×
Ad

ಉತ್ತರ ಕರ್ನಾಟಕದಿಂದ ಸ್ಪರ್ಧೆಯಿಲ್ಲ: ಸಿಎಂ ಸಿದ್ದರಾಮಯ್ಯ

Update: 2017-09-19 20:00 IST

ಕಲಬುರಗಿ, ಸೆ.19: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಯಲು ನನಗೆ ನನ್ನದೆ ಆದ ಕ್ಷೇತ್ರವಿದೆ. ನನ್ನ ಕ್ಷೇತ್ರವನ್ನು ಬಿಟ್ಟು ಬೇರೆ ಎಲ್ಲೂ ಹೋಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ಮಂಗಳವಾರ ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕದಿಂದ ಕಣಕ್ಕಿಳಿಯುವಂತೆ ಕಾರ್ಯಕರ್ತರು ಅಭಿಮಾನದಿಂದ ಕರೆಯುತ್ತಿದ್ದಾರೆ. ಆದರೆ, ನನ್ನ ಕ್ಷೇತ್ರವನ್ನು ಬಿಟ್ಟು ಬೇರೆ ಕಡೆ ಸ್ಪರ್ಧಿಸುವುದಿಲ್ಲ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸಂಸದರಾಗಿದ್ದು, ಅವರು ಈ ಹಿಂದೆ ಪ್ರತಿನಿಧಿಸುತ್ತಿದ್ದ ಶಿಕಾರಿಪುರ ಕ್ಷೇತ್ರವನ್ನು ಮಗನಿಗೆ ಬಿಟ್ಟುಕೊಟ್ಟಿದ್ದಾರೆ. ಈಗ ಅವರಿಗೆ ಯಾವ ಕ್ಷೇತ್ರವೂ ಇಲ್ಲ. ಹಾಗಾಗಿ, ಅನುಕೂಲಕರವಾದ ಕ್ಷೇತ್ರವನ್ನು ಹುಡುಕಿಕೊಂಡು ಉತ್ತರ ಕರ್ನಾಟಕದತ್ತ ಹೊರಟಿದ್ದಾರೆ ಎಂದು ಹೇಳಿದರು.

ಉತ್ತರ ಕರ್ನಾಟಕ ಭಾಗದಲ್ಲಿ ಯಡಿಯೂರಪ್ಪ ಸ್ಪರ್ಧಿಸುವುದರಿಂದ ಕಾಂಗ್ರೆಸ್ ಪಕ್ಷದ ಮೇಲೆ ಯಾವ ಪರಿಣಾಮವು ಬೀರುವುದಿಲ್ಲ. ಬಿಜೆಪಿಗೂ ಯಾವುದೆ ರೀತಿಯಲ್ಲಿ ಲಾಭವಾಗುವುದಿಲ್ಲ ಎಂದ ಅವರು, ನಾನು ಈ ಹಿಂದೆ ಲೋಕಸಭೆ ಚುನಾವಣೆಗಾಗಿ ಕೊಪ್ಪಳದಿಂದ ಸ್ಪರ್ಧಿಸಿದ್ದೆ. ಆದರೆ, ಈಗ ವಿಧಾನಸಭೆ ಚುನಾವಣೆಗೆ ಕೊಪ್ಪಳ ಅಥವಾ ಬೇರೆ ಕ್ಷೇತ್ರಗಳಿಂದ ಸ್ಪರ್ಧೆ ಮಾಡುವ ಅಗತ್ಯವಿಲ್ಲ. ನನಗೆ ನನ್ನದೇ ಆದ ಮತ ಕ್ಷೇತ್ರವಿರುವುದರಿಂದ ಅಲ್ಲಿಂದಲೆ ಸ್ಪರ್ಧಿಸುತ್ತೇನೆ ಎಂದು ಮುಖ್ಯಮಂತ್ರಿ ಪುನರುಚ್ಚರಿಸಿದರು.

ಕೇಂದ್ರ ಸರಕಾರವು ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ, ಸಿಬಿಐ ಸೇರಿದಂತೆ ಹಲವು ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ರಾಜ್ಯ ಸರಕಾರ ಯಾವ ಮುಖಂಡರ ದೂರವಾಣಿ ಕರೆಗಳನ್ನು ಕದ್ದಾಲಿಕೆ ಮಾಡುತ್ತಿಲ್ಲ. ಅದೇನಿದ್ದರೂ ಬಿಜೆಪಿಯವರ ಕೆಲಸ. ಈ ವಿಚಾರದಲ್ಲಿ ಪ್ರತಿಪಕ್ಷಗಳ ಮುಖಂಡರು ನಮ್ಮ ವಿರುದ್ಧ ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾದದ್ದು ಎಂದರು.

ವೀರಶೈವ-ಲಿಂಗಾಯತರ ನಡುವೆ ಬೆಂಕಿ ಹಚ್ಚಿದ್ದು ಮುಖ್ಯಮಂತ್ರಿ ಎಂದು ಆರೋಪಿಸಿರುವ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪಗೆ ತಿರುಗೇಟು ನೀಡಿದ ಅವರು, ಈಶ್ವರಪ್ಪಗೆ ತಲೆಯಿಲ್ಲ. ಆದುದರಿಂದ, ಮನಸ್ಸಿಗೆ ಬಂದಂತೆ ಮಾತನಾಡುತ್ತಾರೆ ಎಂದರು.

ಕಲಬುರಗಿ ಉತ್ತರ ಕ್ಷೇತ್ರದ ಶಾಸಕ ಖಮರುಲ್ ಇಸ್ಲಾಮ್ ಅಗಲಿಕೆಯಿಂದ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ನಷ್ಟವಾಗಿದೆ. ಮೃತರ ಆತ್ಮಕ್ಕೆ ಶಾಂತಿ ದೊರಕಲಿ, ಅವರ ಕುಟುಂಬ ವರ್ಗಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಮುಖ್ಯಮಂತ್ರಿ ಪ್ರಾರ್ಥಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News