ಮಂಡ್ಯ: ರೈಲಿಗೆ ಸಿಲುಕಿ ಯುವಕ ಆತ್ಮಹತ್ಯೆ
ಮಂಡ್ಯ, ಸೆ.16: ರೈಲಿಗೆ ಸಿಲುಕಿ ಯುವ ಇಂಜಿನಿಯರ್ ಆತ್ಮಹತ್ಯೆ ಮಾಡಿಕೊಂಡ ಘಟನೆ ಪಾಂಡವಪುರ ರೈಲ್ವೆ ನಿಲ್ದಾಣದ ಬಳಿ ಶನಿವಾರ ಬೆಳಗ್ಗೆ ನಡೆದಿದೆ.
ಪಾಂಡವಪುರ ತಾಲೂಕಿನ ಹಾರೋಹಳ್ಳಿ ಗ್ರಾಮದ ಪುಟ್ಟೇಗೌಡರ ಮಗ ಎಚ್.ಪಿ.ರಾಜು(27) ಮೃತ ದುರ್ದೈವಿ.
ಬೆಂಗಳೂರಿನ ಖಾಸಗಿ ಕಂಪೆನಿಯ ಉದ್ಯೋಗಿಯಾಗಿದ್ದ ಇವರು, ವಾರ್ಷಿಕ 18 ಲಕ್ಷ ರೂ. ವೇತನ ಪಡೆಯುತ್ತಿದ್ದರು. ಪಾಂಡವಪುರ ರೈಲ್ವೆ ನಿಲ್ದಾಣದಿಂದ 1.5 ಕಿ.ಮೀ., ದೂರದಲ್ಲಿ ನೆಲಮನೆ ಗೇಟ್ ಸಮೀಪ ಮದ್ಯ ರಾತ್ರಿ ಬರುವ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ರೈಲ್ವೆ ಪೊಲೀಸರು ಶಂಕಿಸಿದ್ದಾರೆ.
ರಾಜು ಆತ್ಮಹತ್ಯೆಗೂ ಮುನ್ನ ರೈಲ್ವೆ ಹಳಿಯ ಪಕ್ಕದಲ್ಲಿ ಮೊಬೈಲ್ ಇಟ್ಟು ಡೆತ್‌ನೋಟ್‌ನಲ್ಲಿ "ತನಗೆ ಹಣ ನೀಡಬೇಕಾದವರ ಮಾಹಿತಿ ಬರೆದು, ಹಣ ವಸೂಲಿಗೆ ಬಲವಂತ ಮಾಡಬೇಡಿ, ಅವರಾಗೆ ಕೊಟ್ಟರೆ ಪಡೆದುಕೊಳ್ಳಿ ಎಂದು ಬರೆದಿದ್ದಾರೆ" ಎಂದು ತಿಳಿದು ಬಂದಿದೆ.
ಸಾಂತ್ವನ: ಸಂಸದ ಸಿ.ಎಸ್.ಪುಟ್ಟರಾಜು, ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಸೇರಿದಂತೆ ತಾಲೂಕಿನ ಗಣ್ಯರು ಮೃತರ ಪೋಷಕರಿಗೆ ಸಾಂತ್ವನ ಹೇಳಿದ್ದಾರೆ.