ವಿದ್ಯಾರ್ಥಿಗಳನ್ನು ದೇಶದ ಸತ್ಪ್ರಜೆಯಾಗಿ ರೂಪಿಸುವುದು ಶಿಕ್ಷಕರ ಕೆಲಸ: ಡಾ.ಎಸ್. ಲೋಕೇಶ್

Update: 2017-09-16 13:40 GMT

ಸಾಗರ, ಸೆ.16: ಪ್ರತಿಯೊಂದು ಸರ್ಕಾರಿ ಹಾಗೂ ಅನುದಾನಿತ ಶಾಲೆಯಲ್ಲಿ ಕನ್ನಡಿ, ಬಾಚಣಿಗೆ ಹಾಗೂ ಉಗುರು ತೆಗೆಯುವ ಯಂತ್ರ ಕಡ್ಡಾಯವಾಗಿ ಇರಲಿ. ಮಕ್ಕಳಲ್ಲಿ ಶಿಸ್ತು ಅಳವಡಿಸಲು ಇಂತಹದ್ದನ್ನು ಅನುಸರಿಸುವುದರಿಂದಲೇ ಸ್ವಚ್ಛತೆ ಆರಂಭಗೊಳ್ಳಲಿ ಎಂದು ಜಿಲ್ಲಾಧಿಕಾರಿ ಡಾ.ಎಸ್. ಲೋಕೇಶ್ ತಿಳಿಸಿದರು. 

ಇಲ್ಲಿನ ಎಲ್ ಬಿ ಕಾಲೇಜಿನ ದೇವರಾಜ ಅರಸು ಕಲಾಭವನದಲ್ಲಿ ಶುಕ್ರವಾರ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಪ್ರೌಢಶಾಲಾ ಶಿಕ್ಷಕರಿಗೆ ಫಲಿತಾಂಶ ಸುಧಾರಣೆ, ಸ್ವಚ್ಛತೆ ಹಾಗೂ ಮೂಲಭೂತ ಸೌಲಭ್ಯಗಳ ಕುರಿತು ಹಮ್ಮಿಕೊಳ್ಳಲಾಗಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಾ, ವಿದ್ಯಾರ್ಥಿಗಳ ಶಿಸ್ತು ಹಾಗೂ ಕಲಿಕೆಯ ಗುಣಮಟ್ಟ ಸಮವಸ್ತ್ರದಲ್ಲಿ ಅಳೆಯಬಹುದು.
ಪ್ರಸ್ತುತ ಗುಣಮಟ್ಟದ ಶಿಕ್ಷಣದ ಅಗತ್ಯತೆ ಹೆಚ್ಚು ಇದೆ. ಬುದ್ಧಿವಂತರ ಜಿಲ್ಲೆ ಎನಿಸಿಕೊಳ್ಳುವ ಶಿವಮೊಗ್ಗ ಜಿಲ್ಲೆಯಲ್ಲಿ ಎಸೆಸೆಲ್ಸಿ ಫಲಿತಾಂಶದಲ್ಲಿ ಕೇವಲ 15 ರ್ಯಾಂಕ್ ಬಂದಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ವಿಷಾದಿಸಿದರು.

ಜಿಲ್ಲೆಯ ಸಾಗರ ಮತ್ತು ಸೊರಬ ತಾಲೂಕು ಎಸೆಸೆಲ್ಸಿಯಲ್ಲಿ ಶೇ. 58 ರಷ್ಟು ಫಲಿತಾಂಶ ಬಂದಿದೆ. ನಿಮ್ಮಿಂದ ಪಾಠ ಕೇಳಿದ ವಿದ್ಯಾರ್ಥಿಗಳು ಇಷ್ಟು ಕಡಿಮೆ ಮಟ್ಟದಲ್ಲಿ ಫಲಿತಾಂಶ ಪಡೆದಿರುವುದು ನಿಮಗೆ ಶೋಭೆ ತರುವಂತಹದ್ದೆ ಎನ್ನುವುದನ್ನು ನಿಮಗೆ ನೀವೆ ಪ್ರಶ್ನಿಸಿಕೊಳ್ಳಿ ಎಂದರು. 

ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುವ ಶಿಕ್ಷಕರಿಗೆ ಹೆಚ್ಚಿನ ಸಂಬಳ ಸವಲತ್ತುಗಳಿವೆ. 60 ಮಕ್ಕಳನ್ನು ಇರಿಸಿಕೊಂಡು ಒಂದು ವರ್ಷದಲ್ಲಿ ಅವರನ್ನು ಉತ್ತೀರ್ಣಗೊಳಿಸಲು ಸಾಧ್ಯವಿಲ್ಲ ಎನ್ನುವುದಾದರೆ ನಿಮಗೆ ಸರ್ಕಾರ ಅಷ್ಟೊಂದು ಸಂಬಳ, ಸವಲತ್ತು ಕೊಡುವುದರಲ್ಲಿ ಏನು ಅರ್ಥವಿದೆ ಎಂದು ಪ್ರಶ್ನಿಸಿದರು.

ಒಳ್ಳೆಯ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ಬೋಧಿಸಿ, ಅವರನ್ನು ದೇಶದ ಸತ್ಪ್ರಜೆಯಾಗಿ ರೂಪಿಸುವುದು ಶಿಕ್ಷಕರ ಕೆಲಸ. ಬಡ ಪೋಷಕರು ನಿಮ್ಮ ಮೇಲೆ ವಿಶ್ವಾಸ ಇರಿಸಿ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳಿಸುತ್ತಾರೆ. ಆದರೆ ನೀವು ಸರಿಯಾಗಿ ಪಾಠ ಮಾಡದೆ, ಕಡಿಮೆ ಫಲಿತಾಂಶ ತಂದರೆ, ಪೋಷಕರು ನಿಮ್ಮ ಮೇಲೆ ಇರಿಸಿದ ನಂಬಿಕೆಗೆ ದ್ರೋಹ ಬಗೆದಂತೆ ಆಗುವುದಿಲ್ಲವೇ ಎಂದು ಪ್ರಶ್ನಿಸಿದ ಅವರು, ಇದು ನಿಮಗೆ ಕೊನೆ ಎಚ್ಚರಿಕೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಎಲ್ಲ ಶಾಲೆಯಲ್ಲೂ ಉತ್ತಮ ಫಲಿತಾಂಶ ತರದೆ ಹೋದರೆ ಅದಕ್ಕೆ ಶಿಕ್ಷಕರನ್ನೆ ಹೊಣೆಗಾರರನ್ನಾಗಿ ಮಾಡಿ, ನಿಮ್ಮನ್ನು ಸೂಕ್ತ ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. 

ಸರ್ಕಾರಿ ಶಾಲೆಯಲ್ಲಿ ಮೂಲಭೂತ ಸೌಲಭ್ಯದ ಕೊರತೆ ಇದ್ದರೆ ನನಗೆ ಪತ್ರ ಬರೆಯಿರಿ. ನಾನು ತಕ್ಷಣ ಕ್ರಮ ಕೈಗೊಳ್ಳುತ್ತೇನೆ. ನಗರ ಹಾಗೂ ಗ್ರಾಮಾಂತರ ಪ್ರದೇಶದ ಕೆಲವು ಶಾಲೆಗಳಲ್ಲಿ ಶೌಚಾಲಯ ಇದ್ದರೂ ಬೀಗ ಹಾಕಿ ಇಡುತ್ತೀರಿ. ಬಯಲು ಶೌಚಕ್ಕೆ ನೀವೆ ಕಾರಣವಾಗುತ್ತಿದ್ದೀರಿ. ಶಾಲಾ ವಾತಾವರಣದಲ್ಲಿ ಗಿಡ ನೆಡುವ ಮೂಲಕ ಮಕ್ಕಳಲ್ಲಿ ಪರಿಸರ ಪ್ರೇಮ ಬೆಳೆಸಿ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪಿ.ಎಸ್.ಮಚಾದೋ, ತಹಶೀಲ್ದಾರ್ ತುಷಾರ್ ಬಿ. ಹೊಸೂರು, ಉಪ ನಿರ್ದೇಶಕರ ಕಚೇರಿಯ ಸೋಮಶೇಖರ್, ಸೊರಬ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ್ ಹಾಜರಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಲಿಂಗಪ್ಪ ಸ್ವಾಗತಿಸಿದರು. ಶಿಕ್ಷಣ ಸಂಯೋಜಕ ರವೀಂದ್ರ ವಂದಿಸಿದರು. ಪಾಲಾಕ್ಷಪ್ಪ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News