ಸೌಹಾರ್ದತೆಯಿಂದ ಬದುಕಿದಾಗ ಉತ್ತಮ ಸಮಾಜ ನಿರ್ಮಾಣ: ಭೀಮೇಶ್ವರ ಜೋಷಿ
ಮೂಡಿಗೆರೆ, ಸೆ.16: ಅರಿತುಕೊಳ್ಳುವ, ಸೌಹಾರ್ದತೆ ಹಾಗೂ ಪ್ರೀತಿ, ಸ್ನೇಹದಿಂದ ಬದುಕಿ ಬಾಳುವ ಬೆಳಕನ್ನು ನಮ್ಮೊಳಗೆ ಮೂಡಿಸಿಕೊಂಡರೆ ಉತ್ತಮ ಸಮಾಜ ತಾನಾಗಿಯೇ ನಿರ್ಮಾಣವಾಗುತ್ತದೆ ಎಂದು ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಾಲಯದ ಧರ್ಮಕರ್ತ ಡಾ, ಜಿ.ಭೀಮೇಶ್ವರಿ ಜೋಷಿ ತಿಳಿಸಿದರು.
ಅವರು ಜೆಸಿಐ ಭವನದಲ್ಲಿ ಜೆಸಿಐ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಬೆಳಕು ಜೆಸಿಐ ಸಪ್ತಾಹ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಕೆಟ್ಟ ಹವ್ಯಾಸ ದೂರವಾಗಿ ಜ್ಞಾನದ ಅರಿವು, ಪ್ರೀತಿ, ಸದಾಚಾರದ ಬೆಳಕು ಮೂಡಿಸುವಂತಹ ಕೆಲಸ ಸಂಘ ಸಂಸ್ಥೆಗಳಿಂದ ಸಾಧ್ಯವಾಗುತ್ತದೆ. ಇಂದಿನ ದಿನಗಳಲ್ಲಿ ಬಹುತೇಕ ವಿದ್ಯಾ ಸಂಸ್ಥೆಗಳು ಮಕ್ಕಳಿಗೆ ಪಾಠದ ಜೊತೆಗೆ ಮಾನವೀಯ ಮೌಲ್ಯ ಹಾಗೂ ಉತ್ತಮ ಸಂಸ್ಕಾರ ರೂಡಿಸುವ ಕೆಲಸ ಮಾಡುತ್ತಿಲ್ಲ ಎಂದು ಆಂತಕ ವ್ಯಕ್ತಪಡಿಸಿದರು.
ಶಾಸಕ ಬಿ.ಬಿ.ನಿಂಗಯ್ಯ ಮಾತನಾಡಿ, ಈ ಭೂಮಿಯಲ್ಲಿ ಎಲ್ಲಾ ಜೀವ ಸಂಕುಲವೂ ಬದುಕುವ ಅಧಿಕಾರವಿದೆ. ಆದರೆ ಮಾನವ ನಾಗರಿಕ ವಿಚಾರವಂತರಾಗಿ ಮಾನವೀಯತೆಯನ್ನು ಮರೆತು ಬೇರೆಯವರಿಗೆ ಕೆಡಕು ಬಯಸುವುದರಲ್ಲೇ ಕಾಲಹರಣ ಮಾಡುತ್ತಿದ್ದಾನೆ. ಇಂತಹ ಮನೋಭಾವನೆ ಬಿಡಬೇಕು. ಅಲೆಗಳು ಮತ್ತು ಸಮಯ ಯಾರನ್ನೂ ಕಾಯುವುದಿಲ್ಲ ಎಂದರು.
ಈ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು ಹಾಗೂ ವಿವಿಧ ಕ್ರೀಡೆಯಲ್ಲಿ ಭಾಗವಹಿಸಿ ಗೆಲುವು ಸಾಧಿಸಿದ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ಜೆಸಿಐ ಕಮಲ ಪತ್ರ ಪ್ರಶಸ್ತಿಯನ್ನು ವಿಶುಕುಮಾರ್ ಅವರಿಗೆ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಮಾರೋಪದ ಅಧ್ಯಕ್ಷತೆಯನ್ನು ಜೆಸಿಐ ಸಂಸ್ಥೆ ಅಧ್ಯಕ್ಷ ನಯನ ಕಣಚೂರು ವಹಿಸಿದ್ದರು. ಜೆಸಿಐ ವಲಯ ಅಧ್ಯಕ್ಷ ಸಿದ್ದಲಿಂಗಪ್ಪ, ಕಾರ್ಯದರ್ಶಿ ಶಶಿಕಿರಣ್, ನಿಕಟಪೂರ್ವ ಅಧ್ಯಕ್ಷ ಎಂ.ಎಸ್.ಅಶೋಕ್, ಕಾಫಿ ಬೆಳೆಗಾರ ಪುಣ್ಯಮೂರ್ತಿ, ಕಾರ್ಯಕ್ರಮದ ನಿರ್ದೇಶಕ ಎಚ್.ಕೆ.ಯೋಗೇಶ್, ಜೇಸಿರೇಟ್ ಅಧ್ಯಕ್ಷೆ ಸ್ಪೂರ್ತಿ ನಯನ, ಕಾರ್ಯದರ್ಶಿ ಶೃತಿ ಶಶಿಕಿರಣ್ ಉಪಸ್ಥಿತರಿದ್ದರು.