×
Ad

ತುಮಕೂರು ನಗರಕ್ಕೆ ಕುಡಿಯುವ ನೀರು ಹರಿಸುವಲ್ಲಿ ಜಿಲ್ಲಾಡಳಿತ ವಿಫಲ

Update: 2017-09-18 23:16 IST

ತುಮಕೂರು.ಸೆ.18:ಮುಖ್ಯಮಂತ್ರಿಗಳು ಮತ್ತು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆಯ ನಿರ್ಣಯದಂತೆ ಬುಗುಡನಹಳ್ಳಿ ಕೆರೆಗೆ ನೀರು ಹರಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದ್ದು,ಬುಧವಾರದೊಳಗೆ ಬುಗುಡನಹಳ್ಳಿ ಕೆರೆಗೆ ನೀರು ಹರಿಸದಿದ್ದಲ್ಲಿ,ಗುರುವಾರದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಶಾಸಕ ಡಾ.ರಫಿಕ್ ಅಹಮದ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಕಳೆದ ಒಂದು ತಿಂಗಳಿನಿಂದ ಜಿಲ್ಲೆಗೆ ಹೇಮಾವತಿ ನೀರು ಹರಿಯುತ್ತಿದೆ. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಗೆ ಕುಡಿಯುವ ಉದ್ದೇಶಕ್ಕಾಗಿ ಮಾತ್ರ 4.5 ರಿಂದ 5 ಟಿ.ಎಂ.ಸಿ ನೀರು ಹರಿಸುವುದು.ನಾಲೆಯ ಕೊನೆಯ ಭಾಗದಿಂದ ನೀರು ಹರಿಸುವಂತೆ ನಿರ್ಣಯ ಕೈಗೊಳ್ಳಲಾಗಿತ್ತು.ಅಲ್ಲದೆ ಅಗಸ್ಟ್ ತಿಂಗಳಿನಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಜಿಲ್ಲೆಯ ಶಾಸಕರ ಸಭೆಯಲ್ಲಿಯೂ ಈ ಬಗ್ಗೆ ಚರ್ಚೆ ನಡೆಸಿ ಎಲ್ಲರ ಸಹಕಾರ ಕೋರಿದ್ದರು.ಆದರೆ ಇದುವರೆಗೂ ತುಮಕೂರು ನಗರಕ್ಕೆ ಅಗತ್ಯವಿರುವ ನೀರು ಹರಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ.ಪ್ರಮುಖವಾಗಿ ಹೇಮಾವತಿ ನಾಲಾ ವಲಯದ ಅಧಿಕಾರಿಗಳು ನಿರ್ಲಕ್ಷ ವಹಿಸಿದ್ದರಿಂದ ತುಮಕೂರು ನಗರಕ್ಕೆ ಅಗತ್ಯವಿರುವ ನೀರು ತುಂಬಿಸಲು ಸಾಧ್ಯವಾಗಿಲ್ಲ ಎಂದರು.

ಜಿಲ್ಲಾಧಿಕಾರಿಗಳ ಸಭೆಯಲ್ಲಿ ತುಮಕೂರು ನಗರಕ್ಕೆ ನೀರು ಸರಬರಾಜು ಮಾಡುವ ಬುಗುಡನಹಳ್ಳಿ ಕೆರೆಗೆ 400 ಎಂ.ಸಿ.ಎಫ್.ಟಿ.ನೀರು ನಿಗಧಿಪಡಿಸಲಾಗಿತ್ತು.ಇದುವರೆಗೂ ಹೇಮಾವತಿ ನಾಲಾ ವಲಯದ ಅಧಿಕಾರಿಗಳ ಪ್ರಕಾರ 180 ಎಂ.ಸಿ.ಎಫ್.ಟಿ.ನೀರು ಹರಿದರೆ,ನಗರಪಾಲಿಕೆ ಪಾಧಿಕಾರಿಗಳ ಪ್ರಕಾರ 140 ಎಂ.ಸಿ.ಎಫ್.ಟಿ.ನೀರು ಹರಿದಿದೆ.ಇದರಲ್ಲಿ ಸುಮಾರು 25 ಎಂ.ಸಿ.ಎಫ್.ಟಿ. ನೀರನ್ನು ಕಳೆದ ಒಂದು ತಿಂಗಳಿನಿಂದ ನಗರಕ್ಕೆ ಸರಬರಾಜು ಮಾಡಿದ್ದು, ಕೇವಲ 100-120 ಎಂ.ಸಿ.ಎಫ್.ಟಿ ನೀರು ಮಾತ್ರ ಬುಗುಡನಹಳ್ಳಿ ಕೆರೆಯಲ್ಲಿದೆ.ಈ ನೀರು ಮುಂದಿನ ಮುಂದಿನ ನಾಲ್ಕು ತಿಂಗಳಿಗೆ ಮಾತ್ರ ಸಾಕಾಗುತ್ತದೆ.ಆದ್ದರಿಂದ ನಮಗೆ ನಿಗಧಿ ಪಡಿಸಿದ 400 ಎಂ.ಸಿ.ಎಫ್.ಟಿ ನೀರು ತುಂಬಿಸುವುದು ಜಿಲ್ಲಾಢಳಿತದ ಕರ್ತವ್ಯವಾಗಿದೆ. ಈಗಾಗಲೇ ಜಿಲ್ಲಾಧಿಕಾರಿಗಳು ಬುಧವಾರದಿಂದ ನೀರು ಹರಿಸುವ ಭರವಸೆ ನೀಡಿದ್ದಾರೆ ಎಂದು ಶಾಸಕ ಡಾ.ರಫೀಕ್ ಅಹಮದ್ ತಿಳಿಸಿದರು.

ಪ್ರಸುತ್ತ ಜಿಲ್ಲೆಗೆ ಕಳೆದ ಒಂದು ತಿಂಗಳಿನಿಂದ 1226 ಎಂ.ಸಿ.ಎಫ್.ಟಿ ನೀರು ಹರಿದಿದ್ದು,ಇದರಲ್ಲಿ 727 ಎಂ.ಎಸಿ.ಎಫ್.ಟಿ ನೀರನ್ನು ಕೃಷಿ ಉದ್ದೇಶದ ಕೆರೆಗಳಿಗೆ ತುಂಬಿಸಲಾಗಿದೆ.ಶೇ30ರಷ್ಟು ನೀರನ್ನು ಮಾತ್ರ ಕುಡಿಯುವ ನೀರಿನ ಕೆರೆಗಳಿಗೆ ಹರಿಸಲಾಗಿದೆ.ನಿಯಮ ಬಾಹಿರವಾಗಿ ನಾಲೆಯ ಮೇಲ್ಭಾಗದ ಜನಪ್ರತಿನಿಧಿಗಳು ಮತ್ತು ರೈತರು ನೀರನ್ನು ಅನ್ಯ ಉದ್ದೇಶ ಗಳಿಗೆ ಹರಿಸಿದ್ದು,ಇದನ್ನು ತಡೆಯುವಲ್ಲಿ ಹೇಮಾವತಿ ನಾಲಾವಲಯದ ಅಧಿಕಾರಿಗಳು,ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ.ಜಿಲ್ಲಾಧಿಕಾರಿಗಳು ನಾಲೆಯ ಮೇಲೆ ವಿಧಿಸಿದ್ದ 144 ಸೆಕ್ಷನ್ ಸಹ ಪ್ರಯೋಜನಕ್ಕೆ ಬಾರದಾಗಿದೆ ಎಂದರು.

ನೀರು ಪೋಲಾಗುತ್ತಿರುವುದರ ಬಗ್ಗೆ ಸತ್ಯಾಸತ್ಯತೆ ತಿಳಿಯಲು ಶನಿವಾರ ಸಂಜೆ ಸುಮಾರು 30 ಕಿ.ಮಿ. ದೂರು ನಾಲೆಯ ಮೇಲೆ ಪ್ರಯಾಣಿಸಿದ್ದು, ರೈತರು ಕಾನೂನು ಬಾಹಿರವಾಗಿ ನೂರಾರು ಮೋಟಾರು ಪಂಪುಗಳನ್ನು ಅಳವಡಿಸಿಕೊಂಡು ತಮ್ಮ ತೋಟ ತುಡಿಕೆಗಳಿಗೆ ನೀರು ಹರಿಸಿಕೊಳ್ಳುತ್ತಿದ್ದಾರೆ.ಇದಕ್ಕೆ ಕಡಿವಾಣ ಹಾಕಬೇಕೆಂಬುದು ನಮ್ಮ ಒತ್ತಾಯವಾಗಿದೆ. ಈ ನಿಟ್ಟಿನಲ್ಲಿ ಇಂದು ಹೇಮಾವತಿ ನಾಲಾ ವಲಯದ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳಿಗೆ ನಗರಪಾಲಿಕೆಯ ಎಲ್ಲಾ ಸದಸ್ಯರೊಂದಿಗೆ ಮನವಿ ಸಲ್ಲಿಸಲಾಗುವುದು ಎಂದು ಶಾಸಕರು ತಿಳಿಸಿದರು.

ನಾಲೆಯ ಮೇಲ್ಬಾಗದಲ್ಲಿರುವ ಶಾಸಕರು,ರೈತರುಗಳಿಗೆ ನನ್ನ ಮನವಿ ಇಷ್ಟೇ,ನಿಮ್ಮ ಮಕ್ಕಳು,ನೆಂಟರಿಷ್ಟರು,ಸಂಬಂಧಿಕರು ತುಮಕೂರು ನಗರದಲ್ಲಿ ವಾಸವಿದ್ದಾರೆ.ಅವರುಗಳಿಗೂ ಕುಡಿಯುವ ನೀರಿನ ಅಗತ್ಯವಿದೆ.ಸತತ ಬರದಿಂದ ನಗರದಲ್ಲಿ ನೀರಿಲ್ಲದೆ ಜನರು ತತ್ತರಿಸಿದ್ದಾರೆ.ತುಮಕೂರು ನಗರಕ್ಕೆ ಕುಡಿಯುವ ನೀರು ಹರಿಸಲು ಸಹಕಾರ ನೀಡಿ, ರೈತರನ್ನು ಅನಗತ್ಯವಾಗಿ ಪ್ರಚೋದಿಸಬೇಡಿ ಎಂದರು.

ಸುದ್ದಿಗೋಷ್ಠಿಯಲ್ಲಿ ಮೇಯರ್ ರವಿಕುಮಾರ್,ವಿವಿಧ ಸ್ಥಾಯಿಸಮಿತಿ ಸದಸ್ಯರಾದ ಟಿ.ಹೆಚ್.ವಾಸುದೇವ್, ನಾಗರಾಜರಾವ್, ನಯಾಜ್ ಅಹಮದ್,ಎಂ.ಪಿ.ಮಹೇಶ್, ಎನ್.ಮಹೇಶ್,ಪ್ರೆಸ್ ರಾಜಣ್ಣ, ರಾಮಕೃಷ್ಣಪ್ಪ, ಧನಲಕ್ಷ್ಮಿ ರವಿ, ಲಲಿತಾ ರವೀಶ್, ಆಟೋ ರಾಜು ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News