×
Ad

ಪ್ರೊ.ಕಾಂಚ ಐಲಯ್ಯ ಬಂಧನಕ್ಕೆ ಆರ್ಯವೈಶ್ಯರ ಆಗ್ರಹ

Update: 2017-09-18 19:52 IST

ಬೆಂಗಳೂರು, ಸೆ.18: ಆರ್ಯವೈಶ್ಯ ಜನಾಂಗದ ಕುರಿತು ಅವಹೇಳನಕಾರಿಯಾಗಿ ಬರೆದಿರುವ ತೆಲುಗಿನ ಲೇಖಕ ಪ್ರೊ.ಕಾಂಚ ಐಲಯ್ಯ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಆರ್ಯ ವೈಶ್ಯ ಮಂಡಳಿಗಳ ಒಕ್ಕೂಟ ಪುರಭವನದ ಬಳಿ ಧರಣಿ ಸತ್ಯಾಗ್ರಹ ನಡೆಸಿದರು.

 ಪ್ರತಿಭಟನೆಯ ನೇತೃತ್ವ ವಹಿಸಿದ್ದ ಬೆಂಗಳೂರು ಆರ್ಯ ವೈಶ್ಯ ಮಂಡಳಿಗಳ ಒಕ್ಕೂಟದ ಅಧ್ಯಕ್ಷ ಕೆ. ವೆಂಕಟೇಶಬಾಬು ಮಾತನಾಡಿ ಪ್ರೊ.ಕಾಂಚ ಐಲಯ್ಯ ಅವರು ರಚಿಸಿರುವ ಕೃತಿಯಲ್ಲಿ ಪುಸ್ತಕದ ತುಂಬಾ ಬ್ರಾಹ್ಮಣರ ಹಾಗೂ ಆರ್ಯವೈಶ್ಯರ ಕುರಿತು ಅವಹೇಳನಕಾರಿಯಾಗಿ ಬರೆದಿದ್ದಾರೆ. ಪ್ರಾಮಾಣಿಕವಾಗಿ ತೆರಿಗೆ ಕೊಡುವ ಜನಾಂಗವೆಂದು ಹೆಸರುವಾಸಿಯಾಗಿರುವ ಆರ್ಯವೈಶ್ಯರನ್ನು ತೆರಿಗೆ ವಂಚಕರೆಂದು ಜರಿದಿದ್ದಾರೆ ಎಂದು ಕಿಡಿಕಾರಿದರು.

ಆರ್ಯವೈಶೈರನ್ನು ಸುಳ್ಳುಬುರುಕರು, ಮೋಸಗಾರರು, ಕಳ್ಳವ್ಯಾಪಾರಿಗಳು ಎಂದು ಅವಹೇಳನ ಮಾಡಿದ್ದಾರೆ. ಆರ್ಯವೈಶ್ಯರು ಮಾಡುವ ಪೂಜೆ ,ಯಜ್ಞ ಯಾಗಾದಿಗಳ ಬಗ್ಗೆ ಲಘುವಾಗಿ ಬರೆದಿರುವುದಲ್ಲದೆ, ಗುಜರಾತ್ ಭೂಕಂಪವಾಗಲು ಆರ್ಯವೈಶ್ಯರ ವ್ಯಾಪಾರ ನೀತಿ ಕಾರಣ ಎಂದು ಬರೆದಿದ್ದಾರೆ ಹೇಳಿದರು.

ಆರ್ಯವೈಶ್ಯರನ್ನು ಅವಹೇಳನ ಮಾಡುವ ಮೂಲಕ ಧಾರ್ಮಿಕ ನಿಂದನೆ, ಜಾತಿ ನಿಂದನೆ ಮಾಡುವುದರ ಮೂಲಕ ಸಮಾಜದಲ್ಲಿ ಶಾಂತಿ ಕದಡಿದ್ದಾರೆ. ನಮ್ಮ ಜನಾಂಗಕ್ಕೆ ಅವಮಾನ ಮಾಡಿದ್ದಾರೆ. ಕೂಡಲೆ ಇವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಅವರು, ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಧರಣಿಯಲ್ಲಿ ವಿಧಾನಪರಿಷತ್ತಿನ ಸದಸ್ಯ ಟಿ.ಎ.ಶರವಣ ಮಾತನಾಡಿ, ಕಾಂಚ ಐಲಯ್ಯ ಅವರು ರಚಿಸಿರುವ ಕೃತಿಯಿಂದ ಆರ್ಯವೈಶ್ಯರಿಗೆ ಅವಮಾನವಾಗಿದೆ. ಇದರಿಂದ ಸಮುದಾಯಕ್ಕೆ ನೋವಾಗಿದೆ. ಕಾಂಚ ಐಲಯ್ಯ ಅವರ ವಿರುದ್ಧ ಕೂಡಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News