವರು ನಾವು ಎಡಪಂಥೀಯರು ಅಥವಾ ಕಮ್ಯುನಿಸ್ಟ್ ಗಳು ಅಂತ ಎದೆತಟ್ಟಿ ಹೇಳಿಕೊಳ್ಳುತ್ತಾರೆ. ಆದರೆ ಬಲಪಂಥೀಯರು ಯಾರೂ ನಾವು ಬಲಪಂಥೀಯರ ಬುದ್ಧಿಜೀವಿಗಳು ಅಂತ ಬಹಿರಂಗವಾಗಿ ಹೇಳುತ್ತಿಲ್ಲ ಎಂದು ಲೇವಡಿ ಮಾಡಿದರು.

ಕರ್ನಾಟಕದಲ್ಲಿ ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ, ಡಾ.ಎಂ.ಚಿದಾನಂದ ಮೂರ್ತಿ, ದೊಡ್ಡರಂಗೇಗೌಡ ಅವರು ಬಲಪಂಥೀಯ ಬುದ್ಧಿಜೀವಿಗಳೆನ್ನಬಹುದು. ಆದರೆ, ಅವರು ಕೂಡ ಬಹಿರಂಗವಾಗಿ ಅದನ್ನು ಒಪ್ಪಿಕೊಳ್ಳುತ್ತಿಲ್ಲ ಎಂದ ಅವರು, ಚುನಾವಣೆಯನ್ನು ಆಡಳಿತ ಅಥವಾ ಭ್ರಷ್ಟಾಚಾರ ವಿಷಯ ಇಟ್ಟುಕೊಂಡು ಎದುರಿಸಬಹುದು. ಆದರೆ, ಧರ್ಮವನ್ನು ಇಟ್ಟುಕೊಂಡ ಚುನಾವಣೆಯಲ್ಲಿ ಗೆಲುವು ಸಾಧಿಸುವ ಪ್ರಯತ್ನ ಖಂಡನೀಯ. ಮಾಧ್ಯಮಗಳನ್ನು ಓಲೈಸಲು ಪ್ರಭುತ್ವ ಅಥವಾ ಪರಿವಾರ ಸತತ ಪ್ರಯತ್ನ ಮಾಡುತ್ತಿವೆ. ಒಪ್ಪದೇ ಇದ್ದಾಗ ಪತ್ರಕರ್ತರ ಕೊಲೆಗೆ ಮುಂದಾಗುತ್ತವೆ ಎನಿಸುತ್ತದೆ ಎಂದರು.

ಸಾಂಸ್ಕೃತಿಕ ವಕ್ತಾರರಂತೆ ವರ್ತಿಸುವವರಿಗೇ ಸಂಸ್ಕೃತಿಯ ಅರಿವೇ ಇಲ್ಲ. ಗೋವುಗಳನ್ನು ಕಟುಕರಿಗೆ ಮಾರಾಟ ಮಾಡುವ ಮೂಲಕ ಅವಮಾನ ಮಾಡುತ್ತಿದ್ದೇವೆ ಎಂದು ಯಾವ ರೈತರೂ ಭಾವಿಸುವುದಿಲ್ಲ. ಭಾರತದ ಈಶಾನ್ಯ ಭಾಗದಲ್ಲಿ ಕೆಲ ಸಮುದಾಯಗಳು ಕೋತಿ ಮಾಂಸವನ್ನು ತಿನ್ನುತ್ತಾರೆ. ಅವರು ಭಾರತ ಸಂಸ್ಕøತಿಯೊಂದಿಗೆ ಅವಿನಾಭಾವವಾಗಿದ್ದಾರೆ. ಇಸ್ಲಾಂ ಧರ್ಮದಲ್ಲಿ ಹಂದಿ ಮಾಂಸ ಸೇವಿಸಬಾರದು ಎಂಬ ಪ್ರಸ್ತಾಪವಿದೆ. ಅದರ ಹೊರತಾಗಿ ಇಂಥದ್ದನ್ನು ತಿನ್ನಬೇಕು, ಇಂತಹದ್ದನ್ನು ತಿನ್ನಬಾರದು ಎಂದು ಬೇರೆ ಯಾವುದೇ ಧರ್ಮದ ಗ್ರಂಥದಲ್ಲಿ ಹೇಳಿಲ್ಲ ಎಂದು ಬಂಜಗೆರೆ ತಿಳಿಸಿದರು.

ಒಬ್ಬರ ರೀತಿಯೇ ಇನ್ನೊಬ್ಬರೂ ಆಲೋಚಿಸಬೇಕು ಎಂಬುದೇ ಅಮಾನವೀಯತೆ ಪ್ರಜಾತಂತ್ರದ ಮೂಲತತ್ವವೇ ಎಲ್ಲ ಚಿಂತನೆಗಳು, ಆಲೋಚನೆಗಳನ್ನು ಪ್ರತಿನಿಧಿಸಬೇಕು ಎಂಬುದಾಗಿದೆ. ಗೌರಿ ಲಂಕೇಶ್ ಅವರಿಗಿದ್ದ ವಿಭಿನ್ನ ಚಿಂತನಾಕ್ರಮವೇ ಅವರ ವಧೆಗೆ ಅರ್ಹವಾಯಿತೇ ಎಂಬುದು ಪ್ರಶ್ನಾರ್ಹ. ಬಹುತ್ವ ಇದ್ದರೆ ಮಾತ್ರ ನೆಮ್ಮದಿ ನಾಳೆಗಳನ್ನು ನೋಡಬಹುದು ಎಂದರು.

ಈ ವೇಳೆ ಪ್ರೊ.ಚ.ಸರ್ವಮಂಗಳ ಅವರು ಸಂವಿಧಾನದ ಪ್ರಸ್ತಾವನೆಯನ್ನು ಒಳಗೊಂಡ ಕರಪತ್ರವನ್ನು ಬಿಡುಗಡೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.  

ಕಾರ್ಯಕ್ರಮದಲ್ಲಿ ಶಾಸಕ, ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡ ಕೆ.ಎಸ್.ಪುಟ್ಟಣ್ಣಯ್ಯ, ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರದ ಸಂಯೋಜನಾಧಿಕಾರಿ ಡಾ.ಎಸ್.ನರೇಂದ್ರಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.  ಅಧ್ಯಕ್ಷತೆಯನ್ನು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೂಡು ವಹಿಸಿದ್ದು, ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಂಶುಪಾಲ ಮಂಡ್ಯ ಪ್ರೊ.ಹುಲ್ಕೆರೆ ಮಹಾದೇವ್, ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ, ಜಿಲ್ಲಾ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ದಸಂಸ ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್, ಯುವ ಪ್ರಗತಿಪರ ಚಿಂತಕರ ಸಂಘದ ಅಧ್ಯಕ್ಷ ಬಿ.ಶಿವಶಂಕರ್ ಪಾಲ್ಗೊಂಡಿದ್ದರು.


ನಾಡಿನ ಬಹುಸಂಖ್ಯಾತರ ಆಹಾರ ಪದ್ಧತಿ ಮೇಲೆ ನಿಯಂತ್ರಣ ಹೇರುವುದು ಅಕ್ಷಮ್ಯ ಅಪರಾಧ, ಒಬ್ಬ ವ್ಯಕ್ತಿ ಏನನ್ನು ತಿನ್ನಬೇಕು, ಹೇಗೆ ಮಲಗಬೇಕು, ಹೇಗೆ ಇರಬೇಕು ಮತ್ತು ನಾವು ಹೇಳಿದ ರೀತಿಯಲ್ಲಿ ನಡೆಯಬೇಕು ಎಂಬ ನಿಯಂತ್ರಣ ಸರಿಯಲ್ಲ, ದನದ ಮಾಂಸ ತಿನ್ನಬಾರದು ಎಂದು ಹೇಳುವ ಮನುಸ್ಕೃತಿಗಳು, ಹಸುವಿನ ಹಾಲನ್ನು ಸೇವಿಸುತ್ತಾರೆ. ಹಾಗದರೆ ಅದು ಮಾಂಸಹಾರ ಅಲ್ಲದೆ ಸಸ್ಯಹಾರವೇ.
  -ಕೆ.ಎಸ್.ಪುಟ್ಟಣ್ಣಯ್ಯ, ಶಾಸಕರು                                     


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News