ರಸ್ತೆ ಕಾಮಗಾರಿಗೆ ಚಾಲನೆ
ತುಮಕೂರು,ಸೆ.18:ತುಮಕೂರು ಮಹಾನಗರಪಾಲಿಕೆ ವ್ಯಾಪ್ತಿಯ ಮರಳೂರುದಿಣ್ಣೆ 29ನೇ ವಾರ್ಡಿನ 6 ಕ್ರಾಸ್‍ಗಳ ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕಾಗಿ ರೂ. 2 ಕೋಟಿ ವೆಚ್ಚದ ರಸ್ತೆ ಕಾಮಗಾರಿಗಳಿಗೆ ತುಮಕೂರು ನಗರ ಶಾಸಕರಾದ ಡಾ: ಎಸ್. ರಫೀಕ್ ಅಹಮ್ಮದ್ ಇಂದು ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು,ಮಹಾನಗರಪಾಲಿಕೆಯ 29ನೇ ವಾರ್ಡಿನಲ್ಲಿ ವಾಸಿಸುವ ಜನರು ಅತ್ಯಂತ ಶೋಚನೀಯವಾದ ಪರಿಸ್ಥಿತಿಯಲ್ಲಿ ವಾಸ ಮಾಡುತ್ತಿದ್ದು, ಈ ಜನರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ದಿಸೆಯಲ್ಲಿ ಕರ್ನಾಟಕ ಸರಕಾರದ ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ 3100 ಮೀ.ಉದ್ದದ 6 ಕ್ರಾಸ್‍ಗಳ ರಸ್ತೆಗಳನ್ನು ಪೂರ್ಣ ಕಾಂಕ್ರಿಟ್‍ನಿಂದ ನಿರ್ಮಿಸಲಾಗುತ್ತಿದ್ದು,ಇದರ ಜೊತೆಯಲ್ಲಿ ಈ ಭಾಗದ ಜನರಿಗೆ ಒಳಚರಂಡಿ ವ್ಯವಸ್ಥೆಯನ್ನೂ ಸಹ ಕೈಗೊಳ್ಳಲಾಗುವುದೆಂದು ಶಾಸಕರು,ಈ ಕಾಮಗಾರಿಗಳನ್ನು ಇನ್ನು 15 ದಿನಗಳೊಳಗಾಗಿ ಆರಂಭಿಸಿ, ಡಿಸೆಂಬರ್ ಅಂತ್ಯಕ್ಕೆ ಪೂರ್ಣಗೊಳಿಸಲು ಕೊಳಚೆ ನಿರ್ಮೂಲನಾ ಮಂಡಳಿಯ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.
ಈ ಭಾಗದಲ್ಲಿ ಸುಮಾರು 2000 ಮನೆಗಳಿದ್ದು,ಅಧಿಕೃತವಾಗಿ ನೀರಿನ ಶುಲ್ಕ ಮತ್ತು ಮಹಾನಗರಪಾಲಿಕೆಗೆ ಕಂದಾಯ ಪಾವತಿಸುತ್ತಿರುವವರು ಕೇವಲ 300 ಮನೆಗಳು ಮಾತ್ರ.ಇನ್ನುಳಿದವರು ಯಾವುದೇ ರೀತಿಯಾದ ಶುಲ್ಕಗಳನ್ನು ಮಹಾನಗರಪಾಲಿಕೆಗೆ ಪಾವತಿಸುತ್ತಿಲ್ಲ.ಆದರೂ ಸಹ 2000 ಮನೆಗಳಿಗೂ 24*7 ಪದ್ಧತಿಯಲ್ಲಿ ಕುಡಿಯುವ ನೀರನ್ನು ಸರಬರಾಜು ಮಾಡಲು ಶಾಸಕರು ಅಧಿಕಾರಿಗಳಿಗೆ ಸೂಚಿಸಿದ್ದಲ್ಲದೆ,ಅನಧಿಕೃತವಾಗಿ ನೀರಿನ ಸಂಪರ್ಕವನ್ನು ಪಡೆದಿರುವವರ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಮೊಕದ್ದಮೆಗಳನ್ನು ಹೂಡುವುದು ಹಾಗೂ ಅನಧಿಕೃತ ನೀರಿನ ಸಂಪರ್ಕಗಳನ್ನು ಕಡಿತಗೊಳಿಸುವಂತೆ ಶಾಸಕರು ಅಧಿಕಾರಿಗಳಿಗೆ ಖಡಕ್ ಸೂಚನೆಗಳನ್ನು ನೀಡಿದರು.
ಕೊಳಚೆ ನಿರ್ಮೂಲನಾ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಮಹೇಂದ್ರ ಹಾಗೂ ಸಹಾಯಕ ಇಂಜಿನಯರ್ ಷಣ್ಮುಖಪ್ಪ,ಪಾಲಿಕೆಯ ಸದಸ್ಯರು ಹಾಜರಿದ್ದರು.