ಗುಜರಾತ್ ಹಿಂಸಾಚಾರ ಪ್ರಕರಣದ ತನಿಖೆ ನಡೆಸಿದ್ದ ವೈ ಸಿ ಮೋದಿ ಮುಂದಿನ ಎನ್ ಐ ಎ ಮುಖ್ಯಸ್ಥ

Update: 2017-09-18 10:51 GMT

ಹೊಸದಿಲ್ಲಿ,ಸೆ.18 : ಹಿರಿಯ ಐಪಿಎಸ್ ಅಧಿಕಾರಿ ಹಾಗೂ 2002ರ ಗುಜರಾತ್ ಹಿಂಸಾಚಾರ ಪ್ರಕರಣಗಳ ತನಿಖೆಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನೇಮಿತ ವಿಶೇಷ ತನಿಖಾ ತಂಡದ ಭಾಗವಾಗಿದ್ದ  ವೈ ಸಿ ಮೋದಿ ಅವರನ್ನು ರಾಷ್ಟ್ರೀಯ ತನಿಖಾ ದಳ (ಎನ್ ಐ ಎ)ದ ಮುಂದಿನ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಉಗ್ರವಾದ ಹಾಗೂ ಉಗ್ರವಾದಿಗಳಿಗೆ ಹಣ ಪೂರೈಕೆ ಸಂಬಂಧ ಪ್ರಕರಣಗಳ ತನಿಖೆಯ ಜವಾಬ್ದಾರಿಯನ್ನು ಎನ್‍ಐಎ ಹೊತ್ತಿದೆ.

ಕ್ಯಾಬಿನೆಟ್ ನೇಮಕಾತಿ ಸಮಿತಿಯು ಮೋದಿ ಅವರನ್ನು ಎನ್‍ಐಎ ಮಹಾನಿರ್ದೇಶಕರನ್ನಾಗಿ ನೇಮಕಗೊಳಿಸಲು ಒಪ್ಪಿದೆ ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ  ಆದೇಶ ತಿಳಿಸುತ್ತದೆ.

ಮೋದಿ ಅವರು ತಮ್ಮ  ನಿವೃತ್ತಿಯ ತನಕ, ಅಂದರೆ ಮೇ 31, 2021ರ ತನಕ ಎನ್ ಐ ಎ ಮಹಾನಿರ್ದೇಶಕರಾಗಿ ಮುಂದುವರಿಯಲಿದ್ದಾರೆ.

ಮೋದಿ ಅವರು ಎನ್ ಐ ಎ ಮುಖ್ಯಸ್ಥರಾಗಿ ಅಧಿಕಾರ ವಹಿಸಲು ಯಾವುದೇ ತಾಂತ್ರಿಕ ಸಮಸ್ಯೆಗಳು ಎದುರಾಗದಿರಲೆಂದೇ ಅವರನ್ನು ಎನ್ ಐ ಎ ಆಫೀಸರ್ ಆನ್ ಸ್ಪೆಶಲ್ ಡ್ಯೂಟಿ ಆಗಿ ಕ್ಯಾಬಿನೆಟ್ ನೇಮಕಾತಿ ಸಮಿತಿ ಹೆಸರಿಸಿದೆ.

1994ನೇ ಬ್ಯಾಚಿನ ಐಪಿಎಸ್ ಅಧಿಕಾರಿಯಾಗಿರುವ ವೈ ಸಿ ಮೋದಿ ಅವರು ಅಸ್ಸಾಂ -ಮೇಘಾಲಯ ಕೇಡರ್ ಅಧಿಕಾರಿಯಾಗಿದ್ದು ಪ್ರಸಕ್ತ ಸಿಬಿಐ ವಿಶೇಷ ನಿರ್ದೇಶಕರಾಗಿದ್ದಾರೆ. ಈಗಿನ ಎನ್ ಐ ಎ ಮುಖ್ಯಸ್ಥ ಶರದ್ ಕುಮಾರ್ ಅವರು ತಮ್ಮ ಸೇವಾವಧಿಯನ್ನು ಅಕ್ಟೋಬರ್ 30ರಂದು ಪೂರ್ತಿಗೊಳಿಸಿದ ನಂತರ  ಮೋದಿ ಅಧಿಕಾರ ವಹಿಸಲಿದ್ದಾರೆ.

ಜುಲೈ 2013ರಲ್ಲಿ ಎನ್ ಐ ಎ ಮಹಾನಿರ್ದೇಶಕರಾಗಿ ನೇಮಕಗೊಂಡಿದ್ದ ಕುಮಾರ್ ಅವರಿಗೆ ಈಗಾಗಲೇ ಎರಡು ವಿಸ್ತರಣೆಗಳನ್ನು ನೀಡಲಾಗಿದೆ.

ಪಠಾಣ ಕೋಟ್ ಉಗ್ರ ದಾಳಿ ಪ್ರಕರಣ, ಬುದ್ರ್ವಾನ್ ಸ್ಫೋಟ ಪ್ರಕರಣ  ಮುಂತಾದ ಪ್ರಮುಖ ಪ್ರಕರಣಗಳ ತನಿಖೆ ಪೂರ್ಣಗೊಳಿಸಲು ಸಹಾಯ ಮಾಡಲೆಂದೇ ಅವರಿಗೆ ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ಕಳೆದ ವರ್ಷ ಸೇವಾವಧಿ ವಿಸ್ತರಣೆ ಮಾಡಲಾಗಿತ್ತು.

ಇನ್ನೊಬ್ಬ ಹಿರಿಯ ಅಧಿಕಾರಿ ರಜನಿ ಕಾಂತ್ ಮಿಶ್ರಾ ಅವರನ್ನು ಸಶಸ್ತ್ರ ಸೀಮಾ ಬಲ್ ಮಹಾನಿರ್ದೇಶಕರನ್ನಾಗಿ ನೇಮಸಲಾಗಿದೆ. ಅವರು 1984ನೇ ಬ್ಯಾಚಿನ ಅಧಿಕಾರಿಯಾಗಿದ್ದು ಹಾಲಿ ಬಿ ಎಸ್ ಎಫ್  ಹೆಚ್ಚುವರಿ ಮಹಾ ನಿರ್ದೇಶಕರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News