ಹುಳಿಯಾರು: ಬಿಜೆಪಿ ಸ್ಥಾನೀಯ ಬೂತ್ ಸಮಾವೇಶ
ಹುಳಿಯಾರು, ಸೆ.19: ಚಿಕ್ಕನಾಯ್ಕನಹಳ್ಳಿ ವಿಧಾನ ಸಭಾ ಕ್ಷೇತ್ರದಿಂದ ಬಿಜೆಪಿಯು ನಮ್ಮಿಬ್ಬರಲ್ಲಿ ಯಾರಿಗೆ ಟಿಕೆಟ್ ಕೊಟ್ಟರೂ ಗೆಲುವಿಗಾಗಿ ಒಗ್ಗಟ್ಟಿನ ಹೋರಾಟ ಮಾಡುವುದಾಗಿ ಮಾಜಿ ಶಾಸಕರಾದ ಕೆ.ಎಸ್.ಕಿರಣ್‍ಕುಮಾರ್, ಜೆ.ಸಿ.ಮಾಧುಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಹಂದನಕೆರೆ ಹೋಬಳಿ ದೊಡ್ಡ ಎಣ್ಣೇಗೆರೆಯಲ್ಲಿ ಆಯೋಜಿಸಿದ್ದ ಬಿಜೆಪಿ ಸ್ಥಾನೀಯ ಬೂತ್ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಶಾಸಕ ಕೆ.ಎಸ್. ಕಿರಣ್ ಕುಮಾರ್, ಕ್ಷೇತ್ರದಲ್ಲಿ ನೀರಿನ ಸಮಸ್ಯೆ ತೀರ್ವವಾಗಿದ್ದು ಹೇಮಾವತಿ ನೀರು ಹರಿಸಿದರೆ ಮಾತ್ರ ಈ ಭಾಗದ ಜನ ಜಾನುವಾರು ಉಳಿಯಲು ಸಾಧ್ಯವಾಗುತ್ತದೆ. ಆದರೆ ಹಿಂದಿನ ಬಿಜೆಪಿ ಸರಕಾರ ಮಂಜೂರು ಮಾಡಿ 106 ಕೋಟಿ ರೂ. ಬಿಡುಗಡೆ ಮಾಡಿದರೂ ಹೇಮೆದಿಂದ ನೀರು ಹರಿಸಲು ಸಾಧ್ಯವಾಗಿಲ್ಲ ಎಂದರು.
ಮತ್ತೊಮ್ಮೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದರೆ ಮಾತ್ರ ಹೇಮೆ ಈ ಭಾಗಕ್ಕೆ ನೀರು ಹರಿಯುತ್ತದೆ. ಈ ನಿಟ್ಟಿನಲ್ಲಿ ಇಲ್ಲಿ ಬಿಜೆಪಿ ಗೆಲ್ಲುವುದು ಅನಿವಾರ್ಯವಾಗಿದ್ದು, ಕ್ಷೇತ್ರಕ್ಕೆ ಹೇಮೆ ಹರಿಸುವ ದೃಷ್ಟಿಯಿಂದ ಜೆ.ಸಿ.ಮಾಧುಸ್ವಾಮಿ ಹಾಗೂ ನಾವು ವೈಯಕ್ತಿಕ ಭಿನ್ನಾಭಿಪ್ರಾಯ ಕೈ ಬಿಟ್ಟು ಯಾರಿಗೆ ಟಿಕೆಟ್ ಕೊಟ್ಟರೂ ಒಗ್ಗಟ್ಟಿನಿಂದ ಹೋರಾಡುತ್ತೇವೆ ಎಂದರು.
ಮತ್ತೋರ್ವ ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪರವರು ಹೇಳಿದಂತೆ ನಾವು ನಡೆಯಲು ಸಿದ್ಧರಿದ್ದೇವೆ. ಈಗಾಗಲೇ ಕೆ.ಎಸ್.ಕಿರಣ್‍ಕುಮಾರ್ ಹಾಗೂ ನಾವೂ ಒಟ್ಟಿಗೆ ಯಡಿಯೂರಪ್ಪ ಅವರೊಂದಿಗೆ ಮಾತುಕತೆ ನಡೆಸಿದ್ದು, ಯಾರಿಗೆ ಟಿಕೆಟ್ ಕೊಟ್ಟರೂ ಸ್ವಾಗತಿಸುವುದಾಗಿ ತಿಳಿಸಿದ್ದೇವೆ ಕಾರ್ಯಕರ್ತರು ಯಾವುದೇ ಗೊಂದಲಕ್ಕೆ ಒಳಗಾಗಬಾರದು. ಕ್ಷೇತ್ರದಲ್ಲಿ ನನ್ನ ಸೇವೆಯನ್ನು ಬಿಟ್ಟರೆ ಬೇರೆ ಯಾವುದೇ ಸೇವೆ ಇಲ್ಲಿ ಆಗಿಲ್ಲ. ಸರಕಾರಿ ಆಸ್ಪತ್ರೆ, ಕಾಲೇಜು ಕಟ್ಟಡ, ಪವರ್ ಸ್ಟೇಷನ್ ಎಲ್ಲವೂ ನಾನು ಶಾಸಕರಾಗಿದ್ದಾಗ ಮಾಡಿದ್ದು, ತಾಲೂಕಿನಿಂದ ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಬಿಜೆಪಿ ಗೆಲ್ಲಲೇಬೇಕಿದೆ ಎಂದು ತಿಳಿಸಿದರು..
ಕಾರ್ಯಕ್ರಮದಲ್ಲಿ ತಾಲೂಕು ಭಾಜಪ ಅಧ್ಯಕ್ಷ ಶಶಿಧರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಪಾಧ್ಯಕ್ಷ ಶಂಕರಲಿಂಗಯ್ಯ, ತಾಪಂ ಸದಸ್ಯ ಕೇಶವಮೂರ್ತಿ, ಹರ್ಷ, ಪ್ರಧಾನ ಕಾರ್ಯದರ್ಶಿ ನಿರಂಜನಮೂರ್ತಿ, ಗ್ರಾಪಂ ಅಧ್ಯಕ್ಷೆ ಗೀತಾ, ಮಾಜಿ ತಾಪಂ ಸದಸ್ಯ ಕೆಂಕೆರೆನವೀನ್, ಡಿ.ಎಂ.ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.