ಇಂಟರ್‌ನೆಟ್ ಸಂಪರ್ಕ ಸಮಸ್ಯೆಯ ಶೀಘ್ರ ಪರಿಹಾರಕ್ಕೆ ಆಗ್ರಹಿಸಿ ಅಧಿಕಾರಿಗಳಿಗೆ ಮನವಿ
ಶಿಕಾರಿಪುರ,ಸೆ.18: ಖಾಸಗಿ ಮೊಬೈಲ್ ಕಂಪನಿಗಳ ಜತೆಗಿನ ಗುಪ್ತ ಒಪ್ಪಂದದಿಂದಾಗಿ ಕಳೆದ ಹಲವು ದಿನಗಳಿಂದ ಇಂಟರ್‌ನೆಟ್ ಸೌಲಭ್ಯ ತಾಲೂಕಿನಾದ್ಯಂತ ಕಡಿತವಾಗಿದ್ದು ಕೇಂದ್ರ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಸಂಪರ್ಕವನ್ನು ಅವಲಂಭಿಸಿರುವ ನೂರಾರು ಉದ್ಯೋಗಿಗಳು ವಾರದಿಂದ ಅನುಭವಿಸುತ್ತಿರುವ ನಷ್ಟಕ್ಕೆ ಬಿಎಸ್‌ಎನ್‌ಎಲ್ ಹೊಣೆ ಹೋರಬೇಕಾಗಿದೆ ಎಂದು ಇಲ್ಲಿನ ವಿವಿಧ ಸೈಬರ್ ಸೆಂಟರ್,ಕಂಪ್ಯೂಟರ್ ಶಿಕ್ಷಣ ಸಂಸ್ಥೆ,ವ್ಯಾಪಾರಸ್ಥರು,ಸಾರ್ವಜನಿಕರು ಆರೋಪಿಸಿ ಸೋಮವಾರ ಬಿಎಸ್‌ಎನ್‌ಎಲ್ ವಿಭಾಗೀಯ ಅಭಿಯಂತರರಿಗೆ ಮನವಿ ಸಲ್ಲಿಸಿದರು.
ತಾಲೂಕಿನಾದ್ಯಂತ ಕಳೆದ ವಾರದಿಂದ ಇಂಟರ್‌ನೆಟ್ ಸಂಪರ್ಕ ಕಡಿತವಾಗಿದ್ದು,ನಿಗಮದ ಸೇವೆಯನ್ನು ನಂಬಿರುವ ನೂರಾರು ಯುವಕರು ತೀವ್ರ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ.ಇಂದು ನಾಳೆ ವ್ಯವಸ್ಥೆ ಸುಧಾರಿಸುವ ನಿರೀಕ್ಷೆಯಲ್ಲಿ ವಾರಪೂರ್ತಿಯ ನಷ್ಟಕ್ಕೆ ನಿಗಮ ಮಾಸಿಕ ಬಾಡಿಗೆಯಲ್ಲಿ ರಿಯಾಯತಿಯನ್ನು ನೀಡುವಂತೆ ಆಗ್ರಹಿಸಿದ ಪ್ರತಿಭಟನಾಕಾರರು ಕೇಂದ್ರ ಸರ್ಕಾರಿ ಸ್ವಾಮ್ಯದ ನಿಗಮದ ಬಗೆಗಿನ ನಂಬಿಕೆ ಇತ್ತೀಚಿನ ದಿನದಲ್ಲಿ ಹುಸಿಯಾಗತೊಡಗಿದೆ ಸೇವೆ ಎಂಬುದು ಮರೀಚಿಕೆಯಾಗಿದ್ದು ದೂರವಾಣಿ ಕ್ಷೇತ್ರದಲ್ಲಿನ ಬಿರುಸಿನ ಸ್ಪರ್ದೆಯಲ್ಲಿ ನಿಗಮದ ಅಧಿಕಾರಿಗಳ ನಿರ್ಲಕ್ಷ ವ್ಯವಸ್ಥಿತವಾಗಿ ನಿಗಮವನ್ನು ಮುಚ್ಚುವ ಹುನ್ನಾರವಾಗಿದೆ ಎಂದು ಆರೋಪಿಸಿದರು.
ಉದ್ದೇಶಪೂರ್ವಕವಾಗಿ ಸೇವೆಯಲ್ಲಿ ವ್ಯತ್ಯಯ ಉಂಟುಮಾಡಿ ಖಾಸಗಿ ಕಂಪನಿಗಳ ಜತೆ ಗುಪ್ತ ಒಪ್ಪಂದದಿಂದ ಗ್ರಾಹಕರು ಕ್ರಮೇಣ ಖಾಸಗಿ ಕಂಪನಿಗಳ ಸಂಪರ್ಕವನ್ನು ಪಡೆದು ಖಾಸಗಿ ಕಂಪನಿ ಮಾಲಿಕರ ಜೇಬು ತುಂಬಿಸುವ ಹುನ್ನಾರ ಅಡಗಿದೆ ಎಂದು ದೂರಿ ಎಂಜಲು ಕಾಸಿಗಾಗಿ ನಿಗಮದ ಸಂಪರ್ಕವನ್ನು ಅವಲಂಭಿಸಿರುವ ಶಿಕ್ಷಣ ಸಂಸ್ಥೆ,ಸೈಬರ್ ಸೆಂಟರ್,ಖಾಸಗಿ ವ್ಯಾಪಾರಸ್ಥರು,ಸಾರ್ವಜನಿಕರಿಗೆ ಅನ್ಯಾಯ ಎಸಗದಂತೆ ಮನವಿ ಮಾಡಿದರು.
ಇಂಟರ್‌ನೆಟ್ ಸೇವೆಯನ್ನು ಈ ಕೂಡಲೇ ಸರಿಪಡಿಸಿ ತಪ್ಪಿದಲ್ಲಿ ಬಹಿರಂಗವಾಗಿ ಖಾಸಗಿ ಸಂಪರ್ಕವನ್ನು ಪಡೆದುಕೊಳ್ಳಲು ತಿಳಿಸಿ ಎಂದು ಆಗ್ರಹಿಸಿ ಮಾಸಿಕ ಲಕ್ಷಾಂತರ ವೇತನ ಪಡೆಯುವ ಅಧಿಕಾರಿಗಳಿಗೆ ಲಕ್ಷಾಂತರ ಬಂಡವಾಳವನ್ನು ವಿನಿಯೋಗಿಸಿರುವ ವರ್ತಕರ ಕಷ್ಟದ ಬಗ್ಗೆ ಅರಿವು ಅತ್ಯಗತ್ಯವಾಗಿದೆ ಎಂದು ತಿಳಿಸಿದರು.
ನಂತರದಲ್ಲಿ ಸ್ಥಳೀಯ ವಿಬಾಗೀಯ ಅಭಿಯಂತರರಿಗೆ ಮನವಿ ಸಲ್ಲಿಸಲಾಯಿತು.ಈ ಸಂದರ್ಬದಲ್ಲಿ ಪ್ರಮುಖರಾದ ಮಂಜುನಾಥ ಮಠದ್,ಪ್ರದೀಪ ದೀಕ್ಷಿತ್,ಕುಮಾರಸ್ವಾಮಿ,ಧನಂಜಯಾಚಾರ್,ಮಾಲತೇಶ, ಕೆ.ಬಿ ಪ್ರಕಾಶ್,ವಿನಯ್‌ಶಾಸ್ತ್ರಿ,ಹಾಲಸ್ವಾಮಿ,ಗಫೂರ್ ಮತ್ತಿತರರು ಹಾಜರಿದ್ದರು.
ಇಂಟರ್ ನೆಟ್ ಸಮಸ್ಯೆ ಬಗ್ಗೆ ತಹಸೀಲ್ದಾರ್ ಶಿವಕುಮಾರ್ ಪ್ರತಿಕ್ರಿಯಿಸಿ,ಇಂಟರ್‌ನೆಟ್ ಸಂಪರ್ಕ ಕೊರತೆಯಿಂದಾಗಿ ತಾಲೂಕು ಕಚೇರಿಯಲ್ಲಿ ರೈತ ಸಮುದಾಯ ಪಹಣಿ ದೊರೆಯದೆ ಕಂಗಾಲಾಗಿದ್ದು ಪ್ರತಿ ಹೋಬಳಿ ವ್ಯಾಪ್ತಿಯಲ್ಲಿನ ನಾಡಕಚೇರಿ,ಗ್ರಾ.ಪಂ ಕೇಂದ್ರದಲ್ಲಿ ಅಂತರ್ಜಾಲದ ತೊಂದರೆಯಿಂದಾಗಿ ರೈತರ ತೀವ್ರ ಪ್ರತಿರೋಧವನ್ನು ಅಧಿಕಾರಿಗಳು ಎದುರಿಸುವಂತಾಗಿದೆ.ಈ ಬಗ್ಗೆ ನಿಗಮದ ಹಿರಿಯ ಅಧಿಕಾರಿಗಳ ಗಮನ ಸೆಳೆದರೂ ಪ್ರಯೋಜನವಿಲ್ಲವಾಗಿದೆ ಎಂದು ದೂರಿದರು.