ಹೊಸ ಯೋಜನೆಗಳ ಬಗ್ಗೆ ರೂಪುರೇಷೆ ಹೊಂದಿದ್ದಲ್ಲಿ ಮಾಹಿತಿ ನೀಡಬೇಕು: ಡಿ.ಎಸ್. ರಮೇಶ್
ದಾವಣಗೆರೆ, ಸೆ.17: ವಿವಿಧ ಇಲಾಖೆಗಳು ಮುಂದಿನ ಏಳು ವರ್ಷಗಳಿಗೆ ಸಂಬಂಧಿಸಿದಂತೆ ಸಮಗ್ರ ಅಭಿವೃದ್ಧಿಗಾಗಿ ಯಾವುದಾದರೂ ಯೋಜನೆ ರೂಪಿಸಿದ್ದಲ್ಲಿ, ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಿದ್ದಲ್ಲಿ ಅಥವಾ ಹೊಸ ಯೋಜನೆಗಳ ಬಗ್ಗೆ ರೂಪುರೇಷೆ ಹೊಂದಿದ್ದಲ್ಲಿ ಮಾಹಿತಿ ನೀಡಬೇಕೆಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಹೇಳಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಮುಖ್ಯಮಂತ್ರಿಯವರು ಆರಂಭಿಸುತ್ತಿರುವ ವಿಜ್ಹನ್ 2025 ಎಂಬ ವಿನೂತನ ಅಭಿವೃದ್ಧಿ ಯೋಜನೆ ಕುರಿತು ಸೆ.18 ರಂದು ಮುಖ್ಯಮಂತ್ರಿಯವರು ಜಿಲ್ಲಾಧಿಕಾರಿಗಳೊಂದಿಗೆ ನಡೆಸುತ್ತಿರುವ ವೀಡಿಯೊ ಕಾನ್ಫರೆನ್ಸ್‍ಗೆ ಪೂರ್ವಭಾವಿಯಾಗಿ ಕರೆಯಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಮ್ಮ ತಮ್ಮ ಇಲಾಖೆಗಳಿಗೆ ಸಂಬಂಧಿಸಿದಂತೆ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದ ಯೋಜನೆಗಳ ಕುರಿತು ಚರ್ಚೆಯಾಗಿದ್ದಲ್ಲಿ, ಪ್ರಸ್ತಾವನೆ ಸಲ್ಲಿಸಿದ್ದಲ್ಲಿ, ಅಥವಾ ಅಂತಹ ಯೋಜನೆ ಇದ್ದಲ್ಲಿ ಅಂತಹ ಯೋಜನೆಗಳ ಕುರಿತು ಸಂಪೂರ್ಣ ಮಾಹಿತಿ ಒದಗಿಸಲು ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಅವರು ಸೂಚಿಸಿದರು.
ನೀರು ಸರಬರಾಜು, ಒಳಚರಂಡಿ ಯೋಜನೆ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಸಾಮಾಜಿಕ ಅರಣ್ಯ, ಅರಣ್ಯ ಇಲಾಖೆಗಳ ವಿವಿಧ ಯೋಜನೆಗಳು, ಪ್ರೌಢಶಾಲಾ ಮಕ್ಕಳಿಗೆ ಕಂಪ್ಯೂಟರ್ ಕಲಿಕೆಗೆ ಅವಕಾಶ, ಜೈಲ್ ಮತ್ತು ಪೋಲಿಸ್ ಠಾಣೆಗಳ ಉನ್ನತೀಕರಣ, ಅಕ್ಷರ ದಾಸೋಹ ಮತ್ತು ಕ್ಷೀರಭಾಗ್ಯ ಯೋಜನೆ ಹೈಟೆಕ್‍ಗೊಳಿಸುವುದು, ಕೃಷಿ ಸಿಂಚಾಯಿ ಸೇರಿದಂತೆ ಕೃಷಿ ಯೋಜನೆಗಳ ಸುಧಾರಣೆ ಕೈಗಾರಿಕಾ ಕಾರಿಡಾರ್ ಯೋಜನೆ ಬಗ್ಗೆ ಚಿಂತನೆ ಸೇರಿದಂತೆ ವಿವಿಧ ಇಲಾಖೆಗಳು ಕೈಗೊಳ್ಳಲು ಯೋಜಿಸಿರುವ ಹಾಗೂ ಪ್ರಸ್ತಾಪಿತ ಯೋಜನೆಗಳ ಅಥವಾ ಸಮಗ್ರ ಅಭಿವೃದ್ಧಿ ನಿಟ್ಟಿನಲ್ಲಿ ಹೊಸದಾಗಿ ಆರಂಭಿಸಲು ಉದ್ದೇಶಿಸಲಾಗಿರುವ ವಿವರವನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.