ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನ: ಬಿಜೆಪಿಯಿಂದ ಸ್ವಚ್ಚತಾ ಕಾರ್ಯ
ಮೂಡಿಗೆರೆ, ಸೆ.17: ಆರೋಗ್ಯದ ದೃಷ್ಟಿಯಿಂದ ಸ್ವಚ್ಛತೆ ಅತೀ ಮುಖ್ಯವಾಗಿದೆ. ಆದ್ದರಿಂದ ಆರೋಗ್ಯದ ವಿಭಾಗಕ್ಕೆ ಹೆಚ್ಚಿನ ಒತ್ತು ನೀಡುವ ದೃಷ್ಟಿಯಿಂದ ಆಸ್ಪತ್ರೆಗಳಲ್ಲಿ ಶ್ರಮದಾನ ಮೂಲಕ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್ ತಿಳಿಸಿದರು.
ಅವರು ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರ 67ನೆ ಹುಟ್ಟುಹಬ್ಬದ ಪ್ರಯುಕ್ತ ಪಟ್ಟಣದ ಸಾರ್ವಜನಿಕ ಸರಕಾರಿ ಎಂಜಿಎಂ ಆಸ್ಪತ್ರೆಯಲ್ಲಿ ಸ್ವಚ್ಛತಾ ಕಾರ್ಯ ನೆರವೇರಿಸಿ, ಒಳ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ ಮಾತನಾಡಿದರು.
ಸಾಮಾನ್ಯವಾಗಿ ಜನರು ಪಕ್ಕದ ಮನೆ ಕಾಂಪೌಂಡ್ ಅಥವಾ ಸಾರ್ವಜನಿಕ ಪ್ರದೇಶಗಳಲ್ಲಿ ತ್ಯಾಜ್ಯ ವಸ್ತುಗಳನ್ನು ಸುರಿದು ಪರಿಸರವನ್ನು ಹಾಳು ಮಾಡುತ್ತಿದ್ದಾರೆ. ಹೀಗಾಗಿ ಕೇಂದ್ರ ಸರಕಾರ ಸ್ವಚ್ಛತಾ ಅಭಿಯಾನಕ್ಕೆ ಹೆಚ್ಚಿನ ಒತ್ತು ನೀಡಿ ಸಾಕಷ್ಟು ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.
ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ದೇಶದಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ನಮ್ಮ ಮುಖ್ಯ ಕರ್ತವ್ಯವಾಗಿದೆ. ಪ್ರಮುಖವಾಗಿ ಆರೋಗ್ಯದ ದೃಷ್ಟಿಯಿಂದ ಸೊಳ್ಳೆ ಮತ್ತಿತರ ಕ್ರಿಮಿ, ಕೀಟಗಳು ಉತ್ಪತ್ತಿಯಾಗದಂತೆ ತಡೆದು ನಮ್ಮ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದರು.
ಈ ವೇಳೆ ಬಿಜೆಪಿಯ ವಿವಿಧ ಮೋರ್ಚದ ಕಾರ್ಯಕರ್ತರು ಆಸ್ಪತ್ರೆ ಆವರಣದ ಸುತ್ತ ಮುತ್ತ ಇದ್ದ ಪೊದೆ ಕತ್ತರಿಸಿ, ತ್ಯಾಜ್ಯಗಳನ್ನು ತೆರವುಗೊಳಿಸಿದರು. ಬಳಿಕ ಆಸ್ಪತ್ರೆಯಲ್ಲಿ ದಾಖಲಾಗಿರುವ ಒಳ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ತಾಪಂ ಅಧ್ಯಕ್ಷ ಕೆ.ಸಿ.ರತನ್, ಜಿಪಂ ಸದಸ್ಯ ಶಾಮಣ್ಣ, ಪಪಂ ಸದಸ್ಯರಾದ ರಾಮಕೃಷ್ಣ, ಧರ್ಮಪಾಲ್, ಲತಾ ಲಕ್ಷ್ಮಣ್, ಮಂಡಲ ಅಧ್ಯಕ್ಷ ದುಂಡುಗ ಪ್ರಮೋದ್, ಡಿ.ಎಸ್.ಸುರೇಂದ್ರ, ಜೆ.ಎಸ್.ರಘು, ಹಳೆಕೋಟೆ ಮನೋಜ್, ಗಜೇಂದ್ರ ಕೊಟ್ಟಿಗೆಹಾರ, ವಿನಯ್ ಹಳೆಕೋಟೆ, ಚಂದು ಹುಲ್ಲೆ ಮನೆ, ಪ್ರವೀಣ್ ಪೂಜಾರಿ, ನಯನ ತಳವಾರ, ಗಿರೀಶ್ ಹಳ್ಳಬೈಲ್, ಹೆಸಗಲ್ ಗಿರೀಶ್, ಉತ್ತಮ್, ಪರೀಕ್ಷಿತ್, ಭರತ್ ಬಾಳೂರು, ಅನುಪ್ ಕುಮಾರ್ ಪಟದೂರು, ಬಾಳೂರು ಮಂಜು, ಜಯಪಾಲ್ ಬಿದರಹಳ್ಳಿ ಉಪಸ್ಥಿತರಿದ್ದರು.