×
Ad

ಪರಿಸರ ಸ್ವಚ್ಛವಾಗಿಟ್ಟುಕೊಳ್ಳಲು ಜಿಲ್ಲಾ ಪಂಚಾಯತ್ ಅಧ್ಯಕ್ಷರ ಕರೆ

Update: 2017-09-18 23:24 IST

ಚಿಕ್ಕಮಗಳೂರು, ಸೆ.18: ಪ್ರತಿಯೊಬ್ಬರು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡು ಸಾಂಕ್ರಾಮಿಕ ರೋಗಗಳಿಂದ ದೂರವಿರುವಂತೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಚೈತ್ರಶ್ರೀ ಮಾಲತೇಶ್ ಕರೆ ನೀಡಿದರು.

 ಅವರು ಸೋಮವಾರ ಕಡೂರು ತಾಲೂಕು ಕೆಳಸಂತೆ ಗ್ರಾಪಂ ವ್ಯಾಪ್ತಿಯ ಅಂಚೆ ಚೋಮನ ಹಳ್ಳಿಯಲ್ಲಿ ಗ್ರಾಮ ವಾಸ್ತವ್ಯ ಸಂಬಂಧ ವಿವಿಧ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಕಾಪಾಡಿಕೊಳ್ಳದಿದ್ದರೆ ಸೊಳ್ಳೆಗಳು ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗಗಳಾದ ಚಿಕನ್ ಗುನ್ಯಾ, ಮಲೇರಿಯಾ, ಡೇಂಗ್ಯೂ ಹರಡುವಿಕೆಗೆ ಕಾರಣವಾಗುತ್ತದೆ. ಪ್ರತಿಯೊಬ್ಬರು ತಮ್ಮ ಬೀದಿ, ಗ್ರಾಮಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವ ಸಂಬಂಧ ಎಲ್ಲರು ಕೈಜೋಡಿಸಬೇಕು ಇದು ನಮ್ಮ ಕೆಲಸವಲ್ಲ ಎಂದು ಭಾವಿಸಬಾರದು ಎಂದರು.

ಜಿಲ್ಲ್ಲೆಯನ್ನು ಬಯಲು ಮಲಮುಕ್ತ ಜಿಲ್ಲ್ಲೆಯನ್ನಾಗಿ ಅ.2 ರಂದು ಘೋಷಿಸುವ ಸಂಬಂಧ ಈಗಾಗಲೇ ಜಿಲ್ಲೆಯ ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ, ಚಿಕ್ಕಮಗಳೂರು ತಾಲ್ಲೂಕುಗಳಲ್ಲಿ ಬಹುತೇಕ ಶೌಚಾಲಯಗಳು ಪೂರ್ಣಗೊಂಡಿದ್ದು, ಕಡೂರು ತಾಲ್ಲ್ಲೂಕಿನಲ್ಲಿ 2800, ತರೀಕೆರೆ ತಾಲ್ಲೂಕಿನಲ್ಲಿ 800 ಕುಟುಂಬಗಳು ಶೌಚಾಲಯ ನಿರ್ಮಿಸಿಕೊಳ್ಳಬೇಕಾಗಿದೆ. 

  ಪ್ರತಿಯೊಬ್ಬರು ಶೌಚಾಲಯ ನಿರ್ಮಿಸಿಕೊಳ್ಳಬೇಕು ಬಯಲಿನಲ್ಲಿ ಮಲ ವಿಸರ್ಜನೆ ಮಾಡುವುದರಿಂದ ಬ್ಯಾಕ್ಟೀರಿಯಾಗಳು ಸೃಷ್ಠಿಯಾಗುತ್ತವೆ. ಈ ಬ್ಯಾಕ್ಟೀರಿಯಗಳು ನಾವು ತಿನ್ನುವ ಪದಾರ್ಥಗಳ ಮೇಲೆ ಬಂದು ಕೂರುತ್ತವೆ. ಈ ರೀತಿ ಆದಾಗ ರೋಗ ಹರಡಲು ಕಾರಣವಾಗುತ್ತದೆ ಆದ್ದರಿಂದ ಪ್ರತಿಯೊಬ್ಬರು ತಮ್ಮ ಮನೆಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಿಕೊಳ್ಳುವ ಮೂಲಕ ಶೌಚಾಲಯಗಳನ್ನು ಉಪಯೋಗಿಸಿ ಸ್ವಚ್ಛತೆಯನ್ನು ಕಾಪಾಡಬೇಕು ಎಂದು ಹೇಳಿದರು.

  ಗ್ರಾಮ ವಾಸ್ತವ್ಯ ಮಾಡುವುದರಿಂದ ಆ ಗ್ರಾಮಗಳ ಸಮಸ್ಯೆಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆಯಲ್ಲದೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದ ಅವರು, ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟದ, ತಾಲ್ಲೂಕು ಮಟ್ಟದ ಹಾಗೂ ಕ್ಷೇತ್ರ ಮಟ್ಟದ ಅಧಿಕಾರಿಗಳು ಹಾಜರಿದ್ದು ಸಮಸ್ಯೆಗಳ ಪರಿಹಾರಕ್ಕೆ ಅನುಕೂಲವಾಗುತ್ತದೆ ಎಂದರು. ಕಾರ್ಯಕ್ರಮಕ್ಕೂ ಮೊದಲು ಸ್ವಚ್ಛತೆ, ಶೌಚಾಲಯ ನಿರ್ಮಾಣ, ಕುಟುಂಬ ಕಲ್ಯಾಣ ಯೋಜನೆ ಸೇರಿದಂತೆ ಜಾಗೃತಿ ಮೂಡಿಸುವ ಬಿತ್ತಿ ಫಲಕಗಳೊಂದಿಗೆ ಜಾಥಾಕ್ಕೆ ಅಧ್ಯಕ್ಷರು ಚಾಲನೆ ನೀಡಿದರು.

ಜನಸಂಪರ್ಕ ಸಭೆ, ಕ್ರೀಡೆ, ಸ್ವಚ್ಛತೆ ಆರೋಗ್ಯದ ಕುರಿತು ಅರಿವು ಮೂಡಿಸಲು ತೊಗಲು ಗೊಂಬೆಯಾಟ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಕಡೂರು ಗ್ರಾಪಂ ಅಧ್ಯಕ್ಷೆ ರೇಣುಕಾ ಉಮೇಶ್, ಕೆಳಸಂತೆ ಗ್ರಾಪಂ ಅಧ್ಯಕ್ಷ ರವಿನಾಯಕ್, ಜಿಪಂ ಉಪಕಾರ್ಯದರ್ಶಿ ರಾಜ್‍ಗೋಪಾಲ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಮಂಜುನಾಥ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಬಸವರಾಜಯ್ಯ ಹಾಗೂ ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಪೂರ್ಣಿಮಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News