ಮಾತೃಪೂರ್ಣ ಯೋಜನೆ ಅಂಗನವಾಡಿಗಳ ಮೂಲಕ ಜಾರಿಗೆ ಖಂಡನೆ

Update: 2017-09-18 14:08 GMT

ಬೆಂಗಳೂರು, ಸೆ. 18: ರಾಜ್ಯ ಸರಕಾರದ ಮಹತ್ವದ ಯೋಜನೆ ‘ಮಾತೃಪೂರ್ಣ ಯೋಜನೆ’ಯನ್ನು ಅಂಗನವಾಡಿಗಳ ಮೂಲಕ ಜಾರಿ ಮಾಡಲು ಮುಂದಾಗಿರುವುದನ್ನು ಖಂಡಿಸಿ ಸೆ.22 ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮಹಾ ಮಂಡಳಿ ನಿರ್ಧರಿಸಿದೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಡಳಿ ಕಾರ್ಯದರ್ಶಿ ಬಿ.ನಾಗರತ್ನಮ್ಮ, ಗರ್ಭಿಣಿ ಹಾಗೂ ಬಾಣಂತಿಯರಿಗೆ ಮಧ್ನಾಹ್ನ ಪೌಷ್ಠಿಕ ಬಿಸಿಯೂಟ ನೀಡುವ ಸಲುವಾಗಿ ಮಾತೃಪೂರ್ಣ ಯೋಜನೆಯನ್ನು ಅನುಷ್ಠಾನ ಮಾಡಲು ಮುಂದಾಗಿದೆ. ಆದರೆ, ಇದನ್ನು ಜಾರಿ ಮಾಡುವ ಮೊದಲು ಯಾವುದೇ ಸಮಗ್ರವಾದ ಅಧ್ಯಯನ ನಡೆಸದೆ, ತರಾತುರಿಯಲ್ಲಿ ಏಕಾಏಕಿ ಜಾರಿ ಮಾಡಲು ಮುಂದಾಗಿದ್ದಾರೆ ಎಂದು ದೂರಿದರು.

ಸರಕಾರ ಮಾತೃಪೂರ್ಣ ಯೋಜನೆ ಕುರಿತು ಆಲೋಚನೆ ಮಾಡಿದಾಗಲೇ ಅಂಗನವಾಡಿ ಕೇಂದ್ರಗಳ ಸ್ಥಿತಿಗತಿಗಳ ಕುರಿತು ವೈಜ್ಞಾನಿಕ ಅಧ್ಯಯನ ನಡೆಸಬೇಕಿತ್ತು. ಅಲ್ಲದೆ, ಇದರ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯರು, ಗರ್ಭಿಣಿ ಹಾಗೂ ಬಾಣಂತಿ ಫಲಾನುಭವಿಗಳು, ಸಲಹಾ ಸಮಿತಿ ಸದಸ್ಯರುಗಳನ್ನು ಒಳಗೊಂಡಂತೆ ಸಮರ್ಪಕವಾದ ಚರ್ಚೆ ನಡೆಸಬೇಕಿತ್ತು. ಆದರೆ, ಇದ್ಯಾವುದನ್ನು ಮಾಡದೇ ಅ.2 ರಂದು ರಾಜ್ಯಾದ್ಯಂತ ಏಕ ಕಾಲಕ್ಕೆ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಮುಂದಾಗಿದ್ದಾರೆ ಎಂದು ಕಿಡಿಕಾರಿದರು.

ರಾಜ್ಯದಲ್ಲಿರುವ 61 ಸಾವಿರಕ್ಕೂ ಅಧಿಕ ಅಂಗನವಾಡಿಗಳಲ್ಲಿ 34 ಸಾವಿರಕ್ಕೂ ಅಧಿಕ ಸ್ವಂತ ಕಟ್ಟಡಗಳಿಲ್ಲದೆ, 26 ಸಾವಿರಕ್ಕೂ ಅಧಿಕ ಅಂಗನವಾಡಿಗಳು ಸಮರ್ಪಕವಾದ ಸೌಲಭ್ಯಗಳಿಲ್ಲದೆ ನರಳುತ್ತಿವೆ. ಅಲ್ಲದೆ, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ, ಸೂಕ್ತವಾದ ಸ್ಥಳವಿಲ್ಲ. ಹೀಗಿರುವಾಗ ಗರ್ಭಿಣಿ ಅಥವಾ ಬಾಣಂತಿಯರಿಗೆ ಅಂಗನವಾಡಿಗಳಲ್ಲಿ ಹೇಗೆ ಊಟ ನೀಡಲು ಸಾಧ್ಯವಾಗುತ್ತದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಬಾಣಂತಿಯರಿಗೆ ಹಾಗೂ ಗರ್ಭಿಣಿಯರಿಗೆ ಬೇಕಾಗುವ ಪೌಷ್ಠಿಕ ಆಹಾರವನ್ನು ಅವರುಗಳ ಮನೆಗೆ ನೀಡಲಾಗುತ್ತಿತ್ತು. ಈಗ ಅದನ್ನು ಬದಲಿಸಿ ಅಂಗನವಾಡಿ ಕೇಂದ್ರಗಳಲ್ಲಿ ಊಟ ನೀಡಲು ಸರಕಾರ ತೀರ್ಮಾನಿಸಿದೆ. ಆದರೆ, ಗ್ರಾಮೀಣ ಹಾಗೂ ಗುಡ್ಡಗಾಡು ಪ್ರದೇಶದಲ್ಲಿ 1-2 ಕಿ.ಮೀ. ಅಂಗನವಾಡಿ ಕೇಂದ್ರಗಳಿಗೆ ಬಂದು ದಿನನಿತ್ಯ ಊಟ ಮಾಡಿ ಮನೆಗೆ ಹೋಗಲು ಸಾಧ್ಯವಾ ಎಂದು ಪ್ರಶ್ನಿಸಿದ ಅವರು, ಕೂಡಲೇ ಸರಕಾರ ಈ ಯೋಜನೆಯನ್ನು ಕೈ ಬಿಡಬೇಕು ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News