ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಧರಣಿ
ತುಮಕೂರು, ಸೆ.16: ದಕ್ಷ ಪೊಲೀಸ್ ಅಧಿಕಾರಿಗಳಾದ ಎಂ.ಕೆ.ಗಣಪತಿ ರವರ ನಿಗೂಢ ಸಾವಿನ ಪ್ರಕರಣದ ಆರೋಪ ಹೊತ್ತಿರುವ ಸಚಿವ ಕೆ.ಜೆ.ಜಾರ್ಜ್‍ರವರನ್ನು ಸಚಿವ ಸಂಪುಟದಿಂದ ವಜಾಗೊಳಿಸಲು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಧರಣಿ ನಡಸಿ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
ಇತ್ತೀಚೆಗೆ ದಕ್ಷ ಪೊಲೀಸ್ ಅಧಿಕಾರಿ ಎಂ.ಕೆ.ಗಣಪತಿರವರ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಾವಿನ ಮುಂಚೆ ಗಣಪತಿಯವರು ಸರಕಾರದ ಕೆಲವು ಪ್ರಮುಖರ ಕಿರುಕುಳ ನೀಡಿ ನನಗೆ ಮಾನಸಿಕ ಹಿಂಸೆ ಕೊಟ್ಟಿದ್ದರು ಎಂದು ತಮ್ಮ ಹೇಳಿಕೆಯನ್ನು ರೇಕಾರ್ಡ್ ಮಾಡಿ ಮಾಧ್ಯಮಗಳಲ್ಲಿ ಬಿತ್ತರಿಸಲಾಗಿತ್ತು. ಅವರ ಹೇಳಿಕೆಯಲ್ಲಿ ಅಂದಿನ ಗೃಹ ಸಚಿವ ಕೆ.ಜೆ.ಜಾರ್ಜ್, ಹಿರಿಯ ಪೊಲೀಸ್ ಅಧಿಕಾರಿಗಳಾದ ಪ್ರಣಮ ಮೊಹಂತಿ ಹಾಗೂ ಎ.ಎಂ.ಪ್ರಸಾದ್‍ರವರ ಹೆಸರುಗಳನ್ನು ಪ್ರಸ್ತಾಪ ಮಾಡಿದ್ದರು. ಇದರ ಹಿನ್ನೆಲೆಯಲ್ಲಿ ಸಾರ್ವಜನಿಕರು ಮತ್ತು ವಿರೋಧ ಪಕ್ಷಗಳ ಹೋರಾಟಕ್ಕೆ ಮಣಿದ ರಾಜ್ಯ ಸರಕಾರ ಕೆ.ಜೆ.ಜಾರ್ಜ್ ಅವರ ರಾಜೀನಾಮೆ ಪಡೆದರು. ಪ್ರಕರಣದ ತನಿಖೆ ನಡೆಸಿದ ಸಿಒಡಿ ನೀಡಿದ ವರದಿಯನ್ನು ಆಧರಿಸಿ ಅವರಿಗೆ ಕ್ಲೀನ್‍ಚೀಟ್ ನೀಡಿ,ಮತ್ತೆ ಸಚಿವ ಸಂಪುಟಕ್ಕೆ ತೆಗೆದುಕೊಳ್ಳಲಾಗಿದೆ.ಸರಕಾರದ ನಿಲುವಿನಲ್ಲಿ ಅನುಮಾನ ಮೂಡಿದೆ ಎಂದು ಧರಣಿನಿರತರು ಆರೋಪಿಸಿದರು.
ಧರಣಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಜ್ಯೋತಿಗಣೇಶ್, ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಎಸ್.ಶಿವಪ್ರಸಾದ್, ಜಿಲ್ಲಾ ಪಂಚಾಯತ್ ಸದಸ್ಯ ವೈ. ಎಚ್.ಹುಚ್ಚಯ್ಯ ಮಾತನಾಡಿದರು. ಜಿಲ್ಲಾ ಪ್ರಧಾನಕಾರ್ಯದರ್ಶಿಗಳಾದ ಲಕ್ಷ್ಮೀಶ್, ಸಿ.ರಂಗನಾಯ್ಕ್, ರವಿಶಂಕರ್ ಹೆಬ್ಬಾಕ, ಎಸ್.ವಿಜಯ್ ಕುಮಾರ್, ಕೊಪ್ಪಳ್ ನಾಗರಾಜು, ಪಿ.ಕೃಷ್ಣಪ್ಪ, ಪುರವರ ಮೂರ್ತಿ, ನಗರಾಧ್ಯಕ್ಷ ಸಿ.ಎನ್.ರಮೇಶ್, ಪಾಲಿಕೆ ಸದಸ್ಯರಾದ ಕರುಣಾರಾಧ್ಯ, ಬ್ಯಾಟರಂಗೇಗೌಡರು, ಬಿ.ಕೆ.ಮಂಜುನಾಥ್, ರಾಮಾಂಜಿನಪ್ಪ ಸ್ನೇಕ್ ನಂದೀಶ್, ರಂಗಸ್ವಾಮಿ, ಶಿವಕುಮಾರ್ ಸಾಕೇಲ್, ಎಂ.ಎಸ್.ಗುರುಪ್ರಸಾದ್, ಸಂದೀಪ್, ಟಿ.ಹೆಚ್.ಹನುಮಂತರಾಜು, ಮಂಜುಳ, ಗೀತಾಶಿವಣ್ಣ, ಲಕ್ಷ್ಮಿಜೋಷಿ, ಕಮಲಮ್ಮ, ಲಕ್ಷ್ಮಮ್ಮ, ಆದ್ಯ, ಶೈಲಶ್ರೀ, ಕೆ.ಟಿ.ಶಿವಕುಮಾರ್ ಹಾಗೂ ಎಲ್ಲಾ ಮಂಡಲಗಳ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.