ಸಿದ್ದರಾಮಯ್ಯ ‘ಬೆಂಕಿ ಹಚ್ಚುವ ನಾಯಕ’: ಆರ್.ಅಶೋಕ್ ವಿವಾದಾತ್ಮಕ ಹೇಳಿಕೆ
ಬೆಂಗಳೂರು, ಸೆ. 18: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ರೈತ ನಾಯಕರಾದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಕಿ ಹಚ್ಚುವ ನಾಯಕರಾಗಿದ್ದಾರೆ ಎಂದು ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸೋಮವಾರ ಬೀದರ್‌ನ ಗಣೇಶ ಮೈದಾನದಲ್ಲಿ ಬಿಜೆಪಿ ಏರ್ಪಡಿಸಿದ್ದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದೆ ಸಿದ್ದರಾಮಯ್ಯ ‘ನಿದ್ದೆರಾಮಯ್ಯ’ ಆಗಿದ್ದರು. ಇದೀಗ ಅವರು ಜಾತಿ-ಜಾತಿಗಳ ಮಧ್ಯೆ, ಧರ್ಮ-ಧರ್ಮಗಳ ಮಧ್ಯೆ ಬೆಂಕಿ ಹಚ್ಚುವ ಕೆಲಸದಲ್ಲಿ ತೊಡಗಿದ್ದಾರೆಂದು ಆರೋಪಿಸಿದರು.
ಪ್ರತ್ಯೇಕ ಲಿಂಗಾಯತ ಧರ್ಮದ ಹೆಸರಿನಲ್ಲಿ ಜಾತಿ-ಜಾತಿಯ ಮಧ್ಯೆ ಜಗಳ ಹಚ್ಚಿದ ಸಿದ್ದರಾಮಯ್ಯ, ಹಿಂದಿ ಏರಿಕೆ ಎಂದು ಭಾಷೆ-ಭಾಷೆಯ ಮಧ್ಯೆ ಕಿಚ್ಚು ಹಚ್ಚಿದರು. ಮುಸ್ಲಿಮರಿಗೆ ಮಾತ್ರ ‘ಶಾದಿಭಾಗ್ಯ’ ಯೋಜನೆ ರೂಪಿಸುವ ಮೂಲಕ ಅಲ್ಪಸಂಖ್ಯಾತರ ಓಲೈಕೆ ಮಾಡಿದರು. ಆದರೆ, ಅದೇ ಯೋಜನೆಯನ್ನು ಬಡತನದಲ್ಲಿರುವ ಎಸ್ಸಿ-ಎಸ್ಟಿ, ಓಬಿಸಿಗಳಿಗೆ ಅನುಷ್ಠಾನಗೊಳಿಸಲಿಲ್ಲ ಎಂದು ಟೀಕಿಸಿದರು.
ಒಂದು ಜನಾಂಗದ ವಿರುದ್ಧ ಮತ್ತೊಂದು ಜನಾಂಗ, ಒಂದು ಸಮುದಾಯದ ವಿರುದ್ಧ ಮತ್ತೊಂದು ಸಮುದಾಯವನ್ನು ಎತ್ತಿಕಟ್ಟುವ ಕೆಲಸದಲ್ಲಿ ತೊಡಗಿರುವ ಸಿದ್ದರಾಮಯ್ಯ, ತಮ್ಮ ಜೇಬಿನಲ್ಲಿ ಸದಾ ಬೆಂಕಿ ಪೊಟ್ಟಣವನ್ನು ಇಟ್ಟುಕೊಂಡು ತಿರುಗಾಡುತ್ತಿದ್ದಾರೆಂದು ವಾಗ್ದಾಳಿ ನಡೆಸಿದರು.
ತಪ್ಪು ಮಾಡುವುದಿಲ್ಲ: ಬಿಜೆಪಿ ಆಡಳಿತಾವಧಿಯಲ್ಲಿ ಕೆಲ ತಪ್ಪುಗಳಾಗಿದ್ದು, ಆ ತಪ್ಪುಗಳನ್ನು ಮುಂದಿನ ಅವಧಿಯಲ್ಲಿ ಯಾವುದೇ ಕಾರಣಕ್ಕೂ ಮರುಕಳಿಸದಂತೆ ಎಚ್ಚರ ವಹಿಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಜನತೆಗೆ ಅಭಯ ನೀಡಿದರು.
ರೈತರು, ದಲಿತರು ಮತ್ತು ಬಡವರ ಶ್ರೇಯೋಭಿವೃದ್ಧಿಗಾಗಿ ಬದ್ಧತೆಯಿಂದ ಕೆಲಸ ಮಾಡಲಿದ್ದು, ರಾಜ್ಯದ ಮತದಾರರು ಬಿಜೆಪಿಯನ್ನು ಬೆಂಬಲಿಸಬೇಕು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಸಮಾವೇಶದಲ್ಲಿ ಸಂಸದರಾದ ಶ್ರೀರಾಮುಲು, ಭಗವಂತ್ ಖೂಬಾ, ಶಾಸಕ ಪ್ರಭು ಚೌವ್ಹಾಣ್, ಮೇಲ್ಮನೆ ಸದಸ್ಯ ರಘುನಾಥ್ ರಾವ್ ಮಲ್ಕಾಪುರೆ, ಅರುಣ್ ಪಾಟೀಲ್ ರೇವೂರ ಸೇರಿದಂತೆ ಇನ್ನಿತರ ಗಣ್ಯರು ಹಾಜರಿದ್ದರು.
ಹನ್ನೆರಡನೆ ಶತಮಾನದ ಸಮಾಜ ಸುಧಾರಕ ಬಸವಣ್ಣನವರನ್ನು ನಾವು ನೋಡಿಲ್ಲ. ಆದರೆ, ಇಪ್ಪತ್ತೊಂದನೆ ಶತಮಾನದಲ್ಲಿ ನಮ್ಮ ಕಣ್ಣಿಗೆ ಕಾಣುವ ಯಡಿಯೂರಪ್ಪ ಅವರೆ ಆಧುನಿಕ ಬಸವಣ್ಣ. ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಶಕ್ತಿ ಅವರಿಗೆ ಇದೆ’
-ಬಿ.ಶ್ರೀರಾಮುಲು ಲೋಕಸಭಾ ಸದಸ್ಯ