×
Ad

ಅನಿತಾಬಾಯಿ

Update: 2017-09-17 23:03 IST

ದಾವಣಗೆರೆ, ಸೆ.17: ಸರ್ಕಾರದ ಯಾವುದೇ ಸೌಲಭ್ಯಗಳು ಅರ್ಹ ಕಾರ್ಮಿಕ ಫಲಾನುಭವಿಗಳಿಗೆ ಸಮರ್ಪಕವಾಗಿ ಸಿಗಲು ಹಾಗೂ ಅವರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕಾರ್ಮಿಕರ ಪರವಾದ ಸಂಘಟನೆಗಳ ಪಾತ್ರ ಬಹುಮುಖ್ಯ ಎಂದು ಮೇಯರ್ ಅನಿತಾಬಾಯಿ ಮಾಲತೇಶ್ ಜಾಧವ್ ಅಭಿಪ್ರಾಯಪಟ್ಟರು.

ಅವರು ನಗರದ ಹದಡಿ ರಸ್ತೆ ವಿದ್ಯಾರ್ಥಿ ಭವನ ಬಳಿ ಇರುವ ಅಖಿಲ ಕರ್ನಾಟಕ ಕಟ್ಟಡ ಮತ್ತು ಇತರೆ ಕಾರ್ಮಿಕರ ಸಂಘದ ಕೇಂದ್ರ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಅಖಿಲ ಕರ್ನಾಟಕ ಕಟ್ಟಡ ಮತ್ತು ಇತರೆ ಕಾರ್ಮಿಕರ ಸಂಘದ ರಾಜ್ಯ ಘಟಕ ಉದ್ಘಾಟಿಸಿ ಮಾತನಾಡಿದರು.

ಸಂಘಟನೆಗಳಿಲ್ಲದೇ ಯಾವುದೇ ಮೂಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ. ಸಾಮಾನ್ಯ ಮೂಲ ಸಮಸ್ಯೆಗಳು ಹಾಗೂ ಕಾರ್ಮಿಕರ ಕುಂದು-ಕೊರತೆಗಳ ಬಗ್ಗೆ ಸಂಘಟನೆಗಳು ಹೋರಾಟದ ಮುಖೇನ ಮನವಿ ಮಾಡಿದಾಗ ನಗರ ಪಾಲಿಕೆ ಆಡಳಿತಕ್ಕಾಗಲೀ, ಸಚಿವರು, ಶಾಸಕರಿಗಾಗಲೀ ಗಮನಕ್ಕೆ ಬಂದು ಪರಿಹಾರಕ್ಕೆ ಪ್ರಯತ್ನಿಸಲು ಸಾಧ್ಯವಾಗಲಿದೆ ಎಂದ ಅವರು, ಕಾರ್ಮಿಕರ ಯಾವುದೇ ಸಮಸ್ಯೆಗಳಿದ್ದರೂ ನನ್ನ ಬಳಿ ಬಂದರೆ ನಗರಪಾಲಿಕೆ ವ್ಯಾಪ್ತಿಯಲ್ಲಿ ಕಾನೂನಿನಡಿ ಅವುಗಳ ನಿವಾರಿಸಲು ಪ್ರಯತ್ನಿಸುವೆ ಎಂದು ಅವರು ಭರವಸೆ ನೀಡಿದರು.

ಕಾರ್ಮಿಕ ಅಧಿಕಾರಿ ಇಬ್ರಾಹೀಂ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 46 ಸಾವಿರ ಕಾರ್ಮಿಕರು ನೋಂದಾಣಿಯಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ಸೌಲಭ್ಯಗಳ ಕುರಿತು ಅರ್ಜಿ ಬಂದಿದ್ದು, ಸಿಬ್ಬಂದಿಗಳ ಕೊರತೆಯಿಂದ ಅರ್ಜಿಗಳ ವಿಲೆವಾರಿ ತಡವಾಗುತ್ತಿದೆ. ಆದರೆ, ಈಗಾಗಲೇ ಸಾವಿರ ಅರ್ಜಿ ವಿಲೇವಾರಿ ಮಾಡಲಾಗಿದೆ. ಇನ್ನೂ ಒಂದು ಸಾವಿರ ಅರ್ಜಿಗಳ ಸೌಲಭ್ಯ ಕಲ್ಪಿಸುವುದಕ್ಕೆ ಸಿದ್ಧವಾಗಿದ್ದು, ಅನುದಾನ ಬೇಕು ಎಂದರು.

ವೃತ್ತ ನಿರೀಕ್ಷಕ ಜಿ.ಬಿ. ಉಮೇಶ್ ಮಾತನಾಡಿ, ಕಾರ್ಮಿಕರು ಸಾಕಷ್ಟು ಸಮಸ್ಯೆಗಳ ನಡುವೆಯೂ ಕಾರ್ಯ ನಿರ್ವಹಿಸಲಾಗುತ್ತಿದ್ದು, ವಿಧಾನ ಸೌಧ ನಿರ್ಮಾತೃಗಳೇ ಕಾರ್ಮಿಕರಾಗಿದ್ದು, ಸರ್ಕಾರ ಆಡಳಿತ ನಡೆಸಿ ರೈತರು, ಕಾರ್ಮಿಕರು ಸೇರಿ ಎಲ್ಲಾ ವರ್ಗದ ಜನತೆ ಯೋಜನೆಗಳನ್ನು ದೊರಕಿಸುವ ಬಗ್ಗೆ ಆಡಳಿತ ನಡೆಸಲು ಸಹಕಾರಿಯಾಗಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಸಚಿವ ಎಸ್.ಎ. ರವೀಂದ್ರನಾಥ್, ಈ ಹಿಂದೆ ಜಿಲ್ಲೆಯಲ್ಲಿ ಕಾರ್ಮಿಕ ಸಂಘಟನೆ ಶಕ್ತಿಯಿಂದ ಬೆಳೆದಿದ್ದವು. ಅದೇ ರೀತಿ ಹೀಗಲೂ ಸಂಘಟನೆಗಳು ಕಾರ್ಮಿಕರ ಪರವಾಗಿ ನಿಂತು ಸರ್ಕಾರದ ಸೌಲಭ್ಯಗಳನ್ನು ಹಾಗೂ ಜೀವವಿಮೆಯನ್ನು ಕಡ್ಡಾಯವಾಗಿ ಮಾಡಿಸಲು ಪ್ರಯತ್ನಿಸಬೇಕು. ಕಾರ್ಮಿಕರ ಸಮಸ್ಯೆಗಳಿಗೆ ಪ್ರಮಾಣಿಕವಾಗಿ ನ್ಯಾಯ ದೊರಕಿಸಲು ಸಂಘಟನೆಗಳು ನೆರವಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಉಪಮೇಯರ್ ಅಬ್ದುಲ್ ಲತೀಫ್, ರಾಜ್ಯ ಹಿರಿಯ ಮಾರ್ಗದರ್ಶನಕ ಸೋಮಲಾಪುರ ಹನುಮಂತಪ್ಪ, ಕೇಂದ್ರ ವೃತ್ತ ನಿರೀಕ್ಷಕ ಇ. ಆನಂದ್, ಕಾನೂನು ಸಲಹೆಗಾರ ಬಾಬು ಗೋಶಾಲೆ, ಗೌರವಾಧ್ಯಕ್ಷ ಟಾರ್ಗೆಟ್ ಆಸ್ಲಂ, ಸಂಸ್ಥಾಪಕ ರಾಜ್ಯಾಧ್ಯಕ್ಷ ಎನ್.ನಾಗರಾಜ್ ನಾಯ್ಕ್, ರಾಜ್ಯ ಉಪಾಧ್ಯಕ್ಷ ಬಸವರಾಜ್, ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಪರಶುರಾಮಪ್ಪ,  ರಾಜ್ಯ ಖಜಾಂಚಿ ರಹಮಲ್ ಉಲ್ಲಾ, ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ಯಾಖೂಬ್, ರಾಜ್ಯ ಸಂಚಾಲಕ ಅಂಜಿನಪ್ಪ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News