ಜಲಪಾತದಲ್ಲಿ ಈಜಲು ತೆರಳಿದ್ದ ಆರು ಮಂದಿ ಪ್ರವಾಸಿಗರು ನೀರುಪಾಲು
ಕಾರವಾರ, ಸೆ.17: ಪ್ರವಾಸಕ್ಕೆಂದು ಬಂದಿದ್ದ ಗೋವಾದ ಆರು ಮಂದಿ ಪ್ರವಾಸಿಗರು ಜಲಪಾತದಲ್ಲಿ ಈಜುವ ವೇಳೆ ನೀರಿನ ರಭಸಕ್ಕೆ ನೀರುಪಾಲಾಗಿ ಮೃತಪಟ್ಟ ಘಟನೆ ತಾಲೂಕಿನ ಚೆಂಡಿಯಾ ಬಳಿ ರವಿವಾರ ನಡೆದಿದೆ.
ನೀರುಪಾಲಾದವರಲ್ಲಿ ಫ್ರಾನ್ಸಿಲಾ ಪೀರಿಸ್(21) ಹಾಗೂ ಫಿಯೋನಾ ಪಾಚಗೋ(26) ಅವರ ಮೃತದೇಹ ಪತ್ತೆಯಾಗಿವೆ. ಉಳಿದ ಮಸ್ರಿಲ್ಲಿನಾ ಮೆಕ್ಸಿಕ್ಸಾ(26), ರೇಣುಕಾ(23), ಸಿದ್ದು ಚೇರಿ(21) ಹಾಗೂ ಸಮೀರ ಗಾವಡೆ(23) ಅವರ ನಾಪತ್ತೆಯಾದ ಮೃತ ದೇಹಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ.
ಇಲ್ಲಿನ ನಾಗರ ಮಡಿ ಜಲಪಾತಕ್ಕೆ ಪ್ರವಾಸಕ್ಕೆಂದು ಗೋವಾದ ವಾಸ್ಕೊದಿಂದ ಹಾಗೂ ಮಡಗಾಂವನಿಂದ 2 ತಂಡಗಳು ಆಗಮಿಸಿದ್ದವು. ಒಂದು ತಂಡದಲ್ಲಿ 12 ಮಂದಿಯಿದ್ದು, ಮತ್ತೊಂದು ತಂಡದಲ್ಲಿ 14 ಮಂದಿ ಪ್ರವಾಸಿಗರು ಸೇರಿ ಒಟ್ಟು 31 ಪ್ರವಾಸಿಗರಿದ್ದರು ಎನ್ನಲಾಗಿದೆ.
ಪ್ರವಾಸಿಗರು ಜಲಪಾತದ ಅಡಿ ಇರುವ ಹೊಂಡದಲ್ಲಿ ಈಜುತ್ತಿದ್ದ ವೇಳೆ ಧಾರಾಕಾರ ಮಳೆಯಿಂದಾಗಿ ನೀರಿನ ಪ್ರಮಾಣ ಹೆಚ್ಚಾಗಿದೆ. ಇದರಿಂದಾಗಿ 14 ಮಂದಿ ಇದ್ದ ತಂಡದಲ್ಲಿನ ನಾಲ್ವರು ಹಾಗೂ 17 ಮಂದಿ ಇದ್ದ ತಂಡದಲ್ಲಿನ ಐವರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ನೀರುಪಾಲಾದವರಲ್ಲಿ 4 ಮಹಿಳೆಯರು ಹಾಗೂ ಇಬ್ಬರು ಪುರುಷರು ಎನ್ನಲಾಗಿದೆ.
ಈ ಬಗ್ಗೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.