ಸಾಕ್ಷರ ಕ್ರಾಂತಿಗೆ ನಾರಾಯಣಗುರು ಕೊಡುಗೆ ಅಪಾರ: ಕೆ.ಜಿ.ಗುರು ಸ್ವಾಮಿ
ಮಂಡ್ಯ, ಸೆ.16: ಕೇರಳ ರಾಜ್ಯ ಸಾಕ್ಷರತೆಯಲ್ಲಿ ಪರಿಪೂರ್ಣತೆ ಗಳಿಸಲು ಸುಧಾರಕ ನಾರಾಯಣಗುರು ಅವರ ಕೊಡುಗೆ ಅಪಾರವೆಂದು ತಗ್ಗಹಳ್ಳಿಸ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಜಿ.ಗುರುಸ್ವಾಮಿ ಹೇಳಿದ್ದಾರೆ.
ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ವತಿಯಿಂದ ಶನಿವಾರ ನಡೆದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, ಸಮಾಜದಲ್ಲಿ ತಾಂಡವವಾಡುತ್ತಿದ್ದ ಅಜ್ಞಾನ, ಅಂಧಕಾರ, ಶೋಷಣೆ, ಮೂರ್ತಿ ಪೂಜೆ ವಿರುದ್ಧ ನಾರಾಯಣಗುರು ವೈಚಾರಿಕತೆ ಮೂಡಿಸಿದರು ಎಂದರು.
ನಾರಾಯಣಗುರು ಅವರು ಉದ್ಯೋಗಕ್ಕಾಗಿ ಕೃಷಿ, ನೇಕಾರರಿಗಾಗಿ ಕೈಮಗ್ಗ ತರಬೇತಿ ಕೇಂದ್ರ ಸ್ಥಾಪಿಸಿದರು. ಪ್ರತ್ಯೇಕ 71 ದೇವಸ್ಥಾನಗಳನ್ನು ನಿರ್ಮಿಸಿ ಎಲ್ಲ ಜಾತಿ, ವರ್ಗದವರಿಗೂ ಅವಕಾಶ ಕಲ್ಪಿಸಿಕೊಟ್ಟರು. ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ ಅವರು ಶಾಲೆ, ವಿದ್ಯಾರ್ಥಿನಿಲಯ, ಕಾಲೇಜು, ಇಂಗ್ಲೀಷ್ ಭಾಷೆ ಕಲಿಯಲು ಇಂಗ್ಲೀಷ್ ಶಾಲೆಗಳನ್ನು ಸ್ಥಾಪನೆ ಮಾಡಿದರು. ಬಾಲಕಿಯರ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಿದರು ಎಂದು ಅವರು ವಿವರಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಸಂಸದ ಸಿ.ಎಸ್.ಪುಟ್ಟರಾಜು ಮಾತನಾಡಿ, ಸಮಾಜ ಸದೃಢವಾಗಿ ನಿಲ್ಲಲು ಗುರುಗಳ ಅಗತ್ಯವಿದೆ. ಅಂಥ ಕೆಲಸವನ್ನು ನಾರಾಯಣಗುರು ಅವರು ಮಾಡಿದ್ದಾರೆ. ಅವರ ಆದಶ ಹಾಗು ವಿಚಾರಧಾರೆಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಕಾರ್ಯಕ್ರಮದಲ್ಲಿ ತಾಪಂ ಅಧ್ಯಕ್ಷ ಕೆ.ಎಂ.ಬೀರಪ್ಪ, ನಗರಸಭೆ ಅಧ್ಯಕ್ಷ ಹೊಸಹಳ್ಳಿ ಬೋರೇಗೌಡ, ಸದಸ್ಯ ಅರುಣ್‍ಕುಮಾರ್, ಅನಿಲ್‍ಕುಮಾರ್, ಅಪರ ಜಿಲ್ಲಾಧಿಕಾರಿ ವಿಜಯ್, ಸಮುದಾಯದ ಮುಖಂಡರು ಉಪಸ್ಥಿತರಿದ್ದರು.
ಮೆರವಣಿಗೆ: ಕಾರ್ಯಕ್ರಮಕ್ಕೂ ಮುನ್ನ ನಾರಾಯಣಗುರು ಅವರ ಭಾವಚಿತ್ರವನ್ನು ವಿವಿಧ ಜಾನಪದ ಕಲಾತಂಡಗಳ ಸಮೇತ ಮೆರವಣಿಗೆ ನಡೆಸಲಾಯಿತು.