ವಿಶ್ವಕರ್ಮ ಜನಾಂಗದವರು ತಮ್ಮ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು: ಸಚಿವ ಎ. ಮಂಜು

Update: 2017-09-17 17:55 GMT

ಹಾಸನ, ಸೆ.17: ವಿಶ್ವಕರ್ಮ ಜನಾಂಗದವರು ತಮ್ಮ ಕಸುಬು ಜೊತೆಯಲ್ಲಿಯೇ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎ. ಮಂಜು ಕರೆ ನೀಡಿದರು. 

ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ವಿಶ್ವಕರ್ಮ ಜಯಂತ್ಯುತ್ಸವ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿ ದೇವರ ಭಾವಚಿತ್ರಕ್ಕೆ ಹೂವನ್ನು ಅರ್ಪಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವಕರ್ಮ ಸಮಾಜ ಎಂಬುದು ಸಮಾಜದಲ್ಲಿ ಒಂದಲ್ಲಾ ಒಂದು ರೀತಿ ಯಾವುದೂ ರೂಪದಲ್ಲಿ ಕೊಡುಗೆ ಇದ್ದೆ ಇರುತ್ತದೆ. ಹಾಸನ ಜಿಲ್ಲೆಯ ಬೇಲೂರು, ಹಳೇಬೀಡು, ಶ್ರವಣಬೆಳಗೊಳ ದೇವಾಲಯ ನಿರ್ಮಾಣಕ್ಕೆ 900 ವರ್ಷಗಳ ಹಿಂದೆಯೇ ಅಮರಶಿಲ್ಪಿ ಜಕಣಚಾರಿ ಕೆತ್ತನೆ ಕಾಣಬಹುದು. ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಶಕ್ತಿ ತುಂಬುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂತಹ ಜಯಂತಿಯನ್ನು ಜಾರಿಗೆ ತಂದಿದ್ದಾರೆ ಎಂದರು.

ಆಭರಣ, ಬಟ್ಟೆ, ಬಳೆ ಮೇಲಿನ ಕೆತ್ತನೆ ಎಲ್ಲಾ ವಿಶ್ವಕರ್ಮ ಸಮಾಜಕ್ಕೆ ಗೌರವ ಸಲ್ಲಬೇಕು. ಶಿಲ್ಪಗಳ ಕೆತ್ತನೆಯಲ್ಲಿ ಭಾರತವನ್ನು ಇಡೀ ವಿಶ್ವವನ್ನೆ ಗಮನಸೆಳೆದಿದೆ. ವಿಶ್ವಕರ್ಮ ಸೇವೆ ಅಪಾರವಾಗಿದೆ. ಸರಕಾರ ನೀಡುವ ಯೋಜನೆಯನ್ನು ಸದುಪಯೋಗ ಪಡೆದುಕೊಳ್ಳುವಂತೆ ಇದೇ ವೇಳೆ ಕರೆ ನೀಡಿದರು.

ನಗರಸಭೆ ಅಧ್ಯಕ್ಷ ಹೆಚ್.ಎಸ್. ಅನೀಲ್ ಕುಮಾರ್ ಮಾತನಾಡಿ, ಹಿಂದಿನ ದಿನಗಳನ್ನು ಅವಲೋಕನ ಮಾಡಿದಾಗ ಮುಖ್ಯವಾಗಿ ಐದು ಕಸುಬುಗಳು ಸಮಾಜಕ್ಕೆ ಕೊಡುಗೆ ಆಗಿ ನೀಡಿದೆ. ಜಗತ್ತಿನ ಅದ್ಭುತಗಳಲ್ಲಿ ತಾಜ್‍ಮಹಲ್ ಕೂಡ ಆಗಿದದು, ಅದು ಕೂಡ ಕೆತ್ತನೆಯಿಂದಲೇ ಬಂದಿದೆ. ಸಾಮಾನ್ಯ ಕಲ್ಲಿಗೆ ಒಂದು ರೂಪ ಕೊಟ್ಟು ಶಿಲೆಯನ್ನಾಗಿ ವಿಶ್ವಕರ್ಮ ಜನಾಂಗ ಮಾಡಿದೆ ಎಂದು ಹೇಳಿದರು.

ಅಪರ ಜಿಲ್ಲಾಧಿಕಾರಿ ಪೂರ್ಣಿಮಾ ಅವರು ಮಾತನಾಡಿ, ಕಲೆ ಎಂಬುದಕ್ಕೆ ಯಾವುದೇ ಧರ್ಮ ಮತ್ತು ಜಾತಿ ಇರುವುದಿಲ್ಲ. ಅದಕ್ಕೂ ಮೀರಿದ್ದು ಈ ಕಲೆ. ಶಿಲ್ಪಕಲೆಗಳ ಬೀಡು ಹಾಸನ ಜಿಲ್ಲೆಯಲ್ಲಿ ವಿಶ್ವಕರ್ಮ ಜನಾಂಗದ ಕೊಡುಗೆ ಅಪಾರವಾಗಿದೆ ಎಂದು ಬಣ್ಣಿಸಿದರು. ಗಂಗರು, ಹೊಯ್ಸಳರು ಸೇರಿದಂತೆ ಇತರ ರಾಜರುಗಳ ಕಲಾಪ್ರೋತ್ಸಹದಿಂದ ಇಂದು ಕಲೆ ನಮ್ಮ ಮುಂದೆ ನಿಂತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಝೀ ಕನ್ನಡದಲ್ಲಿ ಹಾಡಿದ ಗಾಯಕ ವಿಶ್ವಕರ್ಮ ಜನಾಂಗದ ಉದಯ್ ಹಾಡಿಗೆ ಕಲಾವಿದ ಕೃಷ್ಣಚಾರ್ ಅವರು ಸ್ಥಳದಲ್ಲೇ ಜನಾಂಗ ಕಸುಬಿನ ಚಿತ್ರ ಬಿಡಿಸುವುದರ ಮೂಲಕ ನೋಡುಗರ ಗಮನಸೆಳೆದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಶಿವಶಂಕರಪ್ಪ, ಬೆಂಗಳೂರಿನ ಶ್ರೀ ಭೌವನ ವಿಶ್ವಕರ್ಮ ವಿದ್ಯಾಪೀಠಂನ ವೇದ ಬ್ರಹ್ಮಶ್ರೀ ಮಹೇಶ್ ವಿಶ್ವಕರ್ಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹ ನಿರ್ದೇಶಕ ಯು. ಜಿತೇಂದ್ರನಾಥ್, ನಗರಸಭೆ ಸದಸ್ಯ ಪ್ರಸನ್ನ (ಆಪು), ವಿಶ್ವಕರ್ಮ ಸಮಾಜದ ಅಧ್ಯಕ್ಷ ಪಿ. ವಾಸುದೇವು, ಡಿ.ಆರ್. ತಿಮ್ಮಚಾರ್, ಹರೀಶ್, ಮಹಿಳಾ ಘಟಕದ ಅಧ್ಯಕ್ಷೆ ಅನೀಲಪದ್ಮನಾಬ್ ಇತರರು ಉಪಸ್ಥಿತರಿದ್ದರು. ಗಮಕ ಪರಿಷತ್‍ನ ಗಣೇಶ್ ಉಡುಪ ಮತ್ತು ಪದ್ಮಾವತಿ ರವಿಶಂಕರ್ ನಾಡಗೀತೆ ಮತ್ತು ರೈತ ಗೀತೆ ಹಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News