‘ಕನ್ಯಾ ಸಂಸ್ಕಾರ’ ಬಯಲುಗೊಳಿಸಲು ಸಮಿತಿ ರಚನೆಗೆ ಆಗ್ರಹ
ಬೆಂಗಳೂರು, ಸೆ.18: ರಾಮಚಂದ್ರಾಪುರ ಮಠದಲ್ಲಿ ನಡೆಯುತ್ತಿರುವ ‘ಕನ್ಯಾ ಸಂಸ್ಕಾರ’ದ ಸತ್ಯಾಸತ್ಯತೆಗಳನ್ನು ಬಯಲು ಮಾಡುವ ಸಲುವಾಗಿ ರಾಜ್ಯ ಸರಕಾರ ಸಮಿತಿ ರಚಿಸಬೇಕು ಎಂದು ಆಗ್ರಹಿಸಿ ಸೆ.22 ರಂದು ಹಲವು ದಲಿತ ಸಂಘಟನೆಗಳಿಂದ ನಗರದ ಪುರಭವನದ ಎದುರು ಪ್ರತಿಭಟನೆ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಲಿತ ಮುಖಂಡ ಡಾ.ವಡ್ಡಗೆರೆ ನಾಗರಾಜಯ್ಯ, ಎಲ್ಲ ಧರ್ಮದ ಧಾರ್ಮಿಕ ಸಂಪ್ರದಾಯಗಳನ್ನು ಎಲ್ಲರೂ ಗೌರವಿಸುತ್ತಾರೆ. ಆದರೆ, ಧಾರ್ಮಿಕ ಸ್ವಾತಂತ್ರದ ಹೆಸರಿನಲ್ಲಿ ಅಂಧಭಕ್ತಿ ಹೇರಿಕೆ ಮಾಡಿ ಸ್ವಾತಂತ್ರವನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ. ಮಠದಲ್ಲಿ ಕನ್ಯಾ ಸಂಸ್ಕಾರ ನಡೆಸುತ್ತಿರುವುದು ಅಕ್ಷಮ್ಯ ಅಪರಾಧ ಎಂದು ಹೇಳಿದರು.
ರಾಘವೇಶ್ವರ ಭಾರತೀ ಸ್ವಾಮೀಜಿ ವಿರುದ್ಧ ಎರಡು ಅತ್ಯಾಚಾರ ಪ್ರಕರಣಗಳಿದ್ದು, ಹಲವು ಗುರುತರ ಆರೋಪಗಳಿವೆ. ಇಂತಹ ವ್ಯಕ್ತಿ ಏಕಾಂತದಲ್ಲಿ ಕನ್ಯಾ ಸಂಸ್ಕಾರ ನಡೆಸುತ್ತಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಅಲ್ಲದೆ, ಸ್ವಾಮೀಜಿ ವಿರುದ್ಧ ಮಾತನಾಡುವವರ ಮೇಲೆ ಸುಳ್ಳು ದೂರುಗಳನ್ನು ದಾಖಲಿಸಿ ಬಾಯಿ ಮುಚ್ಚಿಸುವ ಕೆಲಸ ಮಾಡುತ್ತಿದ್ದಾರೆ. ತಮ್ಮ ಹಣ ಹಾಗೂ ಜಾತಿ ಬಲದ ಮೂಲಕ ಸ್ವಾರ್ಥಕ್ಕಾಗಿ ವ್ಯವಸ್ಥಿತ ಕೋಟೆ ಕಟ್ಟಿಕೊಂಡಿದ್ದಾರೆ ಎಂದು ಆರೋಪಿಸಿದರು.
ಹೀಗಾಗಿ, ಕೂಡಲೇ ಕನ್ಯಾ ಸಂಸ್ಕಾರದ ನೈಜತೆಯನ್ನು ತಿಳಿದುಕೊಳ್ಳಲು ಸರಕಾರ ಸಮಿತಿ ರಚಿಸಿ, ಸೂಕ್ತ ತನಿಖೆ ನಡೆಸಬೇಕು. ಭಾರತಿ ಸ್ವಾಮೀಜಿಯಿಂದ ಅನ್ಯಾಯಕ್ಕೊಳಗಾದ ಯುವತಿಯರು ದೂರು ನೀಡಲು ತಯಾರಿದ್ದು, ಅವರಿಗೆ ಸೂಕ್ತ ರಕ್ಷಣೆ ನೀಡುವ ಮೂಲಕ ಗೌಪ್ಯ ವಿಚಾರಣೆ ನಡೆಸಬೇಕು.
ಕನ್ಯಾ ಸಂಸ್ಕಾರದ ವಿಷಯವಾಗಿ ಹೋರಾಟ ಮಾಡಿದವರಿಗೆ ಏನೇ ತೊಂದರೆಯಾದರೂ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ರಾಘವೇಶ್ವರ ಭಾರತಿ ಸ್ವಾಮೀಜಿ ನೇರ ಹೊಣೆ ಎಂದು ಪರಿಗಣಿಸಬೇಕು ಎಂದು ಅವರು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಬಹುಜನ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಆರ್.ಎಂ.ಎನ್.ರಮೇಶ್, ದಲಿತ ಸೇನಾ ಸಂಘದ ಜೆ.ಚಂದ್ರಪ್ಪ, ಪ್ರಜಾ ವಿಮೋಚನಾ ಚಳವಳಿ ಮುಖಂಡ ಮುನಿ ಆಂಜಿನಪ್ಪ ಸೇರಿದಂತೆ ಹಲವರಿದ್ದರು.