×
Ad

ದಾವಣಗೆರೆ : ಮಹಾನಗರ ಪಾಲಿಕೆ ಮತ್ತು ಬೆಸ್ಕಾಂ ಅಧಿಕಾರಿಗಳ ಸಭೆ

Update: 2017-09-18 22:51 IST
ಶಾಸಕ ಡಾ. ಶಾಮನೂರು ಶಿವಶಂಕರಪ್ಪ

ದಾವಣಗೆರೆ,ಸೆ.18 : ನಗರದಲ್ಲಿ ಸಮರ್ಪಕ ಕುಡಿಯುವ ನೀರು ಪೂರೈಸುವಂತೆ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಗೃಹ ಕಛೇರಿಯಲ್ಲಿ ನಡೆದ ಮಹಾನಗರ ಪಾಲಿಕೆ ಮತ್ತು ಬೆಸ್ಕಾಂ ಅಧಿಕಾರಿಗಳ ಸಭೆಯಲ್ಲಿ ಈ ಸೂಚನೆ ನೀಡಿದರು.

ನಗರಕ್ಕೆ ಪ್ರತಿ ದಿನ 81 ಎಂ.ಎಲ್.ಡಿ. ನೀರಿನ ಅವಶ್ಯಕತೆ ಇದ್ದು, ಇವರೆಗೆ 2ನೇ ಹಂತದ ನೀರು ಸರಬರಾಜು ಕೇಂದ್ರದಿಂದ 36 ಎಂ.ಎಲ್.ಡಿ., ಕುಂದುವಾಡ ಕೆರೆಯಿಂದ 18 ಎಂ.ಎಲ್.ಡಿ.,  ಟಿ.ವಿ. ಸ್ಟೇಷನ್ ಪಂಪ್‍ಹೌಸ್ ನಿಂದ 18 ಎಂ.ಎಲ್.ಡಿ.  ಒಟ್ಟು 72 ಎಂ.ಎಲ್.ಡಿ ನೀರನ್ನು ನಗರದಲ್ಲಿ ವಾರಕ್ಕೆ 2 ಬಾರಿ ನೀರನ್ನು ಸರಬರಾಜು ಮಾಡಲಾಗುತ್ತಿತ್ತು. ಭದ್ರಾ ಜಲಾಶಯದಿಂದ ನಾಲೆಗೆ ನೀರನ್ನು ಹರಿಸದ ಪ್ರಯುಕ್ತ ಟಿ.ವಿ. ಸ್ಟೇಷನ್ ಕೆರೆ ಸಂಪೂರ್ಣ ಖಾಲಿಯಾಗಿ 18 ಎಂ.ಎಲ್.ಡಿ. ನೀರು ಸ್ಥಗಿತಗೊಂಡಿದೆ ಎಂದು ಅಧಿಕಾರಿಗಳು ಶಾಸಕರ ಗಮನ ಸೆಳೆದಾಗ, ಶಾಸಕರು ಭದ್ರಾ ಕಾಡಾ ಅಧ್ಯಕ್ಷರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ನಗರದಲ್ಲಿ ಕುಡಿವ ನೀರಿಗೆ ತೊಂದರೆ ಆಗಿರುವ ಬಗ್ಗೆ ತಿಳಿಸಿ ಭದ್ರಾ ಜಲಾಶಯದಿಂದ ನಾಲೆಗೆ ನೀರು ಹರಿಸುವಂತೆ ಆಗ್ರಹಿಸಿದರು.

ಕಾಡಾ ಸಮಿತಿ ಅಧ್ಯಕ್ಷರು ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಆದಷ್ಟು ಶೀಘ್ರ ನೀರು ಹರಿಸುವ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು. 
ಭದ್ರಾ ಜಲಾಶಯದಲ್ಲಿ ಕೇವಲ 165.3 ಅಡಿ ನೀರು ಸಂಗ್ರಹವಿದ್ದು, ನಾಲೆಗಳಿಗೆ ಡಿಸೆಂಬರ್ ಅಂತ್ಯದವರೆಗೆ ನೀರು ಹರಿಸುವ ಸಾಧ್ಯತೆ ಇಲ್ಲದೇ ಇರುವುದರಿಂದ ತಾತ್ಕಲಿಕ ವ್ಯವಸ್ಥೆ ಮಾಡಿದ್ದಲ್ಲಿ ಮೊದಲಿನ ಹಾಗೆ ವಾರಕ್ಕೆ 2 ದಿನ ನೀರನ್ನು ಸರಬರಾಜು ಮಾಡಬಹುದು ಎಂದರು.

ಸೆಪ್ಟೆಂಬರ್ ತಿಂಗಳಲ್ಲಿ ಮಳೆಯ ಪ್ರಮಾಣ ಜಾಸ್ತಿಯಾಗಿರುವುದರಿಂದ 2ನೇ ಹಂತ ನೀರು ಸರಬರಾಜು ಕೇಂದ್ರದ ಬಾತಿ ಮತ್ತು ರಾಜನಹಳ್ಳಿ ನೀರು ಸರಬರಾಜು ಕೇಂದ್ರಗಳಿಗೆ ಸಮಪರ್ಕವಾಗಿ ವಿದ್ಯುತ್ ಪೂರೈಕೆಯಾಗದೇ ಇರುವ ಬಗ್ಗೆ ಮಹಾನಗರ ಪಾಲಿಕೆ ಅಧಿಕಾರಿಗಳು ತಿಳಿಸಿದರು. 
ಕುಡಿವ ನೀರಿಗೆ ವಿದ್ಯುತ್ ಪೂರೈಕೆಯಲ್ಲಿ ಯಾವುದೇ ತೊಂದರೆ ಮಾಡಬೇಡಿ ಎಂದು ಶಾಸಕರು ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು. 

ಕುಂದುವಾಡ ಕೆರೆಗೆ ನೀರು ಸರಬರಾಜು ಮಾಡಲು ರಾಜನಹಳ್ಳಿ ಜಾಕ್‍ವೆಲ್ ಪಂಪ್‍ಹೌಸ್ ಮತ್ತು ಬಾತಿ ಶುದ್ದನೀರಿನ ಜಲಗಾರ ಕೇಂದ್ರದಲ್ಲಿ ಯಾವುದೇ ಸಣ್ಣ ಪುಟ್ಟ ಸಮಸ್ಯೆಗಳಿದ್ದರೆ ಅವುಗಳನ್ನು ಕೂಡಲೇ ಸರಿಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.

ಈ ಸಂದರ್ಭ ಉಪಮಹಾಪೌರರಾದ ಮಂಜಮ್ಮ ಹನುಮಂತಪ್ಪ, ಸದಸ್ಯರಾದ ದಿನೇಶ್ ಕೆ. ಶೆಟ್ಟಿ, ಮಾಜಿ ಉಪಾಧ್ಯಕ್ಷ ಎ. ನಾಗರಾಜ್, ಅಧೀಕ್ಷಕ ಅಭಿಯಂತರ ಎಂ. ಸತೀಶ್, ಕಾರ್ಯಪಾಲಕ ಅಭಿಯಂತರ ಜಿ. ಭೀಮಾನಾಯ್ಕ, ಸಹಾಯಕ ಕಾರ್ಯಪಾಲಕ ಅಭಿಯಂತರುಗಳಾದ ಕೆ.ಎಂ. ಮಂಜುನಾಥ್, ಕೆ.ಎನ್. ತಿರ್ಥೇಶ್, ಲೋಹಿತ್ ಕುಮಾರ್, ಅಭಿಯಂತರುಗಳಾದ ಆರ್. ಚಂದ್ರಶೇಖರ್, ಜಿ.ಪ್ರಕಾಶ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News