ಸಮಾಜ ಪ್ರಗತಿಪರವಾಗಿ ಮುಂದೆ ಬರಬೇಕಾದರೆ ಪೆರಿಯಾರ್ ಅವರ ಚಿಂತನೆ ಆದರ್ಶಗಳನ್ನು ಅನುಸರಿಸಬೇಕು: ಡಾ.ಸಿದ್ದಲಿಂಗಯ್ಯ

Update: 2017-09-18 15:58 GMT

ಮೈಸೂರು,ಸೆ.18: ಸಮಾಜ ಪ್ರಗತಿಪರವಾಗಿ ಮುಂದೆ ಬರಬೇಕೆಂದರೆ ಪೆರಿಯಾರ್ ಅವರ ಚಿಂತನೆ, ಆದರ್ಶಗಳನ್ನು ಅನುಸರಿಸಬೇಕು ಎಂದು ಖ್ಯಾತ ಸಾಹಿತಿ ಡಾ.ಸಿದ್ದಲಿಂಗಯ್ಯ ಹೇಳಿದರು.

ಮಾನವ ಬಂಧುತ್ವ ವೇದಿಕೆ ವತಿಯಿಂದ ಪೆರಿಯಾರ್ ಈ.ವಿ.ರಾಮಸ್ವಾಮಿಯವರ 138ನೇ ಜನ್ಮ ದಿನದ ಅಂಗವಾಗಿ ಸೋಮವಾರ ಜಗನ್ಮೋಹನ ಅರಮನೆಯಲ್ಲಿ ಮೌಢ್ಯ ನಿರ್ಮೂಲನಾ ದಿನ-ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪೆರಿಯಾರ್ ಅವರು ಸಮಾಜ ನೆನಪಿಸಿಕೊಳ್ಳಬೇಕಾದ ವ್ಯಕ್ತಿ ಹಾಗೂ ಸ್ಪೂರ್ತಿದಾಯಕವಾಗಿರುವ ವ್ಯಕ್ತಿ. ಅವರ ಚಿಂತನೆಗಳು ಇಂದಿನ ಹೋರಾಟಗಾರರಿಗೆ ಮಾರ್ಗದರ್ಶನ ಮತ್ತು ಪ್ರೇರಣೆಯಾಗಿವೆ ಎಂದರು.

ದೇವರ ಹೆಸರಿನಲ್ಲಿ ಜಾತೀಯತೆ, ಅಸ್ಪಶ್ಯತೆಗಳು ನಡೆಯುತ್ತಿರುವುದು ಅನ್ಯಾಯವೆಂದು, ಇದನ್ನು ತಡೆಗಟ್ಟುವುದು ಪೆರಿಯಾರ್ ಅವರ ಉzಶವಾಗಿತ್ತು. ಜಾತೀಯತೆ ಇಲ್ಲದ ಸಮಾಜ ಕಟ್ಟುವುದು ಅವರ ಕನಸಾಗಿತ್ತು. ಎಂದ ಅವರು, ಮೂಢನಂಬಿಕೆಗಳನ್ನು ತ್ಯಜಿಸಿ ವೈಚಾರಿಕಾ ಯೋಚನೆಗಳನ್ನು ರೂಢಿಸಿಕೊಳ್ಳಬೇಕು. ಅಸ್ಪಶ್ಯತೆ ಮತ್ತು ಅಸಮಾನತೆಗಳನ್ನು ಮನಸ್ಸಿನಿಂದ ತೊಡೆದುಹಾಕುವ ಮೂಲಕ ಸಮ ಸಮಾಜ ನಿರ್ಮಾಣ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ವಸುಂಧರ ಭೂಪತಿ, ವಿಚಾರವಾದಿ ಎ.ಕೆ.ಸುಬ್ಬಯ್ಯ, ವೇದಿಕೆಯ ರಾಜ್ಯ ಸಂಚಾಲಕ ವಿಲ್ಫ್ರೆಡ್ ಡಿಸೋಜಾ, ವಲಯ ಸಂಚಾಲಕ ಜಯಕುಮಾರ, ಭಾರತೀಯ ಕಮ್ಯನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕಲ್ಕುಣಿಕೆ ಬಸವರಾಜು, ಫ್ರೊ.ಕಾಳೇಗೌಡ ನಾಗವಾರ, ಜಿಲ್ಲಾ ಸಂಚಾಲಕ ಎಂ.ಲೋಕೇಶ್, ಮಾಜಿ ಮೇಯರ್ ಪುರುಷೋತ್ತಮ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News