×
Ad

ದೇಶದ ಸರ್ವತೋಮುಖ ಅಭಿವೃದ್ಧಿಗೆ ವಿಶ್ವಕರ್ಮರ ಕೊಡುಗೆ ಅಪಾರ: ಎಚ್.ಎಸ್.ರಾಘವೇಂದ್ರ

Update: 2017-09-17 22:28 IST

ಗುಂಡ್ಲುಪೇಟೆ, ಸೆ.17: ಭಾರತದ ಸಾಂಸ್ಕೃತಿಕ ಬೆಳವಣಿಗೆ ಹಾಗೂ ಮನುಕುಲದ ಸರ್ವತೋಮುಖ ಅಭಿವೃದ್ಧಿಗೆ ವಿಶ್ವಕರ್ಮರ ಕೊಡುಗೆ ಅಪಾರ ಎಂದು ಉಪನ್ಯಾಸಕ ಎಚ್.ಎಸ್.ರಾಘವೇಂದ್ರ ಅಭಿಪ್ರಾಯಪಟ್ಟರು.

ಪಟ್ಟಣದ ಗುರುಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಭಾಷಣಕಾರರಾಗಿ ಅವರು ಮಾತನಾಡಿ, ವಿಶ್ವಕ್ಕೆ ತಂತ್ರಜ್ಞಾನ ಪರಿಚಯ ಮಾಡಿಕೊಡುವುದರ ಮೂಲಕ ಪಂಚಕಸುಬನ್ನು ನಿತ್ಯ ಕರ್ಮವೆಂದು ಭಾವಿಸಿಕೊಂಡು ಈ ದೇಶದ ದೇವಾಲಯಗಳನ್ನು ಉತ್ತುಂಗಶಿಖರಕ್ಕೆ ಏರಿಸಿದರು. ಅಜಂತ, ಎಲ್ಲೋರ, ಬಾದಾಮಿ, ಐಹೊಳೆ ಸೇರಿದಂತೆ  ಸುಪ್ರಸಿದ್ಧ ದೇವಾಲಯಗಳಲ್ಲಿನ ಶಿಲ್ಪಕಲೆಗಳು ಇವರ ಕೆತ್ತನೆಯ ಶಕ್ತಿಯನ್ನು ಸಾರುತ್ತವೆ. ಕಲ್ಲಿಗೂ ಸುಂದರ ರೂಪ ನೀಡಿ ಪ್ರಖ್ಯಾತಿ ಪಡೆದ ಅಮರಶಿಲ್ಪಿ ಜಕಣಾಚಾರಿಯಂತಹ ಶ್ರೇಷ್ಠ ಶಿಲ್ಪಿಯನ್ನು ಕಾಣಬಹುದಾಗಿದೆ ಎಂದರು.

ಸಮಾನತೆಯ ಸಂಕೇತವಾಗಿ, ದೇಶದ ಆರ್ಥಿಕಾಭಿವೃದ್ಧಿ, ನಾಣ್ಯಗಳ ಸೃಷ್ಟಿ, ಚಿನ್ನದಿಂದ ಆಭರಣಕ್ಕೆ ರೂಪ, ವಾಸ್ತುವಿಗೆ ವೈಜ್ಞಾನಿಕ ಶಕ್ತಿ ಸೇರಿದಂತೆ ಇವರ ಕಾಯಕದ ಫಲಗಳು ಕಾಣದ ಜಾಗವಿಲ್ಲ ಇಂತಹ ವಿಶ್ವಕರ್ಮ ಜನಾಂಗವು ಕಸುಬಿನ ಜೊತೆ ಶಿಕ್ಷಣಕ್ಕೆ ಒತ್ತು ನೀಡುವುದು  ಒಳಿತು ಎಂದು ಕಿವಿ ಮಾತು ಹೇಳಿದರು. 

ಕಾಡಾ ಅಧ್ಯಕ್ಷ ಎಚ್.ಎಸ್.ನಂಜಪ್ಪ ಮಾತನಾಡಿ, ಈ ದೇಶದ ದೇವಾಲಯಗಳಲ್ಲಿನ ಕಲಾಕೃತಿಗಳ ಸುಂದರ ಕೆತ್ತನೆಯಿಂದ ಪ್ರವಾಸೋದ್ಯಮದ ಅಭಿವೃದ್ಧಿಯಾದ ಪರಿಣಾಮವಾಗಿ ಸರ್ಕಾರದ ದೊಡ್ಡ ಆದಾಯದ ಮೂಲವಾಗಿದೆ. ಸರ್ಕಾರವು ವಿಶ್ವಕರ್ಮರ ಅಭಿವೃದ್ದಿಗೆ ಪ್ರಾಧಿಕಾರವನ್ನು ರಚಿಸಿದ್ದು, ಕುಶಲಕರ್ಮಿಗಳು ಆರ್ಥಿಕವಾಗಿ ಸಧೃಡರಾಗಲು ಸೌಲಭ್ಯಗಳನ್ನು ಬಳಸಿಕೊಳ್ಳುವಂತೆ ಸಲಹೆ ನೀಡಿದರು.

ಈ ಸಂಧರ್ಭದಲ್ಲಿ ತಾಪಂ ಅಧ್ಯಕ್ಷ ಎಚ್.ಎನ್.ನಟೇಶ್, ತಹಶೀಲ್ದಾರ್ ಕೆ,ಸಿದ್ದು, ಪ್ರಭಾರ ಇಒ ಎಚ್.ಎಸ್.ಬಿಂದ್ಯಾ ಜಿ.ಪಂ.ಸದಸ್ಯ ಕೆ.ಎಸ್. ಮಹೇಶ್, ವಿಶ್ವಕರ್ಮ ಸಮಾಜದ ಅಧ್ಯಕ್ಷೆ ಸೌಭಾಗ್ಯ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News