ಬೋಗಸ್ ಕೌಶಲ್ಯಾಭಿವೃದ್ಧಿ ಕೇಂದ್ರಗಳಿಗೆ ಕಡಿವಾಣ: ಮುರುಳೀಧರ ಹಾಲಪ್ಪ
ತುಮಕೂರು, ಸೆ.16: ಕೌಶಲ್ಯಾಭಿವೃದ್ಧಿ ನಿಗಮದಿಂದ ದೊರಕುವ ಅನುದಾನಕ್ಕಾಗಿ ತರಬೇತಿಯನ್ನೇ ನೀಡದೇ ಹಣ ಪಡೆದುಕೊಂಡು ಬೋಗಸ್ ಮಾಡಲಾಗುತ್ತಿತ್ತು ಎಂದು ಕರ್ನಾಟಕ ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷ ಮುರುಳೀಧರ ಹಾಲಪ್ಪ ತಿಳಿಸಿದ್ದಾರೆ.
ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಸಮರ್ಥ್ ಫೌಂಡೇಶನ್ ಸಹಯೋಗದೊಂದಿಗೆ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೌಶಲ್ಯಾಭಿವೃದ್ಧಿ ಹೆಸರಿನಲ್ಲಿ ಕೆಲ ಸಂಸ್ಥೆಗಳು ಬೋಗಸ್ ವರದಿಯನ್ನು ನೀಡಿ ಹಣವನ್ನು ಪಡೆದುಕೊಳ್ಳುತ್ತಿದ್ದವು, ಅದಕ್ಕೆ ನಾನು ಅಧ್ಯಕ್ಷನಾದ ನಂತರ ಕಡಿವಾಣ ಹಾಕಿದ್ದೇನೆ ಎಂದರು.
ಕೌಶಲ್ಯಾಭಿವೃದ್ಧಿ ತರಬೇತಿ ನೀಡುವ ಸಂಸ್ಥೆಗಳನ್ನು ಪರಿಶೀಲಿಸಿ, ತರಬೇತಿ ನೀಡುವ ಸಾಮರ್ಥ್ಯ ಹೊಂದಿದ್ದಾವೆಯೇ ಎಂಬುದನ್ನು ನಿರ್ಧರಿಸುವ ಕೆಲಸವನ್ನು ಖಾಸಗಿ ಸಂಸ್ಥೆಗೆ ವಹಿಸಿಕೊಡಲಾಗಿದೆ. ಗುಣಮಟ್ಟದ ತರಬೇತಿಯನ್ನು ನೀಡುವ ಸಂಸ್ಥೆಗಳಿಗೆ ಮಾತ್ರ ಈಗ ಮಾನ್ಯತೆಯನ್ನು ನೀಡಲಾಗುತ್ತಿದೆ, ವಿದ್ಯಾಭ್ಯಾಸವೊಂದಿದ್ದರೆ ಸಾಲದು ಅದರೊಂದಿಗೆ ಕೌಶಲ್ಯವು ಮುಖ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಿ ಮಾತನಾಡಿದ ಮಾಜಿ ಶಾಸಕ ಎಚ್.ನಿಂಗಪ್ಪ, ಬಹುಮಾನ ಸಿಗಲಿಲ್ಲ ಎಂದು ನಿರಾಸೆಗೆ ಒಳಗಾಗದೇ, ಮುಂದಿನ ಸ್ಪರ್ಧೆಯಲ್ಲಿ ಗೆಲ್ಲುತ್ತೇನೆ ಎಂಬ ಛಲದಿಂದ ತಮ್ಮ ಅಭ್ಯಾಸವನ್ನು ಮುಂದುವರೆಸಿ ಕೊಳ್ಳಬೇಕು. ಕೌಶಲ್ಯಾಭಿವೃದ್ಧಿ ನಿಗಮ ಈಗ ಚಟುವಟಿಕೆಯಿಂದ ಇದ್ದರೆ ಅದಕ್ಕೆ ಮುರುಳೀಧರ ಹಾಲಪ್ಪ ಅವರೇ ಕಾರಣ, ಅವರು ಅಧ್ಯಕ್ಷರಾದ ಮೇಲೆಯೇ ಕೌಶಲ್ಯಾಭಿವೃದ್ಧಿ ನಿಗಮ ಚಟುವಟಿಕೆಯಿಂದ ಕೆಲಸ ನಿರ್ವಹಿಸುತ್ತಿದೆ, ಅದಕ್ಕೆ ಅವರ ಸಮರ್ಥ ನಾಯಕತ್ವವೇ ಕಾರಣ ಎಂದರು.
ಕಾರ್ಯಕ್ರಮದಲ್ಲಿ ತೀರ್ಪುಗಾರರಾದ ನಿವೃತ್ತ ಉಪನ್ಯಾಸಕಿ ಸುನಂದಮ್ಮ, ಜಿಲ್ಲಾ ಕಸಾಪ ಕೋಶಾಧ್ಯಕ್ಷ ಬಿ.ಮರುಳಯ್ಯ, ಕಸಾಪ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಮಾತನಾಡಿದರು. ಸಮರ್ಥ್ ಫೌಂಡೇಶನ್ ಅಧ್ಯಕ್ಷ ಎಚ್.ಮಲ್ಲಿಕಾರ್ಜುನಯ್ಯ, ಕಾರ್ಯದರ್ಶಿ ರಾಣಿಚಂದ್ರಶೇಖರ್, ಎಂ.ಎಚ್.ನಾಗರಾಜು, ಕಸಾಪ ಕಾರ್ಯದರ್ಶಿ ಗೋವಿಂದಯ್ಯ ಇತರರು ಉಪಸ್ಥಿತರಿದ್ದರು.