ಶ್ರೀರಂಗಪಟ್ಟಣ ದಸರಾ ಮಹೋತ್ಸವ ಲಾಂಛನ ಬಿಡುಗಡೆ
ಮಂಡ್ಯ, ಸೆ.18: ಸೆ. 24 ರಿಂದ 26ರವರೆಗೆ ನಡೆಯಲಿರುವ ಜಿಲ್ಲೆಯ ಐತಿಹಾಸಿಕ ಶ್ರೀರಂಗಪಟ್ಟಣ ದಸರಾ ಮಹೋತ್ಸವದ ಲಾಂಛನವನ್ನು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಎನ್.ಮಂಜುಶ್ರೀ, ಸೆ.24 ರಂದು ಜಂಬುಸವಾರಿ ಮೂಲಕ ದಸರಾ ಮಹೋತ್ಸವ ಕಾರ್ಯಕ್ರಮವನ್ನು ಹಿರಿಯ ಸಾಹಿತಿ ಡಾ.ಕೆ.ಮರಳುಸಿದ್ದಪ್ಪ ಉದ್ಘಾಟಿಸಲಿದ್ದಾರೆ. ಸೆ.26 ರಂದು ನಡೆಯುವ ಸಮರೋಪ ಸಮಾರಂಭಕ್ಕೆ ಖ್ಯಾತ ಸಾಹಿತಿ ಪ್ರೊ.ದೊಡ್ಡರಂಗೇಗೌಡ ಅವರನ್ನು ಆಹ್ವಾನಿಸಲಾಗಿದೆ ಎಂದರು.
ದಸರಾ ಮಹೋತ್ಸವದ ಅಂಗವಾಗಿ ಮೂರು ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಮಕ್ಕಳ ದಸರಾ, ಕ್ರೀಡಾ ದಸರಾ, ಮಹಿಳಾ ದಸರಾ ಹಾಗು ಸಿರಿಧಾನ್ಯ ಮೇಳ ಗಮನ ಸೆಳೆಯಲಿವೆ ಎಂದು ಅವರು ಹೇಳಿದರು.
ಸಾಂಪ್ರದಾಯಿಕ ದಸರಾ ಮಹೋತ್ಸವಕ್ಕೆ ಜಿಲ್ಲಾಡಳಿತ ಎಲ್ಲಾ ಸಿದ್ದತೆಗಳನ್ನು ಕೈಗೊಂಡಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲಾವಿದರೆ ಆದ್ಯತೆ ನೀಡಲಾಗುವುದು. ಸಾರ್ವಜನಿಕರು ಮಹೋತ್ಸವದಲ್ಲಿ ಪಾಲ್ಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಸ್ಥಳೀಯ ಶಾಸಕ ರಮೇಶ್‍ಬಾಬು ಬಂಡಿಸಿದ್ದೇಗೌಡ ಮಾತನಾಡಿ, ಶ್ರೀರಂಗಪಟ್ಟಣ ದಸರಾ ಮಹೋತ್ಸವಕ್ಕೆ ರಾಜ್ಯ ಸರಕಾರ 50 ಲಕ್ಷ ರೂ. ಅನುದಾನ ನೀಡುವ ನಿರೀಕ್ಷೆಯಿದ್ದು, ಮತ್ತಷ್ಟು ಅನುದಾನಕ್ಕೆ ಪ್ರಯತ್ನ ನಡೆಸಲಾಗುವುದು ಎಂದರು.
ಅಪರ ಜಿಲ್ಲಾಧಿಕಾರಿ ವಿಜಯ್, ಪಾಂಡವಪುರ ಉಪವಿಭಾಗಧಿಕಾರಿ ಯಶೋಧಾ, ಜಿಲ್ಲಾ ವಾರ್ತಾಧಿಕಾರಿ ಮಹೇಶ್ ಹಾಗು ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.