×
Ad

ಸೆಪ್ಟೆಂಬರ್ ಅಂತ್ಯದೊಳಗೆ ವಕ್ಫ್ ಆಸ್ತಿ ಸರ್ವೇ ಕಾರ್ಯ ಪೂರ್ಣಗೊಳಿಸಲು ಅಪರ ಜಿಲ್ಲಾಧಿಕಾರಿ ಸೂಚನೆ

Update: 2017-09-17 22:46 IST

ಶಿವಮೊಗ್ಗ, ಸೆ.17: ಸರ್ಕಾರದ ನಿರ್ದೇಶನದ ಪ್ರಕಾರ ಈ ತಿಂಗಳ ಅಂತ್ಯದ ಒಳಗಾಗಿ ಬಾಕಿ ಇರುವ ವಕ್ಫ್ ಆಸ್ತಿಗಳ ಸರ್ವೇ ಕಾರ್ಯವನ್ನು ಪೂರ್ಣಗೊಳಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇತ್ತೀಚೆಗೆ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ವಕ್ಫ್ ಆಸ್ತಿಗಳ ಕಾರ್ಯಪಡೆ ಸಭೆಯಲ್ಲಿ ಮಾತನಾಡಿದ ಅವರು,
ಜಿಲ್ಲೆಯಲ್ಲಿ ಇರುವ ಒಟ್ಟು 343 ನೋಂದಾಯಿತ ವಕ್ಫ್ ಆಸ್ತಿಗಳ ಪೈಕಿ ಇದುವರೆಗೆ 314 ಆಸ್ತಿಗಳ ಸರ್ವೇ ಕಾರ್ಯ ಪೂರ್ಣಗೊಳಿಸಲಾಗಿದೆ. ಇನ್ನೂ 29 ಆಸ್ತಿಗಳ ಸರ್ವೇ ಕಾರ್ಯ ಬಾಕಿಯಿದ್ದು, ಆದಷ್ಟು ಬೇಗನೇ ಪೂರ್ಣಗೊಳಿಸಬೇಕು ಎಂದರು.

 ವಕ್ಫ್ ಆಸ್ತಿಗಳ ಖಾತೆಗಳ ಬದಲಾವಣೆ ಹಾಗೂ ಕ್ರಮ ಬದ್ಧಗೊಳಿಸುವ ಕಾರ್ಯವನ್ನು ಸಹ ತ್ವರಿತಗೊಳಿಸಬೇಕು. ವಕ್ಫ್ ಆಸ್ತಿಗೆ ಸಂಬಂಧಿಸಿದ ಖಾತೆಗಳನ್ನು ವಕ್ಫ್ ಸಂಸ್ಥೆ ಹೆಸರಿನಲ್ಲಿ ವಕ್ಫ್ ಸೊತ್ತು ಎಂದು ನಮೂದಿಸಬೇಕು ಎಂದು ಎಲ್ಲಾ ತಹಶೀಲ್ದಾರ್‍ಗಳಿಗೆ ಸೂಚನೆ ನೀಡಿದರು.

ಖಬರಸ್ತಾನಗಳಿಗೆ ಜಮೀನು: ಅಗತ್ಯವಿರುವ ಕಡೆಗಳಲ್ಲಿ ಖಬರಸ್ತಾನಗಳಿಗೆ ಜಮೀನು ಒದಗಿಸಲು ಕ್ರಮಕೈಗೊಳ್ಳಬೇಕು. ಜಿಲ್ಲೆಯಲ್ಲಿ ಒಟ್ಟು 173 ಖಬರಸ್ತಾನಗಳಿದ್ದು, ಇನ್ನೂ 8 ಖಬರಸ್ತಾನಗಳಿಗೆ 18ಎಕರೆ 29ಗುಂಟೆ ಜಮೀನಿನ ಅಗತ್ಯವಿದೆ. ಖಬರಸ್ತಾನಗಳಿಗೆ ಸೂಕ್ತ ಜಮೀನು ಗುರುತಿಸಿ ಮಂಜೂರು ಮಾಡಬೇಕು. ಈ ಕುರಿತು ಸಂಬಂಧಪಟ್ಟ ಗ್ರಾಮ ಪಂಚಾಯತ್‍ಗಳಿಗೆ ಮಾರ್ಗದರ್ಶನ ನೀಡಲು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಮಾಡಲಾಗುವುದು ಎಂದು ಹೇಳಿದರು.

ಭೂಸುಧಾರಣಾ ಕಾಯ್ದೆಯಡಿ ಸುಮಾರು 70ಎಕರೆ ವಕ್ಫ್ ಜಮೀನು ಪ್ರಭಾವಿತಗೊಂಡಿದ್ದು, ಅದನ್ನು ಹಿಂಪಡೆಯಲು ಕೈಗೊಂಡಿರುವ ಕ್ರಮಗಳ ಮಾಹಿತಿ ಒದಗಿಸುವಂತೆ ಅವರು ತಿಳಿಸಿದರು.

ವಕ್ಫ್ ಆಸ್ತಿಗಳ ಬಾಡಿಗೆ-ನವೀಕರಣ ಸಂದರ್ಭದಲ್ಲಿ ನಗರ ಸ್ಥಳೀಯ ಸಂಸ್ಥೆಗಳು ಅಥವಾ ಆಯಾ ಗ್ರಾಮ ಪಂಚಾಯತ್‍ಗಳು ಕಡ್ಡಾಯವಾಗಿ ಜಿಲ್ಲಾ ವಕ್ಫ್ ಕಚೇರಿಯಿಂದ ನಿರಾಕ್ಷೇಪಣೆ ಪತ್ರವನ್ನು ಪಡೆಯಬೇಕು ಎಂದು ಅಪರ ಜಿಲ್ಲಾಧಿಕಾರಿ ಅವರು ಸೂಚನೆ ನೀಡಿದರು.

ಸಭೆಯಲ್ಲಿ ಸಾಗರ ಉಪವಿಭಾಗಧಿಕಾರಿ ನಾಗರಾಜ ಸಿಂಗ್ರೇರ್, ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಹಬೀಬುಲ್ಲಾ, ಸದಸ್ಯ ಕಾರ್ಯದರ್ಶಿ ಅಬ್ದುಲ್ ಮನ್ನಾನ್, ಭೂಮಾಪನಾಧಿಕಾರಿ ಝುಬೇದುಲ್ಲಾ, ವಿವಿಧ ತಾಲೂಕು ತಹಶೀಲ್ದಾರ್‍ಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News