×
Ad

ಪೆರಿಯಾರ್ ವಿಚಾರಧಾರೆಗಳಿಂದು ಅತ್ಯಂತ ಪ್ರಸ್ತುತ: ಆರ್.ಶೇಖರ್

Update: 2017-09-17 23:42 IST

ಬೆಂಗಳೂರು, ಸೆ. 17: ವಿಚಾರವಾದಿಗಳ ಹತ್ಯೆಗೈಯುವ ಮೂಲಕ ದೇಶದಲ್ಲಿ ಅಸಹಿಷ್ಣುತೆ ಮನೋಭಾವ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ವೈಚಾರಿಕತೆ ಹೆಗ್ಗುರುತ್ತೆ ಆಗಿರುವ ವಿಚಾರವಾದಿ ಪೆರಿಯಾರ್ ಅವರನ್ನು ನೆನಪು ಮಾಡಿಕೊಳ್ಳುವುದು ಅತ್ಯಂತ ಪ್ರಸ್ತುತ ಎಂದು ಬಹುಜನ ಮಹಾ ಸಭಾ ಅಧ್ಯಕ್ಷ ಆರ್.ಶೇಖರ್ ಹೇಳಿದ್ದಾರೆ.

ರವಿವಾರ ಇಲ್ಲಿನ ತಿಲಕ್‌ ನಗರದಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಮಹಾಸಭಾದಿಂದ ಬಳಿ ಏರ್ಪಡಿಸಿದ್ದ ಪೆರಿಯಾರ್ ರಾಮಸ್ವಾಮಿ ಅವರ 138ನೆ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪೆರಿಯಾರ್ ಕರ್ನಾಟಕ ರಾಜ್ಯದ ಮೂಲದವರು ಎಂಬುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ ಎಂದರು.

ಆಧುನಿಕ ತಾಂತ್ರಿಕತೆ ದಿನ-ದಿನಕ್ಕೂ ಮುಂದುವರಿಯುತ್ತಿದೆ. ಆದರೆ, ಅಷ್ಟೇ ವೇಗವಾಗಿ ಮೌಢ್ಯ, ಕಂದಾಚಾರಗಳೂ ಮೀತಿ ಮೀರುತ್ತಿವೆ. ಧರ್ಮ-ದೇವರುಗಳ ಹೆಸರಿನಲ್ಲಿ ಮುಗ್ಧ ಜನರ ಶೋಷಣೆ ನಡೆಯುತ್ತಿದೆ. ಇಂತಹ ಸಂದಿಗ್ಧ ಸಂದರ್ಭದಲ್ಲಿ ಮೌಢ್ಯಗಳ ವಿರುದ್ಧ ಹೋರಾಟ ಮಾಡಿದ ಪೆರಿಯಾರ್ ವಿಚಾರಧಾರೆ ನಮಗೆ ಮಾರ್ಗದರ್ಶಕ ಎಂದರು.

ವೈಚಾರಿಕ ತತ್ವಗಳನ್ನು ನಂಬಿರುವ ವಿಚಾರವಾದಿಗಳು ಆತಂಕದಲ್ಲಿ ಬದುಕು ದೂಡುವ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಹಾಗೂ ಕೇಂದ್ರ ಸರಕಾರಗಳು ಇಂತಹ ಭೀತಿಯ ವಾತಾವರಣ ನಿರ್ಮೂಲನೆಗೆ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ವಿಚಾರವಾದಿಗಳ ಹತ್ಯೆಗೈದ ಹಂತಕರನ್ನು ತಕ್ಷಣವೇ ಬಂಧಿಸಬೇಕೆಂದು ಅವರು ಆಗ್ರಹಿಸಿದರು.

ಈ ವೇಳೆ ಕೆಕ್ ಕತ್ತರಿಸಿ ಎಲ್ಲರಿಗೂ ಹಂಚಲಾಯಿತು.

ಕಾರ್ಯಕ್ರಮದಲ್ಲಿ ಮುಖಂಡರಾದ ಸುಬ್ರಮಣಿ, ರಘು, ಮಣಿ, ನೀಲಕಂಠನ್, ಷಣ್ಮುಖಂ, ಗೋವಿಂದ ರಾಜ್ ಸೇರಿದಂತೆ ಇನ್ನಿತರ ಮುಖಂಡರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News