ಬಾಕಿ ಉಳಿದ ತೆರಿಗೆ ವಸೂಲಿಗೆ ಕ್ರಮ ಕೈಗೊಳ್ಳುವಂತೆ ಶಾಸಕ ಆರ್. ನರೇಂದ್ರ ಸೂಚನೆ
ಹನೂರು, ಸೆ.16: ಪಪಂ ಅಧಿಕಾರಿಗಳು ಆದಾಯದ ಮೂಲವಾದ ತೆರಿಗೆ ವಸೂಲಾತಿಗೆ ನಿರ್ಲಕ್ಷ್ಯ ವಹಿಸಿದ್ದು, ಲಕ್ಷಾಂತರ ರೂ. ತೆರಿಗೆ ಬಾಕಿ ಇದೆ. ಬಾಕಿ ಉಳಿದ ತೆರಿಗೆಯನ್ನು ವಸೂಲಿಗೆ ಕ್ರಮ ಕೈಗೊಳ್ಳುವಂತೆ ಶಾಸಕ ಆರ್. ನರೇಂದ್ರ ಸೂಚಿಸಿದರು.
ಹನೂರು ಪಪಂನಲ್ಲಿ ಶನಿವಾರ ಅಧ್ಯಕ್ಷೆ ಮಮತಾ ಅಧ್ಯಕ್ಷತೆಯಲ್ಲಿ ನಡೆದ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಪಪಂ ವ್ಯಾಪ್ತಿಯ 13 ವಾರ್ಡ್‌ಗಳಲ್ಲಿ ಅಧಿಕೃತವಾಗಿ ನೀರಿನ ಸಂಪರ್ಕ ಪಡೆದಿರುವವರಿಂದ ಕಳೆದ ಮೂರು ತಿಂಗಳ ಅವಧಿಯಲ್ಲಿ 71,26,965 ರೂ. ನೀರಿನ ತೆರಿಗೆ ವಸೂಲಾಗಬೇಕಿದೆ. ಆದರೆ, ಇದರಲ್ಲಿ 20,48,378 ರೂ. ಮಾತ್ರ ವಸೂಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷತೆಯಿಂದ ಇನ್ನು 50 ಲಕ್ಷ ರೂ. ಬಾಕಿ ಉಳಿದಿದೆ. ಕೂಡಲೇ ತೆರಿಗೆ ವಸೂಲಾತಿಗೆ ಮುಂದಾಗಬೇಕು ಎಂದರು.
ಪಪಂ ವತಿಯಿಂದ 36 ಅಂಗಡಿ ಮಳಿಗೆಗಳನ್ನು ನಿರ್ಮಿಸಲಾಗಿದ್ದು, ಅದರಲ್ಲಿ 15 ಅಂಗಡಿಗಳನ್ನು ಬಾಡಿಗೆಗೆ ನೀಡಲಾಗಿದೆ. ಇದರಲ್ಲಿ 5 ಅಂಗಡಿಗಳಿಂದ ಮಾತ್ರಬಾಡಿಗೆ ವಸೂಲಾಗುತ್ತಿದೆ. ಇನ್ನುಳಿದ ಅಂಗಡಿಗಳಿಂದ ಬಾಡಿಗೆ ವಸೂಲಾಗುತ್ತಿಲ್ಲ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ನಾಮ ನಿರ್ದೇಶಿತ ಸದಸ್ಯ ಜಯಪ್ರಕಾಶ್ ಗುಪ್ತ ಪ್ರಸ್ತಾಪಿಸಿದರು.
ಅಧಿಕಾರಿಗಳಿಂದ ಮಾಹಿತಿ ಪಡೆದ ಶಾಸಕರು, ಬಾಡಿಗೆ ನೀಡದ ಅಂಗಡಿ ಮಾಲಕರಿಗೆ ನೋಟಿಸ್ ಜಾರಿಗೊಳಿಸಿ ಎಂದು ಪಪಂ ಮುಖ್ಯಾಧಿಕಾರಿಗೆ ಸೂಚಿಸಿದರು.
ಸಭೆಯಲ್ಲಿ ಪಪಂ ಉಪಾಧ್ಯಕ್ಷ ಬಸವರಾಜು, ಸದಸ್ಯರಾದ ರಾಜುಗೌಡ, ಬಾಲರಾಜ್ ನಾಯ್ಡು, ರಮೇಶ್‌ನಾಯ್ಡು, ನಾಗಣ್ಣ, ಸುಮತಿ, ಯೋಗಶ್ರೀ, ಪ್ರತಿಮಾ, ಮಹದೇವಮ್ಮ, ಪಪಂ ಮುಖ್ಯಾಧಿಕಾರಿ ಎಸ್.ಡಿ.ಮೋಹನ್‌ಕೃಷ್ಟ, ಸಮುದಾಯ ಸಂಘಟನಾಧಿಕಾರಿ ಭೈರಪ್ಪ, ಇಂಜಿನಿಯರ್ ಆರಾಧ್ಯ, ಕಂದಾಯ ನಿರೀಕ್ಷಕ ನಂಜುಂಡಶೆಟ್ಟಿ ಹಾಗೂ ಪಪಂ ನೌಕರರು ಹಾಜರಿದ್ದರು.