ಕೆ.ಜೆ. ಜಾರ್ಜ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಆಗ್ರಹಿಸಿ ಬಿಜೆಪಿಯಿಂದ ಧರಣಿ
ದಾವಣಗೆರೆ, ಸೆ.16: ಡಿಎಸ್ಪಿ ದಿವಂಗತ ಗಣಪತಿ ಸಾವಿಗೆ ಕಾರಣರಾದ ಕಳಂಕಿತ ಸಚಿವ ಕೆ.ಜೆ. ಜಾರ್ಜ್‍ಗೆ ಸಂಪುಟದಿಂದ ವಜಾ ಮಾಡುವಂತೆ ಒತ್ತಾಯಿಸಿ ನಗರದಲ್ಲಿ ಶನಿವಾರ ಬಿಜೆಪಿ ಜಿಲ್ಲಾ ಘಟಕದ ಕಾರ್ಯಕರ್ತರು ಧರಣಿ ನಡೆಸಿದರು.
ನಗರದ ಬಿಜೆಪಿ ಕಾರ್ಯಾಲಯದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆಯು ಗಾಂಧಿ ವೃತ್ತದ ಮಾರ್ಗವಾಗಿ ರಾಜ್ಯ ಸರ್ಕಾರ, ಸಚಿವ ಜಾರ್ಜ್ ವಿರುದ್ಧ ಘೋಷಣೆ ಕೂಗುತ್ತಾ ಉಪ ವಿಭಾಗಾಧಿಕಾರಿ ಕಚೇರಿಗೆ ತೆರಳಿ, ಸರ್ಕಾರಕ್ಕೆ ಮನವಿ ಅರ್ಪಿಸಿತು.
ಈ ಸಂದರ್ಭ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ಪ್ರಾಮಾಣಿಕ, ದಕ್ಷ ಪೊಲೀಸ್ ಉಪಾಧೀಕ್ಷಕ ಗಣಪತಿ ಹತ್ಯೆಯಲ್ಲಿ ಸಚಿವ ಕೆ.ಜೆ. ಜಾರ್ಜ್ ಪಾತ್ರವಿರುವುದು ಸ್ಪಷ್ಟ. ತಕ್ಷಣವೇ ಇಂತಹ ಕಳಂಕಿತ ಜಾರ್ಜ್‍ಗೆ ಸಂಪುಟದಿಂದ ರಾಜ್ಯಪಾಲರು ವಜಾ ಮಾಡಲಿ ಎಂದು ಅವರು ಒತ್ತಾಯಿಸಿದರು.
ಮೃತ ಗಣಪತಿಯವರ ಮೊಬೈಲ್‍ನಲ್ಲಿ ಹತ್ಯೆಗೆ ಕಾರಣವಾದ ಕೆಲವು ಅಂಶ, ಸಾಕ್ಷ್ಯ ಮತ್ತು ಮಾಹಿತಿ ಅಳಿಸಿ ಹಾಕಲಾಗಿದೆಯೆಂಬುದಾಗಿ ಸಿಬಿಐನ ಎಫ್‍ಐಆರ್ ದಾಖಲೆ ಆಧಾರದಿಂದಲೇ ಸ್ಪಷ್ಟವಾಗಿದೆ. ವಾಸ್ತವ ಹೀಗಿದ್ದರೂ ಜಾರ್ಜ್‍ಗೆ ಸಿಎಂ ಸಿದ್ದರಾಮಯ್ಯ ನಿರ್ದೋಷಿ ಪಟ್ಟನೀಡಿ, ಮತ್ತೆ ತಮ್ಮ ಸಂಪುಟದ ಸಚಿವರನ್ನಾಗಿ ಮಾಡಿಕೊಂಡಿದ್ದು ಯಾವ ಪುರುಷಾರ್ಥಕ್ಕೆ ಎಂದು ಅವರು ಪ್ರಶ್ನಿಸಿದ ಅವರು, ಡಿಎಸ್ಪಿ ಗಣಪತಿ ಸಾವಿನ ಪ್ರಕರಣದಲ್ಲಿ ಸಚಿವ ಜಾರ್ಜ್ ಆರೋಪಿಯೆಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಇಂತಹ ಕಳಂಕಿತ ಸಚಿವನ ಪರ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಂತಿದ್ದು ದುರಾದೃಷ್ಟವೇ ಸರಿ. ತಕ್ಷಣವೇ ಜಾರ್ಜ್‍ಗೆ ಸಂಪುಟದಿಂದ ವಜಾ ಮಾಡುವ ಜೊತೆಗೆ ಗಣಪತಿ ಸಾವಿನ ಪ್ರಕರಣದಲ್ಲಿ ಜಾರ್ಜ್ ಇತರರ ಕೈವಾಡದ ಬಗ್ಗೆಯೂ ಸಮಗ್ರ ತನಿಖೆಯಾಗಲಿ ಎಂದು ಅವರು ಒತ್ತಾಯಿಸಿದರು.
ಸಚಿವ ಜಾರ್ಜ್ ವಜಾಗೆ ಒತ್ತಾಯಿಸಿ ರಾಜ್ಯವ್ಯಾಪಿಯಾಗಿ ಬಿಜೆಪಿ ಹೋರಾಟ ಹಮ್ಮಿಕೊಂಡಿದ್ದು, ಸಿಎಂ ಸಿದ್ದರಾಮಯ್ಯ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟ ನಡೆಸುವುದೂ ನಿಶ್ಚಿತ ಎಂದು ಎಚ್ಚರಿಸಿದರು.
ಧರಣಿಯಲ್ಲಿ ಪಕ್ಷದ ಮುಖಂಡರಾದ ಪಿ.ಸಿ. ಶ್ರೀನಿವಾಸ, ಸಂಕೋಳ್ ಚಂದ್ರಶೇಖರ, ಎಚ್.ಎನ್. ಶಿವಕುಮಾರ, ಎ.ವೈ. ಪ್ರಕಾಶ, ಪಿಸಾಳೆ ಕೃಷ್ಣ, ನಾಗರತ್ನ ಆರ್. ನಾಯ್ಕ, ಸವಿತಾ ರವಿಕುಮಾರ, ಆರ್.ಲಕ್ಷ್ಮಣ, ಪಿ. ಆನಂದ, ಮಟ್ಟಿಕಲ್ಲು ಕರಿಬಸಪ್ಪ, ಸರೋಜಮ್ಮ ದೀಕ್ಷಿತ್, ದೇವೀರಮ್ಮ, ಕೆ.ಎಂ. ವೀರೇಶ ಪೈಲ್ವಾನ, ಶಿವನಗೌಡ ಟಿ. ಪಾಟೀಲ, ಎಲ್.ಡಿ. ಗೋಣೆಪ್ಪ, ಎಂ.ಮನು, ಟಿಂಕರ್ ಮಂಜಣ್ಣ, ಕೆ.ಜಿ. ಕಲ್ಲಪ್ಪ, ಎಸ್. ಮಂಜುನಾಥ, ಬೇತೂರು ಬಸವರಾಜ, ಶಿವು ತರಕಾರಿ, ಎಚ್.ಕೃಷ್ಣಮೂರ್ತಿ ಕಾಶೀಪುರ, ಬಿ. ವೀರೇಶ, ಕಾಂತರಾಜ, ಹೊನ್ನೂರ ಸಾಬ್, ಆರೀಫ್, ಕೆ.ಎಸ್. ಹನುಮಂತಪ್ಪ, ಟಿಪ್ಪು ಸುಲ್ತಾನ್, ರವಿ, ದುರುಗೇಶ, ಉಮಾ, ಭಾಗ್ಯಮ್ಮ, ಕುಸುಮ, ಮಂಜುಳಾ ಇತರರಿದ್ದರು.