×
Ad

ಗುರಿ ಸಾಧನೆಗೆ ವ್ಯಕ್ತಿತ್ವ ವಿಕಸನ ಅಗತ್ಯ: ಡಾ. ಜಗದೀಶ್

Update: 2017-09-17 19:00 IST

ಚಿಕ್ಕಮಗಳೂರು, ಸೆ.17: ಗುರಿ ಸಾಧನೆಗೆ ಪದವಿ ಪ್ರಮಾಣ ಪತ್ರ, ತಾಂತ್ರಿಕತೆ, ಕೌಶಲ್ಯಗಳಷ್ಟೇ ಸಾಲದು ಅದರ ಜೊತೆಗೆ ವ್ಯಕ್ತಿತ್ವ ವಿಕಸನವೂ ಅಗತ್ಯ ಎಂದು ಐಡಿಎಸ್‍ಜಿ ಕಾಲೇಜಿನ ಪ್ರಾಧ್ಯಾಪಕ ಪ್ರೊ. ಡಾ. ಜಗದೀಶ್ ಹೇಳಿದರು.

ಅವರು ನಗರದ ಟೌನ್ ಮಹಿಳಾ ಕಾಲೇಜಿನಲ್ಲಿ ಟಿಎಂಎಸ್ ಫೆಸ್ಟ್-2017 ಅಂಗವಾಗಿ ಏರ್ಪಡಿಸಲಾಗಿದ್ದ ಲಕ್ಷ್ಯ-ಏಮ್ ಟು ಸಕ್ಸಸ್ ಕಾರ್ಯಕ್ರಮದಲ್ಲಿ ಪ್ರಧಾನ ಉಪನ್ಯಾಸಕರಾಗಿ ಮಾತನಾಡಿದ ಅವರು, ಬಹುತೇಕ ಕಾಲೇಜುಗಳು ತಮ್ಮ ವಿದ್ಯಾರ್ಥಿಗಳು ಓದಿನಲ್ಲಿ ಹೆಚ್ಚು ಮೆರಿಟ್‍ಗಳಿಸಬೇಕು ಎನ್ನುವ ನಿಟ್ಟಿನಲ್ಲಿ ಮಾತ್ರ ಪ್ರಯತ್ನಿಸುತ್ತವೆ. ಆದರೆ ಮಕ್ಕಳಲ್ಲಿ ಕೌಶಲ್ಯಾಭಿವೃದ್ಧಿ, ಅಭಿವ್ಯಕ್ತಿ ಸಾಮರ್ಥ್ಯ, ವ್ಯಕ್ತಿತ್ವ ರೂಪಿಸುವುದರ ಕಡೆಗೆ ಹೆಚ್ಚಿನ ಆದ್ಯತೆ ನೀಡುವುದಿಲ್ಲ. ಇದು ನಮ್ಮ ದುರಂತ ಎಂದು ವಿಷಾದಿಸಿದರು.

ನಮ್ಮ ಸುತ್ತಲಿನ ವಾತಾವರಣವನ್ನು ಅರಿತುಕೊಂಡು ಅದಕ್ಕೆ ಹೊಂದಿಕೊಳ್ಳುವ ಸಕಾರಾತ್ಮಕ ನಡವಳಿಕೆ ನಮ್ಮದಾಗಬೇಕು. ಯಾವುದೇ ಸಂದರ್ಭವನ್ನು ಸ್ಪರ್ಧಾತ್ಮಕವಾಗಿ ಸ್ವೀಕರಿಸಬೇಕು. ಬಹುತೇಕ ವಿದ್ಯಾರ್ಥಿಗಳ ಭವಿಷ್ಯ ಈಗ ಸಿಇಟಿಗಳ ಮೇಲೆ ನಿರ್ಧರಿತವಾಗುತ್ತದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಸನ ಅತ್ಯಂತ ಪ್ರಮುಖವಾಗುತ್ತದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ನಗರಸಭೆ ಆಯಕ್ತೆ ತುಷಾರಮಣಿ ಮಾತನಾಡಿ, ಇಂದಿನ ಮಕ್ಕಳು ದೊಡ್ಡವರಾಗಿ ಎಲ್ಲದರಲ್ಲೂ ಮುಂದುವರಿದು ಬಂಗಲೆ, ಕಾರುಗಳನ್ನು ಕೊಳ್ಳಬಹುದು. ಆದರೆ ನೀರು, ಸ್ವಚ್ಛಗಾಳಿ, ಉತ್ತಮ ಪರಿಸರ ಇಲ್ಲವಾದರೆ ಯಾವುದೂ ಪ್ರಯೋಜನಕ್ಕೆ ಬರುವುದಿಲ್ಲ. ಮುಂದೊಂದು ದಿನ ಕೆರೆ ಕಟ್ಟೆಗಳನ್ನು ಸೈನಿಕರು ಬಂದೂಕು ಹಿಡಿದು ಕಾಯಬೇಕಾದ ಸ್ಥಿತಿ ನಿರ್ಮಾಣವಾದರೂ ಆಚ್ಚರಿಯಿಲ್ಲ. ಈ ಹಿನ್ನೆಲೆಯಲ್ಲಿ ಇಂದಿನಿಂದಲೇ ನೈಸರ್ಗಿಕ ಸಂಪತ್ತನ್ನು ಕಾಪಾಡಿಕೊಳ್ಳುವ ಅಗತ್ಯವಿದೆ ಎಂದರು.

ಕಾಲೇಜಿನ ಪ್ರಾಂಶುಪಾಲ ಇಂದ್ರೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಸನ, ಭಾಷಾಜ್ಞಾನ, ಕೌಶಲ್ಯಾಭಿವೃದ್ಧಿ ಮೂಲಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಮುಂದೆ ಉದ್ಯೋಗಗಳಿಸುವ ವಿಚಾರದಲ್ಲಿ ಹೇಗೆ ಯಶಸ್ಸುಗಳಿಸಬಹುದು ಎನ್ನುವುದರ ಬಗ್ಗೆ ಮಾಹಿತಿ ಒದಗಿಸುವುದು ಲಕ್ಷ್ಯ-ಏಮ್ಸ್ ಟು ಸಕ್ಸಸ್ ಕಾರ್ಯಕ್ರಮದ ಉದ್ದೇಶ ಎಂದರು.

ಕಾರ್ಯಕ್ರಮದಲ್ಲಿ ಟಿಎಂಎಸ್ ಅಧ್ಯಕ್ಷೆ ನಳಿನ ಡಿ’ಸಾ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ನೇತ್ರಾ ವೆಂಕಟೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News