ದುರಾಸೆಗೆ ಸಮಾಜ ಪ್ರೋತ್ಸಾಹ ನೀಡುತ್ತಿರುವುದರಿಂದ ದೇಶದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ: ನ್ಯಾ.ಸಂತೋಷ್ ಹೆಗಡೆ
ದಾವಣಗೆರೆ, ಸೆ.16: ಸಮಾಜದಲ್ಲಿ ದುರಾಸೆಯೆಂಬ ರೋಗ ಹೆಚ್ಚಾಗಿದ್ದು, ಈ ದುರಾಸೆಗೆ ಸಮಾಜ ಪ್ರೋತ್ಸಾಹ ನೀಡುತ್ತಿರುವುದರಿಂದಲೇ ದೇಶದಲ್ಲಿ ಭ್ರಷ್ಟಾಚಾರ, ಅನಾಚಾರ ನಡೆಯುತ್ತಿದೆ ಎಂದು ನಿವೃತ್ತಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ವಿಷಾದ ವ್ಯಕ್ತಪಡಿಸಿದರು.
ನಗರದ ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ ಶನಿವಾರದಿಂದ ಆರಂಭವಾದ ಜನ ಸಂಗ್ರಾಮ ಪರಿಷತ್‍ನ 3ನೆ ರಾಜ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಅಕ್ರಮ, ಭ್ರಷ್ಟಾಚಾರ ನಡೆಸಿ, ಜೈಲಿಗೆ ಹೋಗಿ ವಾಪಾಸ್ ಬಂದವರನ್ನು ಹಾರಾಹಾಕಿ ಸಂಭ್ರಮಿಸಿ, ಭ್ರಷ್ಟರಿಗೆ ಪುರಸ್ಕಾರ ನೀಡಲಾಗುತ್ತಿದೆ. ಆದರೆ, ಪ್ರಾಮಾಣಿಕರ ಬಗ್ಗೆ ಸಮಾಜಕ್ಕೆ ಕಾಳಜಿ ಇಲ್ಲ. ಅತಿಯಾದ ಪ್ರಾಮಾಣಿಕತೆ ಮೆರೆದರೆ, ಅಂತಹವರನ್ನು ಹುಚ್ಚ ಎಂಬುದಾಗಿ ಹೀಯಾಳಿಸುವವರಿಗೇನು ಸಮಾಜದಲ್ಲಿ ಕೊರತೆ ಇಲ್ಲ ಎಂದ ಅವರು, ಹಿಂದೆ ಸಮಾಜದಲ್ಲಿ ಭ್ರಷ್ಟರನ್ನು ಬಹಿಷ್ಕರಿಸಲಾಗುತ್ತಿತ್ತು. ಆದರೆ, ಈಗ ಪರಿಸ್ಥಿತಿ ಬದಲಾಗಿದ್ದು, ಭ್ರಷ್ಟರನ್ನೇ ಅನುಕರಿಸುವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ, ಇಂತಹ ಕಲುಷಿತ ವಾತಾವರಣ ಬದಲಾಯಿಸಿ, ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಮಾಡುವ ಜವಾಬ್ದಾರಿ ವಿದ್ಯಾರ್ಥಿ-ಯುವಜನರ ಮೇಲಿದೆ ಎಂದು ಹೇಳಿದರು.
1950ರ ದಶಕದಲ್ಲಿ ಬೆಳಕಿಗೆ ಬಂದ ಜೀಪು ಹಗರಣದಲ್ಲಿ 52 ಲಕ್ಷ ರೂ., 80ರ ದಶಕದಲ್ಲಿ ಬೆಳಕಿಗೆ ಬಂದ ಬೋಫರ್ಸ್ ಹಗರಣದಲ್ಲಿ 64 ಸಾವಿರ ಕೋಟಿ ರೂ., ಯುಪಿಎ ಅವಧಿಯಲ್ಲಿ ನಡೆದ ಕಾಮನ್‍ವೆಲ್ತ್ ಹಗರಣದಲ್ಲಿ 70 ಸಾವಿರ ಕೋಟಿ ರೂ., 2ಜಿ ಸ್ಪೆಕ್ಟ್ರಂ ಹಗರರಣದಲ್ಲಿ 1 ಲಕ್ಷದ 76 ಸಾವಿರ ಕೋಟಿ ರೂ., 2012ರ ಕಲ್ಲಿದ್ದಿಲು ಹಗರಣದಲ್ಲಿ 1 ಲಕ್ಷದ 82 ಸಾವಿರ ಕೋಟಿ ರೂ., ಹಣವನ್ನು ಕೆಲವೇ ವ್ಯಕ್ತಿಗಳು ಕೊಳ್ಳೆ ಹೊಡೆದಿದ್ದಾರೆ. ಈ ಭ್ರಷ್ಟಾಚಾರಲ್ಲಿ ಅವ್ಯವಹಾರ ಆಗಿರುವ ಹಣಕ್ಕೂ ಹಾಗೂ ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ವೇತನ ನೀಡಲು ಹಾಗೂ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಮೀಸಲಿಟ್ಟಿರುವ ಹಣದಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಹೀಗಾದರೆ, ದೇಶದ ಅಭಿವೃದ್ಧಿ ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.
2009ರಲ್ಲಿ ಕರ್ನಾಟಕವನ್ನು ಅಭಿವೃದ್ಧೀ ಹೊಂದಿರುವ ರಾಷ್ಟ್ರ ಎಂಬುದಾಗಿ ಕರೆಯಲಾಗುತ್ತಿತ್ತು. ಆದರೆ, ರಾಜ್ಯದ ಜನತೆಗೆ ಕುಡಿಯುವ ನೀರು ಪೂರೈಸಲು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ನೀಡಿದ ಅನುದಾನದಲ್ಲಿ 56 ಸಾವಿರ ಕೋಟಿ ರೂ. ಹಣಕ್ಕೆ ಇನ್ನೂ ಲೆಕ್ಕ ಸಿಕ್ಕಿಲ್ಲ. ಇದನೆಲ್ಲಾ ಗಮನಿಸಿದರೆ, ದೇಶದ ಅಭಿವೃದ್ಧಿಗೆ ಬಿಡುಗಡೆಯಾಗುವ 10 ರು. ಹಣದಲ್ಲಿ 15 ಪೈಸೆ ಮಾತ್ರ ಫಲಾನುಭವಿಗಳಿಗೆ ತಲುಪುತ್ತಿದೆ ಎಂದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರ ನಡೆಸುತ್ತಿದ್ದ ಸಂದರ್ಭ ಬಳ್ಳಾರಿ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ನಡೆದ ಅಕ್ರಮ ಗಣಿಗಾರಿಕೆಯ ಹಿನ್ನೆಲೆಯಲ್ಲಿ ತಾವು ಸಮಗ್ರ ಅಧ್ಯಯನ ನಡೆಸಿ, ರಾಜ್ಯ ಸರ್ಕಾರಕ್ಕೆ ಒಂದು ವರದಿ ಸಲ್ಲಿಸಿದ್ದು, ಆ ವರದಿಯಲ್ಲಿ ಮೂರು ಪಕ್ಷದ ಮೂವರು ಮುಖ್ಯಮಂತ್ರಿಗಳ, 8 ಮಂತ್ರಿಗಳ ಹಾಗೂ 700 ಜನ ಉನ್ನತ ಶ್ರೇಣಿ ಅಧಿಕಾರಿಗಳ ಹೆಸರು ಉಲ್ಲೇಖ ಮಾಡಲಾಗಿದೆ ಎಂದ ಅವರು, ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದವರು 1 ಮೆಟ್ರಿಕ್ ಟನ್ ಅದಿರಿಗೆ ಸರ್ಕಾರಕ್ಕೆ ಕೇವಲ 27 ರು. ಶುಲ್ಕ ಪಾವತಿಸುತ್ತಿದ್ದರು. ಆದರೆ, ಅದೇ ಒಂದು ಟನ್ ಅದಿರನ್ನು ಸುಮಾರು 7 ಸಾವಿರ ರೂ.ಗಳಂತೆ ಹೊರ ದೇಶಗಳಿಗೆ ರಫ್ತು ಮಾಡುತ್ತಿದ್ದರು. ಒಂದು ದಿನ ಲೋಕಾಯುಕ್ತ ಅಧಿಕಾರಿಗಳು 90 ಲಾರಿ ಸೀಜ್ ಮಾಡಿ, ಅಕ್ರಮ ಗಣಿಗಾರಿಕೆಯಿಂದ ತಗೆದಿದ್ದ 2.40 ಲಕ್ಷ ಮೆಟ್ರಿಕ್ ಟನ್ ಅದಿರನ್ನು ಪತ್ತೆ ಮಾಡಿ, ಬೇಲಿಕೇರಿ ಬಂದರುನಲ್ಲಿ ದಾಸ್ತಾನು ಮಾಡಿದ್ದೇವು. ಆದರೆ, ಮೂರು ತಿಂಗಳನಂತರ ಹೋಗಿ ನೋಡಿದರೆ, ಒಂದು ಅಗಳು ಅದಿರು ಅಲ್ಲಿರಲಿಲ್ಲ ಎಂದರು.
ಕಾರ್ಯಕ್ರಮ ಆರಂಭಕ್ಕೂ ಮುನ್ನ ವಿಚಾರವಾದಿಗಳಾದ ದಾಬೋಲ್ಕರ್, ಪನ್ಸಾರೆ, ಎಂ.ಎಂ.ಕಲ್ಬುರ್ಗಿ, ಗೌರಿ ಲಂಕೇಶ್ ಅವರ ಹತ್ಯೆಯ ಹಿನ್ನೆಲೆಯಲ್ಲಿ ಮೌನಾಚರಿಸಲಾಯಿತು.
ಸಮ್ಮೇಳನದ ಉದ್ಘಾಟನಾ ಗೋಷ್ಠಿಯ ಅಧ್ಯಕ್ಷತೆಯನ್ನು ಪರಿಷತ್‍ನ ಗೌರವಾಧ್ಯಕ್ಷ ಎಸ್.ಆರ್. ಹಿರೇಮಠ್ ವಹಿಸಿದ್ದರು. ಪರಿಷತ್‍ನ ರಾಜ್ಯಾಧ್ಯಕ್ಷ ರಾಘವೇಂದ್ರ ಕುಷ್ಠಗಿ ಪ್ರಸ್ತಾವಿಕ ಮಾತನಾಡಿದರು. ವೇದಿಕೆಯಲ್ಲಿ ರೈತ ಸಂಘದ ಕೆ.ಟಿ. ಗಂಗಾಧರ್, ಹಿರಿಯ ಪತ್ರಕರ್ತ ಎಸ್.ಆರ್. ಆರಾಧ್ಯ, ಲಂಚಮುಕ್ತ ಕರ್ನಾಟಕದ ರವಿಕೃಷ್ಣ ರೆಡ್ಡಿ, ದಲಿತ ಸಂಘರ್ಷ ಸಮಿತಿಯ ಅರವಿಂದ್, ಗೀತಾ ವೇಲುಮಣಿ, ಅನೀಸ್ ಪಾಷ, ಮೌಲಾ ನಾಯ್ಕ, ಆವರಗೆರೆ ರುದ್ರಮುನಿ, ವಾಮದೇವಪ್ಪ ಮತ್ತಿತರರು ಉಪಸ್ಥಿತರಿದ್ದರು. ಬಲ್ಲೂರು ರವಿಕುಮಾರ್ ನಿರೂಪಿಸಿದರು. ಶಿವನಕೆರೆ ಬಸಲಿಂಗಪ್ಪ ಸ್ವಾಗತಿಸಿದರು. ಡಾ.ಮಾಲಿ ಪಾಟೀಲ್ ವಂದಿಸಿದರು. ಕಲಾವಿದರಾದ ಐರಣಿ ಚಂದ್ರು, ರಾಮಪ್ಪ, ಉಮೇಶ್ ನಾಯ್ಕ ಮತ್ತು ಸಂಗಡಿಗರು ಕ್ರಾಂತಿಗೀತೆ ಹಾಡಿದರು.