ಜೀವಿಕ ದಿನಾಚರಣೆ ಅಂಗವಾಗಿ ವಿಚಾರ ಸಂರ್ಕೀಣ ಕಾರ್ಯಕ್ರಮ
ಬಾಗೇಪಲ್ಲಿ,ಸೆ.18: ನಮ್ಮನ್ನಾಳುವ ಸರ್ಕಾರಗಳು ತೆಗೆದುಕೊಳ್ಳುವ ಆರ್ಥಿಕ ವಿಧಿ ವಿಧಾನಗಳಿಂದಲ್ಲೇ ಅನಿಷ್ಠ ಪದ್ದತಿಗಳು ಜೀವಂತವಾಗಿರುಲು ಕಾರಣ ಎಂದು ವಿಚಾರ ಚಿಂತಕ ಹಾಗೂ ವೈದ್ಯ ಡಾ.ಅನಿಲ್ ಕುಮಾರ್ ಕೇಂದ್ರ ಮತ್ತು ರಾಜ್ಯ ಸಕಾರಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ತಾಲ್ಲೂಕು ಜೀವಿಕವತಿಯಿಂದ 30ನೇ ಜೀವಿಕ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ತಾಲ್ಲೂಕು ಮಟ್ಟದ ವಿಚಾರ ಸಂಕೀರ್ಣ ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳು ಉರಳಿದರೂ ಸಹ ರಾಜಕಾರಣಿಗಳ ಹಾಗೂ ನಮ್ಮನ್ನಾಳುವ ಸರ್ಕಾರಗಳ ಇಚ್ಚಾಶಕ್ತಿ ಕೊರತೆಯಿಂದ ಇಂದಿಗೂ ಬಾಲ್ಯ ವಿವಾಹ,ಜಾತಿ ಪದ್ದತಿ ಹಾಗೂ ಜೀತ ಪದ್ದತಿಗಳಂತಹ ಅನಿಷ್ಠ ಪದ್ದತಿಗಳು ಜೀವಂತವಾಗಿವೆ, ಈ ನಿಟ್ಟಿನಲ್ಲಿ ದೇಶದ ಕೆಲವೇ ಮಂದಿಗೆ ಮಾತ್ರ ಸ್ವಾತಂತ್ರ ಬಂದಿದೆ ಆದರೆ ದೇಶದ ಬಹುತೇಕರಿಗೆ ಸ್ವಾತಂತ್ರ್ಯ ಇನ್ನೂ ಸಿಕ್ಕಿಲ್ಲ, ನಮ್ಮನ್ನಾಳುವ ಸರ್ಕಾರಗಳು ಉದ್ಯೋಗಗಳನ್ನು ಸೃಷ್ಠಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿರುವುದರಿಂದ ದೇಶದ ಬಹುತೇಕ ವಿದ್ಯಾವಂತ ನಿರುದ್ಯೋಗಿ ಯುವಕ ಯುವತಿಯರು ಅಡ್ಡ ದಾರಿಯಲ್ಲಿ ಸಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಬಡ ಮತ್ತು ಸಾಮಾನ್ಯ ಜನರು ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೌಲಭ್ಯಗಳು ಸಿಗುತ್ತಿಲ್ಲ, ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಉತ್ತಮ ಶಿಕ್ಷಣ ಮರೀಚಿಕೆಯಾಗಿದೆ ಇದರಿಂದ ಬಡವರು ಪರದಾಡುವಂತಾಗಿದೆ, ರಾಜಕಾರಣಿಗಳ ಸ್ವಾರ್ಥಕ್ಕಾಗಿ ಖಾಸಗಿ ಆಸ್ಪತ್ರೆ ಮತ್ತು ಖಾಸಗಿ ಶಾಲಾ ಕಾಲೇಜುಗಳನ್ನು ನಡೆಸಲು ಪರವಾಗಿ ನೀಡಿರುವುದರಿಂದ ವೈದ್ಯಕೀಯ ಹಾಗೂ ಶಿಕ್ಷಣ ದುಭಾರಿಯಾಗಿದೆ ಎಂದ ಅವರು ಶಾಲೆಗಳನ್ನು ಬಿಟ್ಟವರನ್ನು ಮತ್ತೇ ಶಾಲೆಗೆ ಸೇರಿಸಿ ಶಿಕ್ಷಣ ನೀಡುವಂತಹ ಕೆಲಸಕ್ಕೆ ಪ್ರತಿಯೊಬ್ಬರೂ ಮುಂದಾಗಬೇಕಾದ ಅಗತ್ಯವಿದೆ ಅಲ್ಲದೆ ಸಮಾಜದಲ್ಲಿ ಇನ್ನೂ ಜೀವಂತವಾಗಿರುವಂತಹ ಜೀತ ಪದ್ದತಿ, ಬಾಲ್ಯ ವಿವಾಹ ಮತ್ತು ಜಾತಿ ಪದ್ದತಿಗಳಂತಹ ಅನಿಷ್ಠ ಪದ್ದತಿಗಳನ್ನು ತೊಲಗಿಸಲು ಪ್ರತಿಯೊಬ್ಬರೂ ಕೈಜೋಡಿಸುವಂತೆ ಕರೆ ನೀಡಿದರು.
ಹಿರಿಯ ವಕೀಲರಾದ ಎ.ಜಿ.ಸುಧಾಕರ್ ಮಾತನಾಡಿ, ನಮ್ಮ ದೇಶದ ಸಂವಿಧಾನದಲ್ಲಿ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲು ಬಡವ ಶ್ರೀಮಂತ ಎಂಬ ಬೇದಭಾವವಿಲ್ಲದೆ ಇಬ್ಬರಿಗೂ ಸಮಾನವಾಗಿ ಮತವನ್ನು ಚಾಲಾಯಿಸುವ ಹಕ್ಕು ನೀಡಿದೆ ಆದರೆ ನಮ್ಮ ಅಭಿವೃದ್ದಿಗಾಗಿ ಆಯ್ಕೆಯಾಗಿರುವ ಶಾಸಕರು, ಸಂಸದರು ಸೇರಿದಂತೆ ಜನಪ್ರತಿನಿಧಿಗಳು ವರ್ಷದಿಂದ ವರ್ಷಕ್ಕೆ ತಮ್ಮ ಆಧಾಯವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ, ಮನೆ, ಜಮೀನು ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಪಡೆದುಕೊಳ್ಳುವ ಮೂಲಕ ಶ್ರೀಮಂತರಾಗುತ್ತಿದ್ದಾರೆ, ಮತದಾನವನ್ನು ಮಾಡುವ ಮತದಾರರು ಮಾತ್ರ ಯಾವುದೇ ರೀತಿಯ ಸೌಲತ್ತುಗಳನ್ನು ಪಡೆಯಲು ಸಾಧ್ಯವಾಗದೆ ದಿನದಿಂದ ದಿನಕ್ಕೆ ಬಡತನ ರೇಖೆಗಿಂತಲ್ಲೂ ಕೆಳಕ್ಕೆ ಹೋಗುತ್ತಿದ್ದಾರೆ. ಇಲ್ಲಿ ಎಲ್ಲಿದೆ ಸಮಾನತೆ ಎಂದು ಪ್ರಶ್ನಿಸಿದ ಅವರು ಒಬ್ಬ ಶಾಸಕರಿಗೆ ತಿಂಗಳಿಗೆ 5 ಲಕ್ಷ ವೇತನ, ನಂತರದ ದಿನಗಳಲ್ಲಿ ಸುಮಾರು 50 ಸಾವಿರ ರೂ.ಗಳ ಪಿಂಚಣಿಯನ್ನು ಪಡೆಯುತ್ತಾರೆ, ಈ ಜನಪ್ರತಿನಿಧಿಗಳು ಏನು ಸಾಧನೆ ಮಾಡಿದ್ದಾರೆಂದು ಇಷ್ಟು ಸಂಬಳ ಹಾಗೂ ಪಿಂಚಣಿ ನೀಡುತ್ತಿದ್ದಾರೆ ಎಂದ ಅವರು ಜೀತ ವಿಮುಕ್ತರಿಗೆ ಕೇವಲ 20 ಸಾವಿರ ರೂ.ಗಳ ಪರಿಹಾರ ನೀಡಿದರೆ ಸಾಲದು ಅವರಿಗೆ ಪುನರ್ರ್‍ಜೀವನ ಕಲ್ಪಿಸಬೇಕಾದ ಜವಾಬ್ದಾರಿ ಸರ್ಕಾರದ ಮೇಲಿದೆ ಎಂದ ಅವರು ಹಣಕ್ಕಾಗಿ ಮತವನ್ನು ಮಾರಿಕೊಳ್ಳದೆ ಮತವನ್ನು ಚಲಾಯಿಸಿದಾಗ ಮಾತ್ರ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗುವುದಲ್ಲದೆ ಅನಿಷ್ಠ ಪದ್ದತಿಗಳನ್ನು ಸಹ ಸಮಾಜದಿಂದ ತೊಲಗಿಸಲು ಸಾಧ್ಯವಾಗುತ್ತ ಎಂದರು.
ಪ್ರಗತಿಪರ ಚಿಂತಕ ವಿಚಾರವಾದಿ ಡಾ.ಚಿನ್ನಕೈವಾರಮಯ್ಯ, ಜೀವಿಕ ಜಿಲ್ಲಾ ಸಂಚಾಲಕ ನಾರಾಯಣಸ್ವಾಮಿ, ಜೀವಿಕ ತಾಲ್ಲೂಕು ಸಂಚಾಲಕ ಬಿ.ನಾರಾಯಣಸ್ವಾಮಿ, ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಟಿ.ಲಕ್ಷ್ಮೀನಾರಾಯಣರೆಡ್ಡಿ, ಜೀವಿಕ ಒಕ್ಕೂಟಗಳ ರಾಜ್ಯಾಧ್ಯಕ್ಷ ಹೆಚ್.ಸಿ.ಚೌಡಪ್ಪ, ಪ್ರಾಂಶುಪಾಲರಾದ ಡಾ.ನಯಾಜ್ ಅಹಮ್ಮದ್, ಹೋಬಳಿ ಸಂಚಾಲಕ ಆಧಿನಾರಾಯಣ ನಾರಾಯಣಸ್ವಾಮಿ,ಅಂಜಿನಪ್ಪ, ಮತ್ತಿತರರು ಉಪಸ್ಥಿತರಿದ್ದರು.