ಎಸಿಬಿ ನಿಯಮ ಪಾಲಿಸದೆ ಬಿಎಸ್‌ವೈ ವಿರುದ್ಧ ಎಫ್‌ಐಆರ್ ದಾಖಲಿಸಿದೆ: ಹಿರಿಯ ವಕೀಲ ಸಿ.ವಿ.ನಾಗೇಶ್ ಹೈಕೋರ್ಟ್‌ಗೆ ಹೇಳಿಕೆ
ಬೆಂಗಳೂರು, ಸೆ.18: ಶಿವರಾಮ ಕಾರಂತ ಬಡಾವಣೆ ಡಿನೋಟಿಫಿಕೇಶನ್ ಪ್ರಕರಣದ ಸಂಬಂಧ ಬಿ.ಎಸ್.ಯಡಿಯೂರಪ್ಪ ವಿರುದ್ಧ ಎಫ್ಐಆರ್ ದಾಖಲಿಸುವ ಮೊದಲು ಭ್ರಷ್ಟಾಚಾರ ನಿಗ್ರಹದಳ (ಎಸಿಬಿ) ನಿಯಮಗಳನ್ನು ಪಾಲಿಸಿಲ್ಲ ಎಂದು ಬಿ.ಎಸ್.ಯಡಿಯೂರಪ್ಪ ಪರ ವಕೀಲರು ಹೈಕೋರ್ಟ್‌ಗೆ ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಎಸಿಬಿ ದಾಖಲಿಸಿರುವ ಎಫ್‌ಐಆರ್‌ಗಳ ರದ್ದು ಕೋರಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಪೀಠದಲ್ಲಿ ಸೋಮವಾರ ನಡೆಯಿತು.
ಅರ್ಜಿ ವಿಚಾರಣೆ ವೇಳೆ ಯಡಿಯೂರಪ್ಪ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿ.ವಿ.ನಾಗೇಶ್ ಅವರು, ಭ್ರಷ್ಟಾಚಾರ ತಡೆ ಕಾಯ್ದೆ ಅಡಿ ಎಸಿಬಿ ರಚಿಸಿ 2016ರ ಮಾರ್ಚ್ 15ರಂದು ರಾಜ್ಯ ಸರಕಾರ ಅಧಿಸೂಚನೆ ಹೊರಡಿಸಿದೆ. ಅದರ ಪ್ರಕಾರ ಸರಕಾರಿ ನೌಕರರ ವಿರುದ್ಧ ಏಕಾಏಕಿ ಎಫ್ಐಆರ್ ದಾಖಲಿಸಲು ನಿರ್ಬಂಧವಿದೆ.
ಯಾವುದೇ ಸರಕಾರಿ ನೌಕರನ ದೂರುಗಳು ದಾಖಲಾದಲ್ಲಿ ಅವನ ವಿರುದ್ಧ ಎಫ್ಐಆರ್ ದಾಖಲಿಸುವ ಮುನ್ನ ನೇಮಕಾತಿ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯವೆಂದು ಸರಕಾರದ ಅಧಿಸೂಚನೆಯಲ್ಲೇ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಹೀಗಿದ್ದರೂ ಈ ಪ್ರಕರಣದಲ್ಲಿ ಅರ್ಜಿದಾರರ ವಿರುದ್ಧ ಯಾವುದೇ ಪೂರ್ವಾನುಮತಿ ಪಡೆಯದೇ ಎಫ್ಐಆರ್ ದಾಖಲಿಸಲಾಗಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಇದುವರೆಗೂ ಎಸಿಬಿಯಲ್ಲಿ ಹಾಲಿ ಮುಖ್ಯಮಂತ್ರಿಗಳೂ ಸೇರಿದಂತೆ ಹಲವು ಸಚಿವರ ವಿರುದ್ಧ 32 ದೂರುಗಳು ದಾಖಲಾಗಿವೆ. ಹ್ಯೂಬ್ಲೊಟ್ ವಾಚ್ ಪ್ರಕರಣ, ಅರ್ಕಾವತಿ ಡಿನೋಟಿಫಿಕೇಶನ್ ಪ್ರಕರಣ, ಅಕ್ರಮ ಗಣಿ ಪರವಾನಗಿ ಹಾಗೂ ಬಿಬಿಎಂಪಿ ಟೆಂಡರ್‌ನಲ್ಲಿ ಅಕ್ರಮಗಳಿಗೆ ಸಂಬಂಧಿಸಿದಂತೆ ಹಲವಾರು ದೂರುಗಳು ದಾಖಲಿಸಲಾಗಿದ್ದರೂ ಈವರೆಗೂ ಒಂದೇ ಒಂದು ಪ್ರಕರಣದಲ್ಲಿಯೂ ಎಫ್ಐಆರ್ ದಾಖಲಿಸಲಾಗಿಲ್ಲ. ಆದರೆ ಅರ್ಜಿದಾರರ ವಿರುದ್ಧ ಮಾತ್ರ ಎಸಿಬಿ ನಿಯಮ ಬಾಹಿರವಾಗಿ ಎ್ಐಆರ್ ದಾಖಲಿಸಿದೆ ಎಂದು ಆಕ್ಷೇಪಿಸಿದರು.