ಸೇತುವೆ ಕುಸಿತ: ರಸ್ತೆ ಸಂಚಾರ ಅಸ್ತವ್ಯಸ್ತ
ಮೂಡಿಗೆರೆ, ಸೆ.17: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಗೌಡಹಳ್ಳಿ, ಹೊರಟ್ಟಿ ಸಂಪರ್ಕ ಸೇತುವೆ ಕುಸಿಯುವ ಹಂತ ತಲುಪಿದ್ದು, ಶನಿವಾರ ರಾತ್ರಿ ವೇಳೆ ಸೇತುವೆಯ ಅರ್ಧ ಭಾಗ ಕುಸಿದು ಬಿದ್ದಿದ್ದು, ಇದರಿಂದ ವಿವಿಧ ಗ್ರಾಮಕ್ಕೆ ತೆರಳುವ ವಾಹನ ಸಂಪರ್ಕ ಕಡಿತಗೊಂಡಿದೆ.
ಕಳೆದ ಕೆಲವು ವರ್ಷಗಳ ಹಿಂದೆ ನಿರ್ಮಾಣವಾಗಿರುವ ಈ ಸೇತುವೆ ಕಳಪೆ ಕಾಮಗಾರಿಯಿಂದ ಕೂಡಿದೆ. ಈ ಹಿಂದೆಯೇ ಈ ಸೇತುವೆ ಕುಸಿಯುವ ಹಂತಕ್ಕೆ ತಲುಪಿತ್ತು. ಸೇತುವೆಯನ್ನು ಮರು ನಿರ್ಮಿಸಿ ಗ್ರಾಮದ ಶಾಲಾ ಮಕ್ಕಳು ಮತ್ತು ಸಾರ್ವಜನಿಕರ ಉಪಯೋಗಕ್ಕಾಗಿ ಅನುಕೂಲ ಮಾಡಿಕೊಡಬೇಕೆಂದು ಗ್ರಾಮಾಸ್ಥರು ಅನೇಕ ಬಾರಿ ಒತ್ತಾಯಿಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಕಳೆದ ಶನಿವಾರ ಸೇತುವೆ ಕುಸಿತಕ್ಕೊಳಗಾಗಿದ್ದು, ವಾಹನಗಳ ಸಂಚಾರಕ್ಕೆ ತೊಡಕುಂಟಾಗಿದೆ. ಅಲ್ಲದೆ, ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ತೀವ್ರ ತರದ ತೊಂದರೆ ಎದುರಾಗಿದೆ. ಕೂಡಲೇ ಸೇತುವೆಯನ್ನು ದುರಸ್ತಿಪಡಿಸುವಂತೆ ಸ್ಥಳೀಯರು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ತಾಲೂಕು ಆಡಳಿತವನ್ನು ಒತ್ತಾಯಿಸಿದ್ದಾರೆ.