ದೇವಾಲಯದ ಧ್ವಜಕ್ಕೆ ಬೆಂಕಿ ಹಚ್ಚಿ ಗಲಭೆ ಸೃಷ್ಠಿಸಲು ಸಂಚು: ಮೂವರು ಸಂಘಪರಿವಾರದ ಕಾರ್ಯಕರ್ತರ ಬಂಧನ
ಚಾಮರಾಜನಗರ, ಸೆ.16: ಕಳೆದ ಸೆ.13ರ ಮಧ್ಯರಾತ್ರಿ ದೇವಾಲಯದ ಧ್ವಜವನ್ನು ತೆಗೆದು ಬೈಕ್ ಮೇಲಿಟ್ಟು ಬೆಂಕಿ ಹಚ್ಚಿ ಕೋಮು-ಗಲಭೆಗೆ ಹುನ್ನಾರ ನಡೆಸಿದ ಮೂವರನ್ನು ಚಾಮರಾಜನಗರದ ಪಟ್ಟಣ ಪೊಲೀಸರು ಬಂಧಿಸಿದ್ದಾರೆ.
ಚಾಮರಾಜನಗರ ಪಟ್ಟಣಕ್ಕೆ ಸೇರಿದ ಗಾಳಿಪುರ ಬಡಾವಣೆಯ ನಾಯಕರ ಬೀದಿಯಲ್ಲಿರುವ ಗಣೇಶ ದೇವಾಲಯದ ಮೇಲೆ ಹಾರಾಡುತ್ತಿದ್ದ ಕೇಸರಿ ಧ್ವಜವನ್ನು ತೆಗೆದು ಬೈಕ್ ಮೇಲಿಟ್ಟು ಸುಟ್ಟು ಹಿಂದೂ-ಮುಸ್ಲಿಮರ ನಡುವೆ ಗಲಭೆ ನಡೆಸಲು ಸಂಚು ರೂಪಿಸಿದ್ದ ಮೂವರು ಯುವಕರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಧ್ವಜಕ್ಕೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಳಿಪುರ ಬಡಾವಣೆಯ ಪ್ರಕಾಶ್, ಮಂಜು ಮತ್ತು ಬಂಗಾರ ಎಂಬವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಗಾಳಿಪುರ ಬಡಾವಣೆಯಲ್ಲಿ ಮುಸ್ಲಿಮರ ಕಾಟ ಅಧಿಕವಾಗಿದ್ದು, ಅದನ್ನು ನಿಯಂತ್ರಣ ಮಾಡುವ ಸಲುವಾಗಿ ಈ ರೀತಿ ನಡೆದುಕೊಂಡಿರುವುದಾಗಿ ಬಂಧಿತರು ಪೊಲೀಸರಲ್ಲಿ ಒಪ್ಪಿಕೊಂಡಿದ್ದಾರೆ.
ಬಂಧಿತರನ್ನು ನ್ಯಾಯಾಲಯಕ್ಕೆ ಒಪ್ಪಿಸಲು ಮುಂದಾದ ಪೊಲೀಸರ ಕ್ರಮವನ್ನು ಖಂಡಿಸಿ ಆರೋಪಿಗಳ ಹೆತ್ತವರು ಮತ್ತು ಸಾರ್ವಜನಿಕರು ಮಹಿಳೆಯರೊಂದಿಗೆ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಅಮಾಯಕ ಯುವಕರ ಮೇಲೆ ಸುಳ್ಳು ಪ್ರಕರಣ ದಾಖಲು ಮಾಡಲಾಗುತ್ತಿದೆ, ಯುವಕರ ಭವಿಷ್ಯವನ್ನು ಹಾಳು ಮಾಡುತ್ತಿರುವ ಪೊಲೀಸರ ಕ್ರಮವನ್ನು ಖಂಡಿಸಿ ಧರಣಿ ನಡೆಸಿದರು.